ಉಡುಪಿ ಜಿಲ್ಲೆಯಲ್ಲಿ ಸಾವಿರಾರು ಮಂದಿ ಅಸಂಘಟಿತ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದು ಜಿಲ್ಲೆಯ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತಿದ್ದಾರೆ. ಆದರೆ ಇಂತಹ ಕುಟುಂಬಗಳಿಗೆ ಸಾಮಾಜಿಕ ಭದ್ರತೆ ಇಲ್ಲ ಎಂದು ಸಿಐಟಿಯು ಸಂಘಟನೆಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹೇಳಿದರು. ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ನಡೆದ ಕಾರ್ಮಿಕ ಸಂಘಟನೆಗಳ ಜೊತೆ ಕಾರ್ಮಿಕ ಸಚಿವರ ಸಭೆ ಕಾರ್ಯಕ್ರಮದಲ್ಲಿ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಜಿಲ್ಲೆಯಲ್ಲಿ ಕೆಲವು ಸಂಘಟಿತ ಕ್ಷೇತ್ರಗಳಲ್ಲಿ ಉದ್ಯೋಗ ಇದ್ದರೂ ಅವುಗಳು ಖಾಸಗಿ ಹಿಡಿತದಲ್ಲಿವೆ. ಇದರಿಂದ ಕಾರ್ಮಿಕರಿಗೆ ಶೋಷಣೆಗಳಾಗುತ್ತವೆ. ಉದ್ಯೋಗದ ಅಭದ್ರತೆ ಕಾಡುತ್ತಿದೆ. ಜಿಲ್ಲೆಯಲ್ಲಿ ಅಗಾಧವಾದ ಪ್ರಾಕೃತಿಕ ಸಂಪನ್ಮೂಲಗಳು ಇದ್ದರೂ ಈವರೆಗೆ ಯಾವುದೇ ಸರ್ಕಾರಗಳು ಸರ್ಕಾರಿ ಒಡೆತನದ ಕಾರ್ಖಾನೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿಸುವ ಪ್ರಯತ್ನ ಮಾಡಿಲ್ಲ” ಎಂದರು.
“ಬೈಂದೂರಿನಲ್ಲಿ ಸಿಗುತ್ತಿರುವ ಬಾಕ್ಸೈಟ್ ಅದಿರು ಬಳಸಿಕೊಂಡು ಕಾರ್ಖಾನೆ ಆರಂಭಿಸಬೇಕು. ಮೀನುಗಾರಿಕೆ, ಗೋಡಂಬಿಗೆ ಸಂಬಂಧಪಟ್ಟ ಸರ್ಕಾರಿ ಕಾರ್ಖಾನೆಗಳಿಗೆ ವಿಪುಲ ಅವಕಾಶಗಳಿವೆ. ತಾವು ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಜಿಲ್ಲೆಯ ಅಭಿವೃದ್ಧಿಗೆ ಒತ್ತು ಕೊಡಬೇಕು. ಜಿಲ್ಲೆಯಲ್ಲಿ ಈಗ ದುಡಿಯುತ್ತಿರುವ ಅಸಂಘಟಿತ ವಲಯದ ಕಾರ್ಮಿಕರ ಬೇಡಿಕೆಗಳನ್ನು ಹಾಗೂ ಸಮಸ್ಯೆಗಳನ್ನು ಬಗೆಹರಿಸಬೇಕು” ಎಂದು ಕಾರ್ಮಿಕ ಸಚಿವರಿಗೆ ಒತ್ತಾಯಿಸಿದರು.
