ರಾಜ್ಯಸಭೆಯ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಮೇಲೆ ನಡೆದಿರುವ ಜಾತಿ ದೌರ್ಜನ್ಯವನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಹಾಗೂ ಸಹಬಾಳ್ವೆ ಉಡುಪಿ ಜಿಲ್ಲೆ ವತಿಯಿಂದ ಇಂದು ನಗರದ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೆಡ್ಕರ್ ವಾದ) ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು, ಸ್ವಾತಂತ್ರ್ಯ ಬಂದು ಹಲವು ದಶಕಗಳು ಕಳೆದರೂ ದೇಶದಲ್ಲಿ ಅಮಾನವೀಯ ಆಚರಣೆಗಳು ಸಂಪೂರ್ಣವಾಗಿ ನಿಂತಿಲ್ಲ. ಪ್ರತಿದಿನ ಹೊಸ ದಿನವನ್ನು ಆಚರಿಸೋಣ ಎಂದರೂ ದಲಿತ ಸಮುದಾಯದ ಮೇಲಿನ ಹಲ್ಲೆ, ದೌರ್ಜನ್ಯ ಮತ್ತು ಅತ್ಯಾಚಾರಗಳಂತಹ ಘಟನೆಗಳು ಮುಂದುವರಿಯುತ್ತಲೇ ಇವೆ. ಇದೇ ಕಾರಣಕ್ಕೆ ಪ್ರತಿಭಟನೆ ಅನಿವಾರ್ಯವಾಗಿದೆ.

ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಪಕ್ಷದ ರಾಷ್ಟ್ರಧ್ಯಕ್ಷರಾಗಿದ್ದರೂ ನಮ್ಮ ಪ್ರತಿಭಟನೆ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಡೆದಿರುವ ಅವಮಾನಕರ ಘಟನೆ ನಮ್ಮ ಎದೆಗೆ ಒದ್ದಂತಾಗಿದೆ. ಅವರು ಕುಳಿತ ಜಾಗವನ್ನು ಗೋಮೂತ್ರ ಹಾಕಿ ಸ್ವಚ್ಛಗೊಳಿಸುವಂತಹ ಕೃತ್ಯಗಳು 21ನೇ ಶತಮಾನದಲ್ಲಿಯೂ ಬಹಿರಂಗವಾಗಿ ನಡೆಯುತ್ತಿರುವುದು ಅತ್ಯಂತ ನೋವಿನ ಸಂಗತಿ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
“ಇಂತಹ ಘಟನೆಗಳು ದೇಶದ ಕೋಟ್ಯಂತರ ಜನರ ಮನಸ್ಸಿಗೆ ಘಾಸಿ ಉಂಟುಮಾಡುತ್ತವೆ. ಸ್ವಾತಂತ್ರ್ಯ ದೊರೆತ ಬಳಿಕವೂ ಜಾತಿ ಆಧಾರಿತ ಅಮಾನವೀಯ ಆಚರಣೆಗಳು ಮುಂದುವರಿಯುತ್ತಿರುವುದು ವಿಷಾದನೀಯ. ಸಮಾಜದಲ್ಲಿ ಸಮಾನತೆ, ಮಾನವೀಯತೆ ಮತ್ತು ಗೌರವ ನೆಲೆಸಬೇಕಾದರೆ ಇಂತಹ ಕೃತ್ಯಗಳ ವಿರುದ್ಧ ಧ್ವನಿ ಎತ್ತುವುದು ಅನಿವಾರ್ಯ” ಎಂದು ಹೇಳಿದರು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಲಿತ ಹಕ್ಕುಗಳ ಹೋರಾಟ ಸಮಿತಿಯ ಉಡುಪಿ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು, “ಪ್ರತಿಯೊಂದು ರಾಜ್ಯದಲ್ಲಿಯೂ ದಲಿತರನ್ನು ಮೂಲೆಗುಂಪು ಮಾಡಲಾಗುತ್ತಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ದಲಿತರಿಗೆ ಹಕ್ಕುಗಳನ್ನು ನೀಡಿದ್ದರೂ, ಇಂದಿಗೂ ಆ ಹಕ್ಕುಗಳನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರಂತಹವರೂ ಮೀಸಲಾತಿ ನೀಡಬಾರದು ಎಂಬ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಇಂತಹ ಹೇಳಿಕೆಗಳು ಸಾಮಾಜಿಕ ನ್ಯಾಯದ ಆಶಯಕ್ಕೆ ವಿರುದ್ಧವಾಗಿವೆ. ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ದೊರೆತಿರುವ ಹಕ್ಕುಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳ ವಿರುದ್ಧ ನಿರಂತರ ಹೋರಾಟ ನಡೆಸಬೇಕಾಗಿದೆ” ಎಂದರು.

