ಮುಂದಿನ ತಲೆಮಾರಿಗೆ ಉತ್ತಮ ಪರಿಸರವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಹಸಿರು ಕ್ರಾಂತಿಗೆ ನಾಂದಿ ಹಾಡಬಹುದು ಎಂದು ಶಿಕ್ಷಣ ತಜ್ಞ ಎಂ.ಎನ್. ಮಧ್ಯಸ್ಥ ಹೇಳಿದರು.
ಅವರು ಕೋಟ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ, ಪಂಚವರ್ಣ ಮಹಿಳಾ ಮಂಡಲ, ಹಾಲು ಉತ್ಪಾದಕರ ಸಹಕಾರಿ ಸಂಘ, ಗೀತಾನಂದ ಫೌಂಡೇಶನ್, ಅನ್ನಪೂರ್ಣ ನರ್ಸರಿ ಹಾಗೂ ಸ್ಥಳೀಯ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ 307ನೇ ವಾರದ ‘ಪರಿಸರಸ್ನೇಹಿ ಹಸಿರು ಹೆಜ್ಜೆ’ ಅಭಿಯಾನದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಸಿಗಳನ್ನು ವಿತರಿಸಿ, ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು. ಪಂಚವರ್ಣ ಸಂಘಟನೆಯ ಪರಿಸರ ಕಾಳಜಿಯ ಕಾರ್ಯಗಳನ್ನು ಮಧ್ಯಸ್ಥ ಪ್ರಶಂಸಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸ್ನೇಹಕೂಟ ಮನೂರು ಅಧ್ಯಕ್ಷೆ ಭಾರತಿ ವಿ. ಮಯ್ಯ ಮನೆಮನೆಗೆ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಂಚವರ್ಣದ ಸದಸ್ಯ ಮಹೇಶ್ ಬೆಳಗಾವಿ ಪರಿಸರ ಸಂರಕ್ಷಣೆಯ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಮನೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಸಿಇಒ ಹರ್ಷ ಪೂಜಾರಿ, ಪಂಚವರ್ಣದ ಸಂಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಮಹಿಳಾ ಮಂಡಳದ ಅಧ್ಯಕ್ಷೆ ಲಲಿತಾ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರವೀಂದ್ರ ಕೋಟ ನಿರೂಪಿಸಿ, ಅಜಿತ್ ಆಚಾರ್ಯ ವಂದಿಸಿದರು.