“ಎಲ್ಲ ಅಸಂಘಟಿತ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚಿಸಬೇಕು. ಬೀಡಿ ಕಾರ್ಮಿಕರ ಮೂರು ವರ್ಷದ ಬಾಕಿ ಇರುವ ತುಟ್ಟಿಭತ್ಯೆಯನ್ನು ಮಾಲೀಕರು ಕೂಡಲೇ ಕೊಡಬೇಕು. ಕನಿಷ್ಠ ವೇತನ 2023 ರ ಏರಿಕೆಯಾದ ₹395 ಜಾರಿಮಾಡಬೇಕು. ಬೀಡಿ, ಆಸ್ಪತ್ರೆಯ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು. ಜಿಲ್ಲೆಯಲ್ಲಿ ಮಂಜೂರಾಗಿರುವ ಇಎಸ್ಐ ಆಸ್ಪತ್ರೆಯನ್ನು ಶೀಘ್ರದಲ್ಲಿ ಆರಂಭಿಸಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಒತ್ತಡ ತರಬೇಕು” ಎಂದು ಆಗ್ರಹಿಸಿದರು.
“ಕಟ್ಟಡ ಕಾರ್ಮಿಕರ ಸೌಲಭ್ಯಗಳನ್ನು ಕಡಿತ ಮಾಡಬಾರದು. ಕಟ್ಟಡ ಕಾರ್ಮಿಕರಿಗೆ ಉಚಿತ ವೈದ್ಯಕೀಯ ತಪಾಸಣೆ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳಿಗೆ ನೀಡಬೇಕೆಂದಿರುವ ನಿರ್ಧಾರ ಮಂಡಳಿ ಹಿಂಪಡೆಯಬೇಕು. ಈ ಹಿಂದೆ ತಪಾಸಣೆ ಮಾಡಿಕೊಂಡ ಕಾರ್ಮಿಕರಿಗೆ ಗಂಭೀರ ಕಾಯಿಲೆಗಳು ಪತ್ತೆಯಾಗಿ ಚಿಕಿತ್ಸೆಗೊಳಗಾದಾಗ ಅಂತಹವರಿಗೆ ಮಂಡಳಿ ಪ್ರಮುಖ ವೈದ್ಯಕೀಯ ವೆಚ್ಚ ಅರ್ಜಿಗಳನ್ನು ತಿರಸ್ಕರಿಸಿದ್ದು, ಕೇವಲ ₹700 ರಿಂದ ₹800ನ್ನು ಮಂಜೂರು ಮಾಡಿರುವ ಪ್ರಕರಣಗಳಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಇಲಿ ಜ್ವರದಿಂದ ಗೋಪಾಲ ಪೂಜಾರಿ ಎಂಬ ಕಟ್ಟಡ ಕಾರ್ಮಿಕ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ₹ 7 ಲಕ್ಷ ಖರ್ಚು ಮಾಡಿದ ಅರ್ಜಿಯನ್ನು ಮಂಡಳಿ ತಿರಸ್ಕರಿಸಿ ಆದೇಶ ನೀಡಿದೆ. ಹಾಗಾಗಿ ಕಾರ್ಮಿಕರಿಗೆ ಇಂತಹ ವೈದ್ಯಕೀಯ ತಪಾಸಣೆ ಪ್ರಯೋಜನ ಇಲ್ಲ ಬದಲಾಗಿ ಮಂಡಳಿ ಈ ಹಣದಲ್ಲಿ ವೈದ್ಯಕೀಯ ವೆಚ್ಚ ಹೆಚ್ಚಳ ಮಾಡಬೇಕು. ಇಲ್ಲವೇ ಆರೋಗ್ಯ ಸಂಜೀವಿನಿ ಜಾರಿ ಮಾಡಬೇಕು. ಪಿಂಚಣಿ ಅರ್ಜಿ ಸಲ್ಲಿಸಲು 1 ವರ್ಷದ ಕಾಲ ಮಿತಿ ನೀಡಬೇಕು. ತಿರಸ್ಕ್ರತವಾದ ಪಿಂಚಣಿ ಅರ್ಜಿಗಳನ್ನು ಪುರಸ್ಕರಿಸಲು ನಿರ್ದೇಶನ ನೀಡಬೇಕು” ಎಂದು ಒತ್ತಾಯಿಸಿದರು.
