ವಿಜಯನಗರ ಜಿಲ್ಲೆಯಲ್ಲಿ ಜೀತ ಕಾರ್ಮಿಕ ಪದ್ಧತಿಯ ವಿರುದ್ಧ ಜಿಲ್ಲಾಡಳಿತವು ಕಾರ್ಯಾಚರಣೆ ನಡೆಸಿದೆ. ಇಟ್ಟಿಗೆ ಕಾರ್ಖಾನೆಯೊಂದರಲ್ಲಿ ಅತ್ಯಂತ ಅಮಾನವೀಯ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದ 10 ಮಕ್ಕಳು, 11 ಮಹಿಳೆಯರು ಹಾಗೂ 16 ಪುರುಷರು ಸೇರಿದಂತೆ ಒಟ್ಟು 37 ವಲಸೆ ಕಾರ್ಮಿಕರನ್ನು ಅಧಿಕಾರಿಗಳು ರಕ್ಷಿಸಿದ್ದಾರೆ.
ಜಿಲ್ಲೆಯ ಮರಿಯಮ್ಮನಹಳ್ಳಿ ಹೋಬಳಿಯ ನಂದಿಬಂಡಿ ಗ್ರಾಮದಲ್ಲಿರುವ ಇಟ್ಟಿಗೆ ಕಾರ್ಖಾನೆಯಲ್ಲಿ ಈ ದಾರುಣ ಜೀತಪದ್ದತಿ ಬೆಳಕಿಗೆ ಬಂದಿದೆ. ರಕ್ಷಿಸಲ್ಪಟ್ಟವರೆಲ್ಲರೂ ಒಡಿಶಾದ ಬಾಲಂಗೀರ್ ಮತ್ತು ನಬರಂಗ್‌ಪುರ ಜಿಲ್ಲೆಗಳ ನಿವಾಸಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.
ಬೆಳಗಾವಿ ಮೂಲದ ಸ್ಪಂದನಾ ಎಂಬ ಎನ್‌ಜಿಒದ ಮುಖಂಡರು ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರಿಗೆ ದೂರು ನೀಡಿದ್ದರು. ಅವರ ದೂರಿನ ಆಧಾರದ ಮೇಲೆ, ಸಹಾಯಕ ಆಯುಕ್ತ ವಿವೇಕಾನಂದ ಅವರ ನೇತೃತ್ವದ ತನಿಖಾ ತಂಡವು ಇಟ್ಟಿಗೆ ಕಾರ್ಖಾನೆಯ ಮೇಲೆ ದಿಢೀರ್ ದಾಳಿ ನಡೆಸಿದೆ. ಈ ವೇಳೆ, ಅಲ್ಲಿನ ವಲಸೆ ಕಾರ್ಮಿಕರು ಯಾವುದೇ ಕನಿಷ್ಠ ಮೂಲಭೂತ ಸೌಲಭ್ಯಗಳೂ ಇಲ್ಲದೆ ಅತ್ಯಂತ ದುಸ್ಥಿತಿಯಲ್ಲಿ ವಾಸಿಸುತ್ತಿರುವುದು ಕಂಡುಬಂದಿದೆ. ಕೇವಲ ನಾಲ್ಕು ಅಡಿ ಅಗಲದ ಅತ್ಯಂತ ಸಣ್ಣ ಗುಡಿಸಲುಗಳಲ್ಲಿ ಇಡೀ ಕುಟುಂಬಗಳನ್ನು ಇರಿಸಲಾಗಿತ್ತು ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ತನಿಖೆಯ ವೇಳೆ ಬಯಲಾದ ವಿವರಗಳ ಪ್ರಕಾರ, ಸುಮಾರು ಆರು ತಿಂಗಳ ಹಿಂದೆ ಉತ್ತಮ ಸಂಬಳ ಮತ್ತು ಸೌಕರ್ಯಗಳ ಆಮಿಷವೊಡ್ಡಿ ಸಂತ್ರಸ್ತರನ್ನು ಒಡಿಶಾದಿಂದ ವಿಜಯನಗರಕ್ಕೆ ಕರೆತರಲಾಗಿತ್ತು. ಆರಂಭದಲ್ಲಿ ಪ್ರತಿಯೊಬ್ಬ ಕಾರ್ಮಿಕನಿಗೂ 40 ಸಾವಿರ ರೂಪಾಯಿಗಳ ಮುಂಗಡ ಹಣ ನೀಡಿ, ಕೇವಲ ಆರು ತಿಂಗಳ ಕಾಲ ಮಾತ್ರ ಕೆಲಸ ಮಾಡಿಸಿಕೊಂಡು ದುಡಿಮೆಗೆ ತಕ್ಕಂತೆ ಪೂರ್ಣ ಸಂಬಳ ನೀಡುವುದಾಗಿ ಕಾರ್ಖಾನೆಯ ಮಾಲೀಕರು ಭರವಸೆ ನೀಡಿದ್ದರು ಎಂದು ತಿಳಿದುಬಂದಿದೆ.
