2ನೇ ನ್ಯಾಯಾಧಿಕರಣದ ತೀರ್ಪಿನಂತೆ 524.256 ಅಧಿಸೂಚನೆ ಹೊರಡಿಸಿ, ಆಲಮಟ್ಟಿ ಜಲಾಶಯ ಹಿನ್ನೀರಿನಿಂದ ಮುಳುಗಡೆಗೆ ಒಳಗಾಗುವ 22 ಗ್ರಾಮಗಳ ರೈತರಿಗೆ ಸೂಕ್ತ ಪರಿಹಾರ, ಸ್ಥಳಾಂತರ ಹಾಗೂ ಸಮಗ್ರ ನೀರಾವರಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬಸವನ ಬಾಗೇವಾಡಿಯಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು.
ಪಟ್ಟಣದ ಬಸವೇಶ್ವರ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಬಸ್ ನಿಲ್ದಾಣ ಮಾರ್ಗವಾಗಿ ತಹಸೀಲ್ದಾರ್ ಕಚೇರಿವರೆಗೆ ಸಾಗಿತು. ಬಳಿಕ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನಾಕಾರರು ಧರಣಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 2ನೇ ನ್ಯಾಯಾಧಿಕರಣದ ತೀರ್ಪಿನಂತೆ ತಕ್ಷಣವೇ 524.256 ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಬಾಗಲಕೋಟೆ ವಿಜಯಪುರ ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಗೊಳ್ಳುತ್ತಿರುವ 22 ಗ್ರಾಮಗಳ ರೈತರಿಗೆ ನ್ಯಾಯಸಮ್ಮತ ಪರಿಹಾರ, ಶಾಶ್ವತ ಸ್ಥಳಾಂತರ ಹಾಗೂ ಸಮಗ್ರ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಬಿ ಭಗವಾನರೆಡ್ಡಿ ಮಾತನಾಡಿ, “ರಾಜ್ಯದ ರೈತರಿಗೆ ಅಗತ್ಯವಿರುವ ನೀರನ್ನು ಸಮರ್ಪಕವಾಗಿ ಒದಗಿಸದೆ, ರಾಜ್ಯದ ನೀರನ್ನು ಇತರೆ ರಾಜ್ಯಗಳಿಗೆ ಹರಿಸಲಾಗುತ್ತಿದೆ. ಈ ಮಲತಾಯಿ ಧೋರಣೆ ಮುಂದುವರಿದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಬಳಿಕ ತಾಲೂಕು ದಂಡಾಧಿಕಾರಿ ವೈ.ಎಸ್. ಸೋಮನಕಟ್ಟಿ ಅವರ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಅನಿಲ ಹೊಸಮನಿ, ಸುರೇಶ ಜಿ ಬಿ ವಿಠ್ಠಲ್ ಬಿರಾದಾರ, ಅಬ್ದುಲ್ ಖಧೀರ್, ಅಕ್ರಮ ಮಾಶ್ಯಳಕರ, ಗಿರಿಮಲ್ಲಪ್ಪ ದೊಡಮನಿ, ಹಣಮಂತರಾಯ ಗುಣಕಿ ಸೇರಿದಂತೆ ವಿವಿಧ ರೈತ ಸಂಘಟನೆಗಳ ಮುಖಂಡರು ಹಾಗೂ ನೂರಾರು ರೈತರು ಭಾಗವಹಿಸಿದ್ದರು.




