ಮಣಿಪಾಲದ ಕ್ರೈಸ್ಟ್ ಆಂಗ್ಲ ಮಾಧ್ಯಮ ಶಾಲೆಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ಹೆರ್ಗ ಗ್ರಾಮದ ಸರಳೆಬೆಟ್ಟು-ಕೊಡಂಗೆ ದೇವಸ್ಥಾನದ ಸಮೀಪ ಶುಕ್ರವಾರ ಬೆಳಗ್ಗೆ ರಸ್ತೆ ಬದಿಯ ತೋಡಿಗೆ ಉರುಳಿ ಬಿದ್ದ ಪರಿಣಾಮ ಏಳು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಓರ್ವ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಮಾಹಿತಿಯ ಪ್ರಕಾರ, ಸುಮಾರು 20 ವಿದ್ಯಾರ್ಥಿಗಳಿದ್ದ ಬಸ್ ತಿರುವಿನಲ್ಲಿ ರಿವರ್ಸ್ ತೆಗೆದುಕೊಳ್ಳುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಮಳೆಯ ಪರಿಣಾಮ ರಸ್ತೆ ಬದಿಯ ಮಣ್ಣು ಜಾರಿದ ಕಾರಣ ಸಮೀಪದ ತೋಡಿಗೆ ಉರುಳಿ ಬಿದ್ದಿದೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಕೂಡಲೇ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ಬಾಲಕಿಗೆ ಚಿಕಿತ್ಸೆ ಮುಂದುವರಿದಿದೆ.
ಘಟನೆಯ ವೇಳೆ ದೊಡ್ಡ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಪ್ರತಿದಿನ ಶಾಲಾ ಬಸ್‌ಗೆ ಹತ್ತಲು ಐದಾರು ಮಕ್ಕಳು ರಸ್ತೆಯ ಬಲಭಾಗದಲ್ಲಿ ನಿಂತಿರುತ್ತಿದ್ದರು. ಆದರೆ ಶುಕ್ರವಾರ ಅವರು ರಸ್ತೆ ಎಡಭಾಗದಲ್ಲಿ ನಿಂತಿದ್ದರಿಂದ ಬಸ್ ಅವರ ಮೇಲೆ ಉರುಳಿ ಬೀಳುವ ಅಪಾಯ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಕೆಎಂಸಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. ವೈದ್ಯರು ಹಾಗೂ ಪೋಷಕರೊಂದಿಗೆ ಚರ್ಚಿಸಿ ಮಕ್ಕಳ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದ ಅವರು, ಕಳೆದ ಒಂದು ತಿಂಗಳ ಅವಧಿಯಲ್ಲಿ ಉಡುಪಿ ನಗರ ಭಾಗದಲ್ಲಿ ಇದು ಮೂರನೇ ಶಾಲಾ ಬಸ್ ಅಪಘಾತವಾಗಿರುವುದರಿಂದ ವಿದ್ಯಾರ್ಥಿಗಳ ಸುರಕ್ಷತೆಗೆ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ಸಂಸ್ಥೆಗಳು ನಿಯಮಾವಳಿಗಳ ಪಾಲನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಉಡುಪಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಸಹ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡ ವಿದ್ಯಾರ್ಥಿನಿಯ ಆರೋಗ್ಯ ವಿಚಾರಿಸಿದರು. ಬಳಿಕ ಕ್ರೈಸ್ಟ್ ಶಾಲೆಗೆ ಭೇಟಿ ನೀಡಿ ಮುಖ್ಯೋಪಾಧ್ಯಾಯಿನಿಯೊಂದಿಗೆ ಮಾತುಕತೆ ನಡೆಸಿದ ಅವರು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಸೇರಿದಂತೆ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, “ಕಳೆದ ಒಂದು ತಿಂಗಳಲ್ಲಿ ನಡೆದ ಮೂರು ಶಾಲಾ ಬಸ್ ಅಪಘಾತಗಳಿಗೆ ಒಂದೇ ರೀತಿಯ ಕಾರಣ ಇಲ್ಲ. ಮೊದಲ ಘಟನೆಯಲ್ಲಿ ಚಾಲಕನಿಗೆ ಹೃದಯಾಘಾತ (ಸ್ಟ್ರೋಕ್) ಉಂಟಾಗಿತ್ತು. ಎರಡನೇ ಘಟನೆಯಲ್ಲಿ ಮಾನ್ಯ ಚಾಲನಾ ಪರವಾನಗಿ ಇಲ್ಲದ ವ್ಯಕ್ತಿ ಬಸ್ ಚಲಾಯಿಸಿದ್ದು, ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇಂದಿನ ಘಟನೆಯಲ್ಲಿ ಚಾಲಕನಿಗೆ ಮಾನ್ಯ ಚಾಲನಾ ಪರವಾನಗಿ ಇದ್ದು, ಬಸ್‌ಗೆ ಫಿಟ್ನೆಸ್ ಪ್ರಮಾಣಪತ್ರವೂ ಇತ್ತು. ಮಳೆಯಿಂದ ರಸ್ತೆ ಜಾರುವಂತಾಗಿದ್ದರಿಂದ ರಿವರ್ಸ್ ತೆಗೆದುಕೊಳ್ಳುವ ವೇಳೆ ಬಸ್ ಜಾರಿದೆ” ಎಂದು ಸ್ಪಷ್ಟಪಡಿಸಿದರು.
ಶಾಲಾ ಬಸ್‌ಗಳ ಸುರಕ್ಷತೆ ಕುರಿತು ಈಗಾಗಲೇ ವಿಶೇಷ ತಪಾಸಣೆ ನಡೆಸಲಾಗಿದ್ದು, ಬಸ್‌ಗಳಿಗೆ ಫಿಟ್ನೆಸ್ ಪ್ರಮಾಣಪತ್ರ (ಎಫ್‌ಸಿ) ಇದೆಯೇ ಹಾಗೂ ಚಾಲಕರು ಮಾನ್ಯ ಚಾಲನಾ ಪರವಾನಗಿ ಹೊಂದಿದ್ದಾರೆಯೇ ಎಂಬುದನ್ನು ಪರಿಶೀಲಿಸುವ ಕಾರ್ಯವನ್ನು ಮುಂದುವರಿಸಲಾಗುವುದು ಎಂದು ಎಸ್‌ಪಿ ತಿಳಿಸಿದ್ದಾರೆ.
ಸತತವಾಗಿ ಶಾಲಾ ಬಸ್ ಅಪಘಾತಗಳು ಸಂಭವಿಸುತ್ತಿರುವುದು ಪೋಷಕರಲ್ಲಿ ಆತಂಕ ಮೂಡಿಸಿದ್ದು, ಶಾಲಾ ವಾಹನಗಳ ಸುರಕ್ಷತೆ, ಚಾಲಕರ ತರಬೇತಿ, ಮಾರ್ಗಗಳ ಪರಿಶೀಲನೆ ಹಾಗೂ ಮಳೆಗಾಲದಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತು ಸಂಬಂಧಪಟ್ಟ ಇಲಾಖೆಗಳು ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