ಆದರೆ ವಾಸ್ತವದಲ್ಲಿ, ಈ ವಲಸೆ ಕಾರ್ಮಿಕರು ವಾರಪೂರ್ತಿ ಕಠಿಣವಾಗಿ ದುಡಿದರೂ ಅವರ ಇಡೀ ಕುಟುಂಬದ ನಿರ್ವಹಣೆಗೆ ಕೇವಲ 500 ರೂಪಾಯಿಗಳನ್ನು ಮಾತ್ರ ನೀಡಲಾಗುತ್ತಿತ್ತು ಎಂದು ಸಂತ್ರಸ್ತರು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಎಚ್ಚರ: ಎಸ್‌ಐಆರ್ – ಮತಪಟ್ಟಿ ಪರಿಶೀಲನೆಯಲ್ಲ, ಪೌರತ್ವ ಪರೀಕ್ಷೆ!
ಒಪ್ಪಂದದ ಪ್ರಕಾರ, ನಿಗದಿತ ಆರು ತಿಂಗಳ ಅವಧಿ ಪೂರ್ಣಗೊಂಡ ಬಳಿಕ ಕೆಲ ಕಾರ್ಮಿಕರು ತಮ್ಮ ಸ್ವಂತ ಊರಿಗೆ ಮರಳಲು ಪ್ರಯತ್ನಿಸಿದಾಗ, ಮಾಲೀಕರು ನೀವು ಮುಂಗಡ ಹಣ ಪಡೆದುಕೊಂಡಿರುವುದರಿಂದ ಇಲ್ಲಿಂದ ಹೋಗಲು ಸಾಧ್ಯವಿಲ್ಲ ಎಂದು ಹೇಳಿ ಪ್ರಾಣ ಬೆದರಿಕೆ ಹಾಕುತ್ತಿದ್ದರು. ಅಷ್ಟೇ ಅಲ್ಲದೆ, ಈ ಅಸಹಾಯಕ ಕಾರ್ಮಿಕರು ಹೊರಜಗತ್ತಿನ ಯಾರೊಂದಿಗೂ ಸಂಪರ್ಕ ಸಾಧಿಸದಂತೆ ಮತ್ತು ಅಲ್ಲಿಂದ ತಪ್ಪಿಸಿಕೊಳ್ಳದಂತೆ ತಡೆಯಲು ಕಾರ್ಖಾನೆಯ ಸುತ್ತ ಕಾವಲುಗಾರರನ್ನು ನಿಯೋಜಿಸಿ ಕಟ್ಟುನಿಟ್ಟಿನ ನಿಗಾ ಇಡಲಾಗಿತ್ತು ಎಂಬ ಆಘಾತಕಾರಿ ಸತ್ಯವೂ ಹೊರಬಂದಿದೆ.
ಕಾರ್ಖಾನೆಯ ಈ ದೌರ್ಜನ್ಯ ಮತ್ತು ಕಾನೂನುಬಾಹಿರ ಕೃತ್ಯ ಸಂಪೂರ್ಣವಾಗಿ ಬೆಳಕಿಗೆ ಬಂದ ತಕ್ಷಣವೇ ಎಚ್ಚೆತ್ತ ವಿಜಯನಗರ ಜಿಲ್ಲಾಡಳಿತವು ಎಲ್ಲ 37 ಕಾರ್ಮಿಕರನ್ನು ಮಾಲೀಕರ ಕಪಿಮುಷ್ಟಿಯಿಂದ ಬಿಡಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ.
ಸದ್ಯ ಸಂತ್ರಸ್ತರಿಗೆ ಅಗತ್ಯವಿರುವ ಆಹಾರ ಮತ್ತು ಆಶ್ರಯದ ವ್ಯವಸ್ಥೆಯನ್ನು ಮಾಡಲಾಗಿದ್ದು, ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ. ಇಡೀ ಪ್ರಕರಣವು ಜೀತ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆಯ ಉಲ್ಲಂಘನೆ ಹಾಗೂ ಮಾನವ ಕಳ್ಳಸಾಗಣೆಯ ಗಂಭೀರ ಶಂಕೆಯನ್ನು ಹುಟ್ಟುಹಾಕಿದೆ. ಈ ನಿಟ್ಟಿನಲ್ಲಿ ಪೊಲೀಸ್ ಮತ್ತು ಸಾರ್ವಜನಿಕ ಇಲಾಖೆಗಳು ತನಿಖೆಯನ್ನು ತೀವ್ರಗೊಳಿಸಿವೆ.