“ಮತೀಯವಾದಿಗಳು ದಲಿತರ ಹಕ್ಕುಗಳ ವಿಚಾರದಲ್ಲಿ ಅಡ್ಡಿಯಾಗುತ್ತಿದ್ದಾರೆ. ಸಂವಿಧಾನ ನೀಡಿರುವ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಹಕ್ಕುಗಳನ್ನು ರಕ್ಷಿಸಲು ಎಲ್ಲರೂ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು” ಎಂದು ಹೇಳಿದರು.
ದಲಿತ ಮಹಿಳಾ ಒಕ್ಕೂಟದ ಸಂಚಾಲಕಿ ಸುಂದರಿ ಪುತ್ತೂರು ಮಾತನಾಡಿ, “ಸಮಾನತೆ ಎಂಬುದು ಕೇವಲ ಪುಸ್ತಕದ ಪುಟಗಳಲ್ಲಿ ಮಾತ್ರ ಇದೆ. ವಾಸ್ತವ ಬದುಕಿನಲ್ಲಿ ದಲಿತರಿಗೆ ಇನ್ನೂ ಸಮಾನ ಹಕ್ಕುಗಳು ದೊರೆಯುತ್ತಿಲ್ಲ. ತಮ್ಮ ಹಕ್ಕುಗಳನ್ನು ಪಡೆಯಲು ದಲಿತರು ಬೀದಿಗೆ ಇಳಿದು ಹೋರಾಟ ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನ ನೀಡಿರುವ ಹಕ್ಕುಗಳು ಹಾಗೂ ಸಮಾನತೆಯ ಆಶಯಗಳು ಕೇವಲ ದಾಖಲೆಗಳಿಗೆ ಸೀಮಿತವಾಗದೆ, ಸಮಾಜದ ಪ್ರತಿಯೊಬ್ಬರಿಗೂ ಸಮಾನವಾಗಿ ದೊರೆಯುವಂತಾಗಬೇಕು ಎಂದು ಅವರು ಆಗ್ರಹಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಮಾತನಾಡಿ, “1925ರಲ್ಲಿ ಆರ್‌ಎಸ್‌ಎಸ್ ಸ್ಥಾಪನೆಯಾಯಿತು. ಅಲ್ಲಿಂದ ಇಲ್ಲಿಯವರೆಗೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂವಿಧಾನದ ಆಶಯಗಳನ್ನು ಒಪ್ಪದ ನಿಲುವನ್ನು ಹೊಂದಿವೆ” ಎಂದು ಆರೋಪಿಸಿದರು.
ಅಂಬೇಡ್ಕರ್ ಅವರ ಹೆಸರನ್ನು ಹೆಚ್ಚು ಎತ್ತಿ ಹಿಡಿಯುವವರ ಮೇಲೆಯೇ ಹೆಚ್ಚಿನ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ಇದೆ ಎಂದರು.

“ಹಿಂದುಳಿದ ವರ್ಗಗಳಿಗೆ ಶೇ.32ರಷ್ಟು ಮೀಸಲಾತಿ ಇರುವುದನ್ನು ಆರ್‌ಎಸ್‌ಎಸ್ ಹಾಗೂ ಬಿಜೆಪಿ ಎಲ್ಲಿಯೂ ಪ್ರಸ್ತಾಪಿಸುವುದಿಲ್ಲ. ಮೇಲ್ಜಾತಿಯವರಿಗೆ ಶೇ.10ರಷ್ಟು ಮೀಸಲಾತಿ ನೀಡಿದ ಸಂದರ್ಭದಲ್ಲಿ ಸಂತೋಷ್ ಹೆಗ್ಡೆ ಅವರು ಎಲ್ಲಿಯೂ ಧ್ವನಿ ಎತ್ತಲಿಲ್ಲ” ಎಂದು ಸುಂದರ ಮಾಸ್ತರ್ ಟೀಕಿಸಿದರು.
ಸಹಬಾಳ್ವೆ ಉಡುಪಿ ಸಂಚಾಲಕ ಹಾಗೂ ಚಿಂತಕ ಪ್ರೊ. ಫಣಿರಾಜ್ ಮಾತನಾಡಿ, “ಸಂವಿಧಾನದ 15ನೇ ವಿಧಿಯ ಆಶಯದಂತೆ ತಲತಲಾಂತರಗಳಿಂದ ದಲಿತರ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆ ಮತ್ತು ತಾರತಮ್ಯದಿಂದ ರಕ್ಷಣೆ ನೀಡುವ ಉದ್ದೇಶದಿಂದ ಕಾನೂನುಗಳನ್ನು ರೂಪಿಸಲಾಗಿದೆ. ಅದರ ಮುಂದುವರಿದ ಭಾಗವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ (ಎಸ್‌ಸಿ/ಎಸ್‌ಟಿ ಅಟ್ರಾಸಿಟಿ ಆಕ್ಟ್) ಜಾರಿಗೆ ಬಂದಿದ್ದು, ಅದರ ಅಡಿಯಲ್ಲಿ ಅನೇಕ ದೌರ್ಜನ್ಯ ಪ್ರಕರಣಗಳನ್ನು ನ್ಯಾಯಾಲಯಗಳ ಮುಂದೆ ತೆಗೆದುಕೊಂಡು ಹೋಗಲಾಗಿದೆ” ಎಂದರು.

