ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಫಾರಂ-7 ಅರ್ಜಿಗಳ ದುರುಪಯೋಗ ತಡೆಯುವುದು ಹಾಗೂ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅನ್ಯಾಯವಾಗಿ ಕೈಬಿಡದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಥೊಲಿಕ್ ಸಭಾ ಉಡುಪಿ ಪ್ರದೇಶದ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸ್ವರೂಪ ಟಿ.ಕೆ. ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಕರ್ನಾಟಕದಾದ್ಯಂತ SIR ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಬಳಸುವ ಫಾರಂ-7 ಅರ್ಜಿಗಳ ದುರುಪಯೋಗದ ಕುರಿತು ಸಾರ್ವಜನಿಕ ವಲಯದಲ್ಲಿ ಆತಂಕ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಕ್ರೈಸ್ತರು ಹಾಗೂ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಇಂತಹ ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ ಎಂಬ ಅನುಮಾನಗಳೂ ವ್ಯಕ್ತವಾಗಿವೆ ಎಂದು ನಿಯೋಗ ತಿಳಿಸಿತು.
ಯಾವುದೇ ತಪ್ಪು ಮಾಹಿತಿ, ಸುಳ್ಳು ಆಕ್ಷೇಪಣೆ ಅಥವಾ ಅನ್ಯಾಯದ ಆಧಾರದ ಮೇಲೆ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕದಂತೆ ಚುನಾವಣಾ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡುವ ಮುನ್ನ ಸಂಬಂಧಪಟ್ಟ ಮತದಾರರಿಗೆ ಕಡ್ಡಾಯವಾಗಿ ನೋಟಿಸ್ ನೀಡಿ, ಆಕ್ಷೇಪಣೆ ಸಲ್ಲಿಸಲು ಹಾಗೂ ವಿಚಾರಣೆಯ ಸಂದರ್ಭದಲ್ಲಿ ತಮ್ಮ ವಾದ ಮಂಡಿಸಲು ಸಮರ್ಪಕ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಲಾಯಿತು.
ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಸ್ವೀಕರಿಸಲಾದ ಫಾರಂ-7 ಅರ್ಜಿಗಳ ಒಟ್ಟು ಸಂಖ್ಯೆ, ಅಂಗೀಕರಿಸಲಾದ ಅರ್ಜಿಗಳು ಹಾಗೂ ತಿರಸ್ಕರಿಸಲಾದ ಅರ್ಜಿಗಳ ಸಂಪೂರ್ಣ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಕಥೊಲಿಕ್ ಸಭಾ ಮನವಿ ಮಾಡಿದೆ.
ಅಲ್ಪಸಂಖ್ಯಾತರು, ದಲಿತರು ಹಾಗೂ ಇತರ ದುರ್ಬಲ ವರ್ಗಗಳಿಗೆ ಸೇರಿದ ಅರ್ಹ ಮತದಾರರ ಹೆಸರುಗಳು ಯಾವುದೇ ಅನ್ಯಾಯದ ಕಾರಣದಿಂದ ಪಟ್ಟಿಯಿಂದ ಕೈಬೀಳದಂತೆ ವಿಶೇಷ ಮುನ್ನೆಚ್ಚರಿಕೆ ವಹಿಸಬೇಕು. SIR ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ, ನಿಷ್ಪಕ್ಷಪಾತತೆ ಹಾಗೂ ನಿಯಮಾನುಸಾರ ಕ್ರಮಗಳನ್ನು ಖಚಿತಪಡಿಸುವ ಮೂಲಕ ಚುನಾವಣಾ ವ್ಯವಸ್ಥೆಯ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಕಾಪಾಡಬೇಕು ಎಂದು ಒತ್ತಾಯಿಸಲಾಯಿತು.
ಫಾರಂ-7 ಅರ್ಜಿಗಳ ದುರುಪಯೋಗ ಸೇರಿದಂತೆ SIRಗೆ ಸಂಬಂಧಿಸಿದ ಗೊಂದಲಗಳಿಗೆ ತೆರೆ ಎಳೆಯಲು ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆಯನ್ನೇ ಸಂಪೂರ್ಣವಾಗಿ ರದ್ದುಗೊಳಿಸುವಂತೆ ಕೂಡ ಮನವಿಯಲ್ಲಿ ಆಗ್ರಹಿಸಲಾಗಿದೆ.
ನಿಯೋಗದಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶದ ಅಧ್ಯಕ್ಷ ಮೆಲ್ವಿನ್ ಆರಾನ್ಹಾ ಶಿರ್ವ, ಕಾರ್ಯದರ್ಶಿ ಜುಲಿಯೆಟ್ ಡಿಸೋಜಾ, ಕೋಶಾಧಿಕಾರಿ ಉರ್ಬಾನ್ ಲೂವಿಸ್, ನಿಯೋಜಿತ ಅಧ್ಯಕ್ಷ ಲೂಯಿಸ್ ಡಿಸೋಜಾ, ಉಡುಪಿ ವಲಯ ಅಧ್ಯಕ್ಷ ಕಿರಣ್ ಲೂವಿಸ್, ಮಾಜಿ ಅಧ್ಯಕ್ಷರಾದ ಅಲ್ಫೋನ್ಸ್ ಡಿಕೋಸ್ತಾ, ವಲೇರಿಯನ್ ಫೆರ್ನಾಂಡಿಸ್, ಮೇರಿ ಡಿಸೋಜಾ, ಸಮುದಾಯದ ಮುಖಂಡರಾದ ವೆರೋನಿಕಾ ಕರ್ನೆಲಿಯೋ, ರೋಶನಿ ಒಲಿವರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.





