ರಾಜ್ಯದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಳ್ಳುತ್ತಿರುವ ಪ್ರಕರಣವು ಮುಂದುವರಿದಿದ್ದು, ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಡೇಲಡಕು ಗೊಲ್ಲರಹಟ್ಟಿಯಲ್ಲಿ ಕಲುಷಿತ ನೀರು ಕುಡಿದು 13ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ.
ಗ್ರಾಮದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ಸ್ಥಳದಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆದಿರುವ ಸಂಬಂಧ ಕುಡಿಯುವ ನೀರಿನ ಪೈಪುಗಳು ಒಡೆದಿದ್ದು, ಚರಂಡಿ ನೀರು ಮಿಶ್ರಣವಾಗಿರುವ ಪರಿಣಾಮ ಕಲುಷಿತ ನೀರು ಸೇವಿಸಿದ ಗ್ರಾಮಸ್ಥರಿಗೆ ವಾಂತಿ-ಭೇದಿ ಕಾಣಿಸಿಕೊಂಡಿದ್ದು, ಕೂಡ್ಲಿಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
“ತಾಲೂಕು ಆಡಳಿತ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ನೀರು ಸರಬರಾಜು ಮಾಡುವ ಸಿಬ್ಬಂದಿ ಕಾಳಜಿ ವಹಿಸುವುದಿಲ್ಲ. ಗ್ರಾಮಸ್ಥರ ಆರೋಗ್ಯದೊಂದಿಗೆ ಆಟವಾಡುತ್ತಿದ್ದಾರೆ” ಎಂದು ದೊಡ್ಡ ಗೊಲ್ಲರಹಟ್ಟಿ ಗ್ರಾಮಸ್ಥರ ಆರೋಪಿಸಿದ್ದಾರೆ.
“ಕುಪ್ಪಿನಕೆರೆ ಗ್ರಾಮದ ಪಕ್ಕದ ರಸ್ತೆಯ ಹಳ್ಳ ಹಾಗೂ ಕಟ್ಟೆ ಬಳಿ ಮೂರ್ನಾಲ್ಕು ಕಡೆ ಪೈಪ್ ಒಡೆದಿದೆ. ಕಳೆದೆರಡು ದಿನದಿಂದ ಬಡೇಲಡಕು ದೊಡ್ಡಗೊಲ್ಲರಹಟ್ಟಿ ಗ್ರಾಮಕ್ಕೆ ಕಲುಷಿ ನೀರು ಸರಬರಾಜು ಆಗಿದ್ದು, ನೀರನ್ನು ಕುಡಿದಿದ್ದ ಗ್ರಾಮಸ್ಥರಲ್ಲಿ ವಾಂತಿಭೇದಿ ಶುರುವಾಗಿದೆ” ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಯುವನಿಧಿ | ಕನಿಷ್ಠ 5 ವರ್ಷಗಳ ನಿರುದ್ಯೋಗಿಗಳಿಗೂ ಯೋಜನೆ ಅನ್ವಯಿಸಲು ಒತ್ತಾಯ
ಸದ್ಯ ಕಲುಷಿತ ನೀರಿನ ಮಾದರಿಯನ್ನು ಬಳ್ಳಾರಿ ಪರೀಕ್ಷಾ ಕೇಂದ್ರಕ್ಕೆ ರವಾನೆ ಮಾಡಲಾಗಿದೆ. ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡವರನ್ನು ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.