“ಆದರೆ ಇಂದು ಇದೇ ಕಾಯ್ದೆಯ ವ್ಯಾಪ್ತಿಯನ್ನು ದುರ್ಬಲಗೊಳಿಸುವ ರೀತಿಯ ನ್ಯಾಯಾಲಯದ ತೀರ್ಪುಗಳು ಬರುತ್ತಿರುವುದು ಆತಂಕಕಾರಿ. ಖಾಸಗಿ ಸ್ಥಳದಲ್ಲಿ ಅಥವಾ ಸಾರ್ವಜನಿಕವಾಗಿ ಅಲ್ಲದ ಸ್ಥಳದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದರೆ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ಅನ್ವಯಿಸುವುದಿಲ್ಲ ಎಂಬ ರೀತಿಯ ವ್ಯಾಖ್ಯಾನಗಳು ಕಾನೂನಿನ ಮೂಲ ಆಶಯಕ್ಕೆ ಧಕ್ಕೆ ತರುತ್ತಿವೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
“ದಲಿತ ಮಹಿಳೆಯರ ಮೇಲೆ ಖಾಸಗಿ ಸ್ಥಳದಲ್ಲಿ ಅತ್ಯಾಚಾರ ಅಥವಾ ದೌರ್ಜನ್ಯ ನಡೆದರೂ ಅದು ಅಟ್ರಾಸಿಟಿ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎನ್ನುವಂತಹ ವ್ಯಾಖ್ಯಾನಗಳು ಮುಂದುವರಿದರೆ, ದಲಿತ ಸಮುದಾಯದ ರಕ್ಷಣೆಗೆ ಇರುವ ಕಾನೂನುಗಳೇ ಅರ್ಥಹೀನವಾಗುವ ಅಪಾಯವಿದೆ. ಇಂತಹ ಬೆಳವಣಿಗೆಗಳು ಸಂವಿಧಾನದ ಆಶಯಗಳ ಮೇಲೆಯೇ ದಾಳಿ ನಡೆಸಿದಂತಾಗುತ್ತದೆ. ದೇಶದಲ್ಲಿ ದಲಿತರು ಮತ್ತು ಶೋಷಿತ ಸಮುದಾಯಗಳು ತಮ್ಮ ಹಕ್ಕು ಹಾಗೂ ಸುರಕ್ಷತೆಯ ಬಗ್ಗೆ ಆತಂಕಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಹೇಳಿದರು.

ರಾಮಲೀಲಾ ಮೈದಾನದಲ್ಲಿ ನಡೆದ ಘಟನೆ ಸಂಪೂರ್ಣವಾಗಿ ಸಂವಿಧಾನ ವಿರೋಧಿಯಾಗಿದೆ. ಸಂವಿಧಾನವನ್ನು ನಾಶ ಮಾಡಲು ಹೊರಟಿರುವ ಈ ಸರ್ಕಾರದ ಒಂದೊಂದೇ ಅಜೆಂಡಾಗಳು ಇದೀಗ ಹೊರಬರುತ್ತಿವೆ ಎಂದು ಅವರು ಆರೋಪಿಸಿದರು.
ಈ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ಉತ್ತರಾಖಂಡ ರಾಜ್ಯಪಾಲರಿಗೆ ದೂರು ನೀಡಿದ್ದರೂ, ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಇದು ಸರ್ಕಾರದ ನಿಲುವಿನ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಂತಹ ಕೃತ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಈವರೆಗೆ ಯಾವುದೇ ಹೇಳಿಕೆ ನೀಡದಿರುವುದು ಖಂಡನೀಯ ಎಂದು ಅವರು ಕಿಡಿಕಾರಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮೈಸೂರು ವಿಭಾಗಿಯ ಸಂಚಾಲಕರಾದ ಶ್ಯಾಮರಾಜ್ ಭಿರ್ತಿ ಪ್ರಾಸ್ತವಿಕವಾಗಿ ಮಾತನಾಡಿ, ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಇಸ್ಮಾಯಿಲ್ ಹುಸೈನ್ ಕಟಪಾಡಿ, ಹುಸೇನ್ ಕೋಡಿಬೆಂಗ್ರೆ, ಟಿ.ಎಂ.ಜಫರುಲ್ಲಾ, ಪ್ರಶಾಂತ್ ಬಿರ್ತಿ, ಅಜೀಜ್ ಉದ್ಯಾವರ, ಶಿವಾನಂದ ಮೂಡಬೆಟ್ಟು, ರಾಜು ಬೆಟ್ಟನಮನೆ, ಅಫಾನ್ ಹೂಡೆ, ಕುಶಾಲ್, ಚಾರ್ಲಸ್ ಅಂಬ್ಲರ್, ಮಂಜುನಾಥ್ ಬಾಳಕುದ್ರು, ಕುಸುಮಾ ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







