ಉತ್ತರ ಕನ್ನಡ: ಜಿಲ್ಲೆಯಲ್ಲಿರುವ ಬುಡಕಟ್ಟು ಸಮುದಾಯದ ಜನತೆಗೆ ಸರ್ಕಾರದ ಎಲ್ಲಾ ಯೋಜನೆಗಳ ಸೌಲಭ್ಯಗಳನ್ನು ತಲುಪಿಸಲು ಅಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹೇಳಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ‘ಧರ್ತಿ ಅಬಾ ಅಭಿಯಾನ’ದ ಅರಿವು ಮತ್ತು ಬೆನಿಫಿಟ್ ಸ್ಯಾಚುರೇಷನ್ ಕಾರ್ಯಕ್ರಮದ ಅಂಗವಾಗಿ ‘ಜನ್ ಭಾಗೀದಾರ್–ಸಬ್‌ಸೆ ದೂರ್ ಸಬ್‌ಸೆ ಪೆಹಲೇ’ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಧರ್ತಿ ಅಬಾ ಜನಜಾತೀಯ ಉತ್ಕರ್ಷ ಅಭಿಯಾನದಡಿ, ಜಿಲ್ಲೆಯ ಪರಿಶಿಷ್ಟ ಪಂಗಡ ಸಮುದಾಯದ ಜನರು ಹೆಚ್ಚಾಗಿ ವಾಸಿಸುವ ಗ್ರಾಮ ಪಂಚಾಯತ್‌ಗಳಲ್ಲಿ ಮೇ 18ರಿಂದ 25ರವರೆಗೆ ವಿಶೇಷ ಶಿಬಿರಗಳನ್ನು ಆಯೋಜಿಸಲು ಸೂಚಿಸಲಾಗಿದೆ. ಸರ್ಕಾರದ ಹಲವು ಯೋಜನೆಗಳು ಮತ್ತು ದಾಖಲೆಗಳು ಡಿಜಿಟಲೀಕರಣಗೊಂಡಿದ್ದರೂ, ಅವುಗಳ ಬಗ್ಗೆ ಬುಡಕಟ್ಟು ಜನರಲ್ಲಿ ಅರಿವು ಕಡಿಮೆಯಿದೆ.
ಆದ್ದರಿಂದ ಅಗತ್ಯ ದಾಖಲೆಗಳನ್ನು ಅಪ್‌ಡೇಟ್ ಮಾಡಿಸಿ, ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸಹಾಯ ಮಾಡಬೇಕು ಎಂದು ಹೇಳಿದರು. ಹಳಿಯಾಳ, ಭಟ್ಕಳ, ಜೋಯಿಡಾ ಹಾಗೂ ಮುಂಡಗೋಡು ತಾಲ್ಲೂಕುಗಳ 31 ಗ್ರಾಮ ಪಂಚಾಯತ್ ವ್ಯಾಪ್ತಿಯ 21 ಗ್ರಾಮಗಳಲ್ಲಿ ಶಿಬಿರಗಳನ್ನು ನಡೆಸಲಾಗುತ್ತದೆ.
ಈ ಸುದ್ದಿ ಓದಿದ್ದೀರಾ? ಜೋಯಿಡಾ | ಹಾವು ಕಡಿದು ಗೋವಾ ಕಾಂಗ್ರೆಸ್ ಉಪಚುನಾವಣಾ ಅಭ್ಯರ್ಥಿ ಡಾ. ಕೇತನ್ ಭಾಟಿಕರ್ ದುರ್ಮರಣ
ಈ ಶಿಬಿರಗಳಲ್ಲಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಆಯುಷ್ಮಾನ್ ಭಾರತ್ ಕಾರ್ಡ್, ಜಾತಿ ಮತ್ತು ನಿವಾಸ ಪ್ರಮಾಣ ಪತ್ರ, ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ ಸೇರಿದಂತೆ ವಿವಿಧ ದಾಖಲೆಗಳ ಸೇವೆಗಳು ಒದಗಿಸಲಾಗುತ್ತದೆ. ಇದಲ್ಲದೆ, ವೃದ್ದಾಪ್ಯ, ವಿಧವಾ ಮತ್ತು ದಿವ್ಯಾಂಗ ಪಿಂಚಣಿಗಳು, ಮನರೇಗಾ ಉದ್ಯೋಗ, ಪಿಎಂ ವಿಶ್ವಕರ್ಮ ಮತ್ತು ಮುದ್ರಾ ಸಾಲಗಳು, ಮಾತೃವಂದನಾ ಯೋಜನೆ, ಐಸಿಡಿಎಸ್ ಸೌಲಭ್ಯಗಳು, ಲಸಿಕೆಕರಣ ಹಾಗೂ ಸಿಕಲ್ ಸೆಲ್ ಅನಿಮಿಯಾ ಕುರಿತು ಜಾಗೃತಿ ಮತ್ತು ಆರೋಗ್ಯ ತಪಾಸಣೆ ಕೂಡ ನಡೆಯಲಿದೆ.
ಆದಿ ಸೇವಾ ಕೇಂದ್ರಗಳ ಮೂಲಕ ಸಾರ್ವಜನಿಕ ಅಹವಾಲುಗಳನ್ನೂ ಸ್ವೀಕರಿಸಲಾಗುತ್ತದೆ. ಶಿಬಿರಗಳ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಿ, ಬುಡಕಟ್ಟು ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಲ್ಲಾ ಸೌಲಭ್ಯಗಳನ್ನು ಪಡೆಯುವಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ ನಾಯಕ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಮಂಜುನಾಥ ರೇವಣಕರ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಉಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.




