ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ತೆಗೆದುಹಾಕಲು ಬಳಸುವ ಫಾರಂ–7 ಅರ್ಜಿಗಳ ದುರುಪಯೋಗವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಬಾರದು ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಆಗ್ರಹಿಸಿದೆ.
ಈ ಕುರಿತು ಒಕ್ಕೂಟದ ನಿಯೋಗ ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಅರ್ಹ ಮತದಾರರ ಹೆಸರನ್ನು ಅನ್ಯಾಯವಾಗಿ ಅಥವಾ ತಪ್ಪು ಮಾಹಿತಿಯ ಆಧಾರದಲ್ಲಿ ಮತದಾರರ ಪಟ್ಟಿಯಿಂದ ಕೈಬಿಡುವುದು ಅವರ ಪ್ರಜಾಪ್ರಭುತ್ವದ ಹಕ್ಕಿನ ಮೇಲೆ ನೇರ ಪರಿಣಾಮ ಬೀರುವ ಗಂಭೀರ ವಿಷಯವಾಗಿದೆ. ಹೀಗಾಗಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ, ನಿಷ್ಪಕ್ಷಪಾತತೆ ಹಾಗೂ ನಿಯಮಾನುಸಾರ ಕ್ರಮಗಳನ್ನು ಖಚಿತಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಸ್ವೀಕರಿಸಲಾದ ಫಾರಂ–7 ಅರ್ಜಿಗಳ ಸಂಖ್ಯೆ, ಸ್ವೀಕರಿಸಲಾದ, ಅಂಗೀಕರಿಸಲಾದ ಹಾಗೂ ತಿರಸ್ಕರಿಸಲಾದ ಅರ್ಜಿಗಳ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಮತದಾರರ ಹೆಸರು ತೆಗೆದುಹಾಕುವ ಮೊದಲು ಸಂಬಂಧಪಟ್ಟ ಮತದಾರರಿಗೆ ನೋಟಿಸ್ ನೀಡಿ, ಆಕ್ಷೇಪಣೆ ಸಲ್ಲಿಸಲು ಹಾಗೂ ವಿಚಾರಣೆಯಲ್ಲಿ ತಮ್ಮ ವಾದ ಮಂಡಿಸಲು ಅವಕಾಶ ನೀಡಲಾಗಿದೆಯೇ ಎಂಬುದರ ಬಗ್ಗೆಯೂ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಒಕ್ಕೂಟ ಆಗ್ರಹಿಸಿದೆ.
ಅಲ್ಪಸಂಖ್ಯಾತರು, ದಲಿತರು ಹಾಗೂ ಇತರ ದುರ್ಬಲ ವರ್ಗಗಳಿಗೆ ಸೇರಿದ ಅರ್ಹ ಮತದಾರರ ಹೆಸರುಗಳು ಯಾವುದೇ ಕಾರಣಕ್ಕೂ ತಪ್ಪಾಗಿ ಪಟ್ಟಿಯಿಂದ ಕೈಬಿಡದಂತೆ ಜಿಲ್ಲಾಡಳಿತ ಹಾಗೂ ಚುನಾವಣಾ ಇಲಾಖೆ ವಿಶೇಷ ಎಚ್ಚರಿಕೆ ವಹಿಸಬೇಕು. ಯಾವುದೇ ಸಮುದಾಯದ ಅರ್ಹ ಮತದಾರರ ಮತದಾನದ ಹಕ್ಕಿಗೆ ಧಕ್ಕೆಯಾಗದಂತೆ ಚುನಾವಣಾ ಪ್ರಕ್ರಿಯೆಯ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಕಾಪಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿಯನ್ನು ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಅವರು ತಕ್ಷಣ ಸ್ಪಂದಿಸಿ, ಈ ಸಂಬಂಧ ಅಗತ್ಯ ಮಾಹಿತಿಯನ್ನು ನಿಯೋಗಕ್ಕೆ ಒದಗಿಸಿದರು. ಅಲ್ಲದೆ, ಈವರೆಗೆ ಯಾರೊಬ್ಬರ ಹೆಸರನ್ನೂ ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ನಿಯೋಗದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಮೊಹಮ್ಮದ್ ಮೌಲಾ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹುಸೈನ್ ಕಟಪಾಡಿ, ಕಾರ್ಯದರ್ಶಿ ಜಫ್ರುಲ್ಲಾ ತೋನ್ಸೆ, ಜಿಲ್ಲಾ ಸದಸ್ಯ ಪೀರು ಸಾಹೇಬ್, ಉಡುಪಿ ತಾಲೂಕು ಜತೆ ಕಾರ್ಯದರ್ಶಿ ಫೈಝ್ ಅಹ್ಮದ್ ಆದಿಉಡುಪಿ ಹಾಗೂ ಜಮೀಯ್ಯತುಲ್ ಫಲಾಹ ಉಡುಪಿ ತಾಲೂಕು ಘಟಕದ ಕಾರ್ಯದರ್ಶಿ ಸಮೀರ್ ಉಪಸ್ಥಿತರಿದ್ದರು.





