ಸಂಸ್ಕೃತಿಯ ತಾಯಿಬೇರುಗಳ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳದಂತೆ, ಸಾಂಸ್ಕೃತಿಕ ಅಸ್ಮಿತೆಯ ಅರಿವಿನೊಂದಿಗೆ ಮಕ್ಕಳಲ್ಲಿ ಬದುಕಿನ ಕಷ್ಟಗಳು ಮತ್ತು ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸಬೇಕು ಎಂದು ಸಿದ್ಧಾಪುರ ಎಸ್.ಜೆ. ಪಿ.ಯು. ಕಾಲೇಜಿನ ಪ್ರಾಂಶುಪಾಲ ಅಮರೇಶ್ ಹೆಗ್ಡೆ ಹೇಳಿದರು.
ಅವರು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಶಿಕ್ಷಕ-ರಕ್ಷಕ ಮಹಾಸಭೆ ಹಾಗೂ ವಿದ್ಯಾರ್ಥಿಗಳ ಜನಪದ ಆಹಾರಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ನಿಜವಾದ ಕೊಂಡಿಯಾದ ಪೋಷಕರಿಗೆ ಶಿಕ್ಷಣ ಸಂಸ್ಥೆಗಳ ಜೀವಂತಿಕೆಯಲ್ಲಿ ಮಹತ್ತರ ಪಾತ್ರವಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ರಘುವೀರ ಶೆಟ್ಟಿಗಾರ್, ಜನಪದ ಆಹಾರಮೇಳದಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ತಮ್ಮ ಆಹಾರ ಸಂಸ್ಕೃತಿಯ ಅರಿವು ಮೂಡಿಸುವ ಮಹತ್ವದ ಪ್ರಯೋಗಗಳಾಗಿವೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಹಿರಿಯಡಕ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ರಾಜ್ಯಶಾಸ್ತ್ರ ಉಪನ್ಯಾಸಕ ದೇವದಾಸ್ ಡಿ ಪ್ರಭು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಜಯಪ್ರಕಾಶ್ ಶೆಟ್ಟಿ ಹೆಚ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಎನ್.ಎಸ್. ಶೆಟ್ಟಿ, ಹರೀಶ್ ಹೆಗ್ಡೆ, ಶ್ರೀಮತಿ ಶಾಂತ, ವಸಂತ ಶೆಟ್ಟಿ ಚೆನ್ನಿಬೆಟ್ಟು, ಡಾ. ಸೌಮ್ಯಲತಾ, ಡಾ. ಲಿತಿನ್ ಬಿ ಎಂ ಹಾಗೂ ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು.
ನಂದೀಶ್ ಕುಮಾರ್ ಕೆ ಸಿ ಸ್ವಾಗತಿಸಿ, ಆಶಾ ಹೆಚ್. ಬಿ. ವಂದಿಸಿದರು. ಶಿಕ್ಷಕ-ರಕ್ಷಕ ಸಂಘದ ಸಂಚಾಲಕಿ ಮೀನಾಕ್ಷಿ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.





