ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಮಿತಿ ವತಿಯಿಂದ ಜುಲೈ 3ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ದಲಿತ ಜನಾಗ್ರಹ ಸಮಾವೇಶ ಹಾಗೂ ಅನಿರ್ದಿಷ್ಟ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬೆಳಗಾವಿ ವಿಭಾಗೀಯ ಸಂಚಾಲಕ ಸಂಜು ಕಂಬಾಗಿ ತಿಳಿಸಿದರು.
ಸಮಾವೇಶದಲ್ಲಿ ವಿಜಯಪುರ ಜಿಲ್ಲೆಯಿಂದ ಸುಮಾರು 500, ಬೆಳಗಾವಿ ವಿಭಾಗದಿಂದ 3,500 ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 30 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
“ಭೂಮಿ, ವಸತಿ, ಸರ್ಕಾರಿ ಉದ್ಯೋಗಗಳ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ, ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಏಕಗವಾಕ್ಷಿ ನೀತಿ, ಶಿಕ್ಷಣಕ್ಕೆ ಹೆಚ್ಚಿನ ಅನುದಾನ, ಭೂರಹಿತ ಕುಟುಂಬಗಳಿಗೆ ಭೂಮಿ, ಬೌದ್ಧ ಅಭಿವೃದ್ಧಿ ನಿಗಮಕ್ಕೆ ₹500 ಕೋಟಿ ಅನುದಾನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗುವುದು” ಎಂದು ತಿಳಿಸಿದರು.
“ದಲಿತರ ಅಭಿವೃದ್ಧಿಗೆ ಮೀಸಲಾದ ಹಣವನ್ನು ಮೂಲ ಉದ್ದೇಶಕ್ಕೇ ಬಳಸಬೇಕು, ಭೂ ಹಕ್ಕುಗಳನ್ನು ರಕ್ಷಿಸಬೇಕು, ವಸತಿ ಹಾಗೂ ಉದ್ಯೋಗದ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸಬೇಕು” ಎಂದು ಆಗ್ರಹಿಸಿದರು.
“ಎಸ್‌ಐಆರ್ ರದ್ದುಗೊಳಿಸುವುದು, ಜಾತಿ ಜನಗಣತಿ ವರದಿ ಸಾರ್ವಜನಿಕಗೊಳಿಸುವುದು, ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆಗೆ ಅಗತ್ಯ ಮೂಲಸೌಕರ್ಯ ಒದಗಿಸುವುದು ಸೇರಿದಂತೆ ಒಟ್ಟು 19 ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಲಾಗುವುದು” ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಹಿಳಾ ರಾಜ್ಯ ಸಂಚಾಲಕಿ ಪ್ರತಿಭಾ ಹೊಸಮನಿ, ಜಿಲ್ಲಾ ಸಂಚಾಲಕ ಶಿವು ಮೇಲಿನಮನಿ, ಮಹಿಳಾ ಜಿಲ್ಲಾ ಸಂಚಾಲಾಕಿ ಸವಿತಾ ವಗ್ಗರ, ಶಂಕರ ಛಲವಾದಿ, ಚೇತನ ತೋರವಿ, ವಿಶ್ವಾಸ್ ಕಾಂಬಳೆ, ಶಶಿಧರ ನಾಯ್ಕೋಡಿ ಇದ್ದರು.




