ಸಮುದ್ರದ ರಭಸದ ಅಲೆಗಳ ಹೊಡೆತಕ್ಕೆ ಮೀನುಗಾರಿಕಾ ಬೋಟ್‌ನ ಹಲಗೆ ಕಿತ್ತುಹೋಗಿ ನೀರು ಒಳನುಗ್ಗಿದ ಪರಿಣಾಮ ಬೋಟ್ ಸಂಪೂರ್ಣ ಮುಳುಗಿದ ಘಟನೆ ಬುಧವಾರ (ಆ.26) ಗಂಗೊಳ್ಳಿ ಸಮುದ್ರದಲ್ಲಿ ನಡೆದಿದೆ. ಘಟನೆಯಲ್ಲಿ ಬೋಟ್‌ನಲ್ಲಿದ್ದ ಒಟ್ಟು 27 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಆ.26ರಂದು ಮಧ್ಯಾಹ್ನ ಗಂಗೊಳ್ಳಿ ಮ್ಯಾಂಗನೀಸ್ ಜಟ್ಟಿಯಿಂದ ‘ಶ್ರೀ ಬಾಲಾಂಜನೇಯ’ ಎಂಬ ಮೀನುಗಾರಿಕಾ ಬೋಟ್ ಮೀನುಗಾರಿಕೆಗೆಂದು ಅರಬ್ಬಿ ಸಮುದ್ರಕ್ಕೆ ತೆರಳಿತ್ತು. ಗಂಗೊಳ್ಳಿ ಸೀಮೌತ್‌ನಿಂದ ಸುಮಾರು 3 ನಾಟಿಕಲ್ ಮೈಲು ದೂರ ಸಮುದ್ರದಲ್ಲಿ ಸಾಗುತ್ತಿದ್ದಾಗ ಮಧ್ಯಾಹ್ನ ಸುಮಾರು 3.30ರ ವೇಳೆಗೆ ರಭಸದ ಅಲೆಯ ಹೊಡೆತಕ್ಕೆ ಬೋಟ್‌ನ ಹಲಗೆ ಕಿತ್ತುಹೋಗಿದೆ. ಪರಿಣಾಮ ಬೋಟ್‌ನೊಳಗೆ ಸಮುದ್ರದ ನೀರು ವೇಗವಾಗಿ ತುಂಬಿಕೊಂಡು ಬೋಟ್ ಮುಳುಗಲು ಆರಂಭಿಸಿತು.

ವಿಷಯ ತಿಳಿದ ತಕ್ಷಣ ಸಿ.ಎಸ್.ಪಿ. ಗಂಗೊಳ್ಳಿ ಠಾಣೆಯ ಪಿಐ ರಮೇಶ್ ಕೆ., ಪಿಎಸ್‌ಐ ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿಗಳಾದ ಯುವರಾಜ, ರಾಘವೇಂದ್ರ, ರಮೇಶ್, ನಾಗರಾಜ ಖಾರ್ವಿ, ನಾಗೇಶ್ ಖಾರ್ವಿ ಮತ್ತು ಕಿರಣ, ಕೆ.ಎನ್.ಡಿ. ಸದಸ್ಯರಾದ ಸಂತೋಷ ಖಾರ್ವಿ ಹಾಗೂ ಸಂದೇಶ್ ಅವರೊಂದಿಗೆ ‘ಸುಮುಖ’ ಮತ್ತು ‘ಮತ್ಯಾಮೃತ (ಶ್ರೀನಿಧಿ)’ ಮೀನುಗಾರಿಕಾ ಬೋಟ್‌ಗಳ ಮೂಲಕ ರಕ್ಷಣಾ ಕಾರ್ಯಾಚರಣೆಗೆ ತೆರಳಿದರು.
ಮುಳುಗುತ್ತಿದ್ದ ಬೋಟ್‌ನಲ್ಲಿದ್ದ ಒಟ್ಟು 27 ಮಂದಿ ಮೀನುಗಾರರನ್ನು ರಕ್ಷಣಾ ಬೋಟ್‌ಗಳಿಗೆ ಸುರಕ್ಷಿತವಾಗಿ ವರ್ಗಾಯಿಸಲಾಯಿತು. ಆದರೆ ಬೋಟ್ ಸಂಪೂರ್ಣವಾಗಿ ಸಮುದ್ರದ ನೀರಿನಲ್ಲಿ ಮುಳುಗಿಹೋದ ಕಾರಣ ಅದನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ಬಳಿಕ ರಕ್ಷಿಸಲ್ಪಟ್ಟ ಎಲ್ಲಾ 27 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ಗಂಗೊಳ್ಳಿ ಬಂದರಿಗೆ ಕರೆತರಲಾಯಿತು.
ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ಥಳೀಯರಾದ ಅಭಿ ಆರ್ಕಟಿ, ಸಂದೇಶ್, ರಾಮಚಂದ್ರ ಖಾರ್ವಿ, ಜಯಂತ, ನಾರಾಯಣ ಖಾರ್ವಿ ಉಪ್ಪುಂದ, ಚಂದ್ರಶೇಖರ ಖಾರ್ವಿ, ಚೇತನ್ ಶಿಪಾಯಿ ಹಾಗೂ ಶೇಖರ ಕುಂದರ್ ಅವರು ಸಹಕರಿಸಿದರು.