“ಎಲ್ಲ ಕಾರ್ಮಿಕರಿಗೂ ₹26,000 ಕನಿಷ್ಠ ಕೂಲಿ ನಿಗದಿ ಮಾಡಬೇಕು. ಅಂಗನವಾಡಿ ನೌಕರರಿಗೆ ಗ್ರಾಚುವಿಟಿ ನೀಡಬೇಕು. ಶಾಲೆಗಳಲ್ಲಿ ಅಡುಗೆ ಮಾಡುವ ಬಿಸಿಯೂಟದವರನ್ನು ಕಾರ್ಮಿಕರೆಂದು ಪರಿಗಣಿಸಿ ವೇತನ ಹೆಚ್ಚಳ ಮಾಡಬೇಕು. ಜಿಲ್ಲೆಯಲ್ಲಿರುವ ಹೆಂಚು ಉದ್ಯಮಕ್ಕೆ ಪ್ರೋತ್ಸಾಹ ನೀಡಬೇಕು.
ಸಾರಿಗೆ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚಿಸಿ ಅನುದಾನ ನೀಡಿ ಸೌಲಭ್ಯಗಳನ್ನು ನೀಡಬೇಕು. ಬೀದಿಗಳಲ್ಲಿ, ಮಾರುಕಟ್ಟೆಗಳಲ್ಲಿ ಮೀನು ಮಾರಾಟ ಮಾಡುವ ಮೀನು ಕಾರ್ಮಿಕರಿಗೆ ರಕ್ಷಣೆ ಒದಗಿಸುವ ಕಾರ್ಯಕ್ರಮ ರೂಪಿಸಬೇಕು. ಜಿಲ್ಲೆಯಲ್ಲಿ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳನ್ನು ಸ್ಥಾಪಿಸಲು ಕ್ರಮವಹಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಬಿಜೆಪಿ ಶಾಸಕ ಅಭಯ್ ಪಾಟೀಲ್ ಕ್ಷೇತ್ರದಲ್ಲಿ ಅಕ್ರಮ; ತನಿಖೆಗೆ ಸತೀಶ್ ಜಾರಕಿಹೊಳಿ ಅದೇಶ
“ಕುಂದಾಪುರ, ಉಡುಪಿ ಸರ್ಕಲ್ 01, ಬೈಂದೂರುಗಳಲ್ಲಿ ಖಾಲಿ ಇರುವ ನಿರೀಕ್ಷಕರ ಕಚೇರಿಗಳಲ್ಲಿ ಕಾರ್ಮಿಕ ನಿರೀಕ್ಷಕರನ್ನು ನೇಮಕ ಮಾಡಬೇಕು. ಇಲಾಖೆಯಲ್ಲಿ ಸಿಬ್ಬಂದಿ ಹೆಚ್ಚಿಸಬೇಕು. ಈಗಾಗಲೇ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರನ್ನು ಖಾಯಂ ಮಾಡಬೇಕು. ಕಾರ್ಮಿಕ ಇಲಾಖೆಯು ಕಾರ್ಮಿಕ ಸ್ನೇಹಿಯಾಗಿರಬೇಕು. ಗೇರುಬೀಜ, ಭದ್ರತಾ ಸಿಬ್ಬಂದಿ, ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಭೋದಕೇತರ ಸಿಬ್ಬಂದಿಗಳ ಕನಿಷ್ಠ ವೇತನ ಹೆಚ್ಚಿಸಬೇಕು” ಎಂದು ಸಿಐಟಿಯು ಸಂಘಟನೆಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹೇಳಿದರು.
ಸಭೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಎಚ್ ನರಸಿಂಹ, ಶಶಿಧರ ಗೊಲ್ಲ, ಚಂದ್ರಶೇಖರ ವಿ, ರಾಮ ಕಾರ್ಕಡ, ಸುಭಾಷ್ ನಾಯಕ್, ಚಿಕ್ಕ ಮೊಗವೀರ, ಉಮೇಶ್ ಕುಂದರ್, ಶೇಖರ ಬಂಗೇರ, ಸಂತೋಷ ಹೆಮ್ಮಾಡಿ, ರೊನಾಲ್ಡ್ ರಾಜೇಶ್ ಕ್ವಾಡ್ರಸ್, ವೆಂಕಟೇಶ್ ಕೋಣಿ ಸೇರಿದಂತೆ ಇತರರು ಇದ್ದರು.