ಉಡುಪಿ ಜಿಲ್ಲೆಯ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಯಡ್ತರೆ ಗ್ರಾಮದಲ್ಲಿ ನಡೆದಿದ್ದ 6 ಲಕ್ಷ ರೂ. ನಗದು ಕಳವು ಪ್ರಕರಣವನ್ನು ಬೈಂದೂರು ಪೊಲೀಸರು ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಕಳೆದ ಏಪ್ರಿಲ್ 26ರಂದು ಯಡ್ತರೆ ಗ್ರಾಮದ ಎಸ್.ಬಿ.ಐ ಬ್ಯಾಂಕ್ ಹಿಂಭಾಗದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರಾಜಸ್ಥಾನ ಮೂಲದ ರಾವಲ್ ಸಿಂಗ್ ಅವರ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಕಳ್ಳತನ ನಡೆದಿತ್ತು. ದುಷ್ಕರ್ಮಿಗಳು ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದು ಒಳನುಗ್ಗಿ, ಗೋಡ್ರೇಜ್‌ನಲ್ಲಿ ಇರಿಸಿದ್ದ 6 ಲಕ್ಷ ರೂ. ನಗದು ಹಣವನ್ನು ಕಳವು ಮಾಡಿದ್ದರು. ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಬೈಂದೂರು ವೃತ್ತ ನಿರೀಕ್ಷಕರಾದ ಶಿವಕುಮಾರ್ ಬಿ. ಅವರ ನೇತೃತ್ವದಲ್ಲಿ ಕೈಗೊಳ್ಳಲಾಗಿತ್ತು. ತನಿಖೆ ವೇಳೆ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಜೋಧ್‌ಪುರ ಜಿಲ್ಲೆಯ ಸಿರಿಗ್ರಾತ್ ತಾಲೂಕುನ ರಾಜಸ್ಥಾನ ಹಾಗೂ ಪ್ರಸ್ತುತ ಬೈಂದೂರು ಬಂಕೇಶ್ವರದಲ್ಲಿ ವಾಸವಾಗಿದ್ದ ಮಹೇಂದ್ರ ಸೈನ್ (23) ಎಂಬುವವನನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಆರೋಪಿಯನ್ನು ಬಂಧಿಸುವ ಕಾರ್ಯಾಚರಣೆಗೆ ಬೈಂದೂರು ಪೊಲೀಸ್ ಠಾಣೆಯ ಪಿ.ಎಸ್.ಐ ಸುನೀಲ್ ಕುಮಾರ್ ಬಿ.ವೈ., ನವೀನ್ ಬೋರಕರ ಹಾಗೂ ಠಾಣಾ ಸಿಬ್ಬಂದಿಗಳಾದ ಸಂತೋಷ ಕುಮಾರ ಯು., ಚಿದಾನಂದ, ಜಯರಾಮ, ಮಾಳಪ್ಪ ದೇಸಾಯಿ, ಪರಯ್ಯ ಮಠಪತಿ ಸೇರಿದಂತೆ ಬೈಂದೂರು ವೃತ್ತ ಕಚೇರಿ ಸಿಬ್ಬಂದಿಗಳಾದ ಶಿವಾನಂದ ಹುದ್ದಾರ, ಅಶೋಕ ರಾಥೋಡ ಮತ್ತು ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯ ಸಿಡಿಆರ್ ವಿಭಾಗದ ದಿನೇಶ್ ಅವರನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.
ಈ ವಿಶೇಷ ತಂಡವು ಮೇ 7ರಂದು ಆರೋಪಿಯನ್ನು ಬಂಧಿಸಿ, ಕಳವು ಮಾಡಲಾಗಿದ್ದ 6 ಲಕ್ಷ ರೂ. ನಗದು ಹಣವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದೆ.






