ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವ ಘಟನೆ ನ.26ರಂದು ಬೆಳಗ್ಗೆ ಶಿರೂರು ಗ್ರಾಮದ ಮದ್ರಾಮಕ್ಕಿಯಲ್ಲಿ ನಡೆದಿದೆ.
ಶಿವರಾಮ ಪೂಜಾರಿ ಎಂಬವರ ಬಾಡಿಗೆ ಮನೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಕೋಣೆಯ ಕಪಾಟಿನಲ್ಲಿದ್ದ 90 ಸಾವಿರ ರೂ. ನಗದು, 10 ಗ್ರಾಂ ತೂಕದ ಕರಿಮಣಿ ಸರ, 4 ಗ್ರಾಂ ತೂಕದ ಚಿನ್ನದ ಉಂಗುರ, ಒಂದು ಜೊತೆ ಬೆಳ್ಳಿಯ ಕಾಲುಚೈನು ಹಾಗೂ ಬೆಳ್ಳಿಯ ಸರವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.
ಕಳವಾದ ನಗದು ಹಾಗೂ ಚಿನ್ನಾಭರಣಗಳ ಒಟ್ಟು ಮೌಲ್ಯ ಸುಮಾರು 2.40 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






