ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆ ಹಣದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಪ್ರಮುಖ ಆರೋಪಿ ಅವಿನಾಶ್ ಶುಕ್ಲಾ ವಿಚಾರಣೆ ವೇಳೆ ಮಂದಿರದ ಆವರಣದಲ್ಲಿ ಭದ್ರತಾ ಲೋಪಗಳು ಬೆಳಕಿಗೆ ಬಂದಿದೆ. ಸಿಸಿಟಿವಿ ದೃಶ್ಯಾವಳಿಗಳು ಪ್ರತಿ 45 ದಿನಗಳಿಗೊಮ್ಮೆ ಸ್ವಯಂಚಾಲಿತವಾಗಿ ಅಳಿಸಿಹೋಗುತ್ತಿತ್ತು. ಅದನ್ನೇ ಬಂಡವಾಳವಾಗಿಸಿಕೊಂಡು ಆರೋಪಿಗಳು ತಿಂಗಳುಗಳ ಕಾಲ ಕೋಟ್ಯಂತರ ರೂಪಾಯಿ ಲೂಟಿ ಮಾಡಿರುವುದು ಪೊಲೀಸ್ ವಿಚಾರಣೆಯಿಂದ ಬೆಳಕಿಗೆ ಬಂದಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಜಿಲ್ಲಾ ಜೈಲಿನಲ್ಲಿ ಸುಮಾರು ಎರಡು ಗಂಟೆಗಳ ಕಾಲ ನಡೆದ ಕಸ್ಟಡಿ ವಿಚಾರಣೆಯ ಸಂದರ್ಭದಲ್ಲಿ ಆರೋಪಿ ಅವಿನಾಶ್ ಶುಕ್ಲಾ, ತಾವು ಮಂದಿರದ ಸಿಸಿಟಿವಿ ಕ್ಯಾಮೆರಾಗಳ ಸ್ಥಳ, ಪ್ರವೇಶ-ನಿರ್ಗಮನ ಮಾರ್ಗಗಳು ಮತ್ತು ಸಿಬ್ಬಂದಿಯ ಓಡಾಟದ ಸಮಯವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಇದನ್ನೂ ಓದಿ: ರಾಮಮಂದಿರ ಲೂಟಿ; ಯಾರನ್ನು ರಕ್ಷಿಸಲಾಗುತ್ತಿದೆ: ಪ್ರಧಾನಿ ಮೋದಿಗೆ ಕೇಜ್ರಿವಾಲ್ ಪ್ರಶ್ನೆ
ಅಯೋಧ್ಯೆ ಪೊಲೀಸರ ಪ್ರಕಾರ, ದೇಣಿಗೆ ಹಣವನ್ನು ಎಣಿಕೆ ಮಾಡುವ ಕೊಠಡಿಯಲ್ಲಿ ಕ್ಯಾಮೆರಾಗಳ ಕಣ್ಣಿಗೆ ಬೀಳದಂತೆ ಆರೋಪಿಗಳು ಅತ್ಯಂತ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದರು. ಹಣ ಎಣಿಕೆ ಪ್ರಕ್ರಿಯೆಯಲ್ಲಿ ಒಬ್ಬ ಆರೋಪಿ ಹಣವನ್ನು ಕದಿಯುವಾಗ, ಉಳಿದ ಆರೋಪಿಗಳು ಕ್ಯಾಮೆರಾಗಳ ವೀಕ್ಷಣೆಗೆ ಅಡ್ಡಿಯಾಗುವಂತೆ ಆತನ ಸುತ್ತಲೂ ನಿಲ್ಲುತ್ತಿದ್ದರು. ಈ ಮೂಲಕ ‘ಮಾನವ ತಡೆ’ ಸೃಷ್ಟಿಸಿ ಕ್ಯಾಮೆರಾಗಳ ಕಣ್ಣಿಗೆ ಸಿಗದಂತೆ ಕಳ್ಳತನ ಮಾಡುತ್ತಿದ್ದರು.
ಲಭ್ಯವಿರುವ ಇತ್ತೀಚಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಹಣದ ಕಂತೆಗಳನ್ನು ಬ್ಯಾಂಕಿನ ಅಧಿಕೃತ ಕಂಟೇನರ್ ಅಥವಾ ಟ್ರೇಗಳಲ್ಲಿ ಇಡುವ ಬದಲು, ನೇರವಾಗಿ ಕೆಲವು ನಿರ್ದಿಷ್ಟ ವ್ಯಕ್ತಿಗಳ ಕೈಗೆ ಮತ್ತು ಬ್ಯಾಗ್‌ಗಳಿಗೆ ಹಸ್ತಾಂತರಿಸುತ್ತಿರುವುದು ಪತ್ತೆಯಾಗಿದೆ.
ಸಿಸಿಟಿವಿ ದೃಶ್ಯಾವಳಿಗಳು ಪ್ರತಿ 45 ದಿನಗಳಿಗೊಮ್ಮೆ ಡಿಲೀಟ್ ಆಗಿ ಹಳೆಯ ದೃಶ್ಯಗಳ ಬದಲಾಗಿ ಹೊಸದಾಗಿ ರೆಕಾರ್ಡ್ ಆಗುವ ತಾಂತ್ರಿಕ ವ್ಯವಸ್ಥೆ ಹೊಂದಿದ್ದರಿಂದ, ತಿಂಗಳುಗಳಿಂದ ನಡೆಯುತ್ತಿದ್ದ ಈ ವ್ಯವಸ್ಥಿತ ಕಳ್ಳತನದ ಹಳೆಯ ಸಾಕ್ಷ್ಯಗಳು ಸಿಗದಂತೆ ಕಳ್ಳರಿಗೆ ನೆರವಾಗಿತ್ತು. ಇದು ತನಿಖಾಧಿಕಾರಿಗಳಿಗೂ ದೊಡ್ಡ ಸವಾಲಾಗಿದೆ.
ವಿಚಾರಣೆಯ ವೇಳೆ ಆರೋಪಿಗಳು ಕದ್ದ ನಗದು ಹಣವನ್ನು ತಕ್ಷಣವೇ ಹೊರಗೆ ಸಾಗಿಸುತ್ತಿರಲಿಲ್ಲ. ಬದಲಿಗೆ, ಮಂದಿರದ ಸಂಕೀರ್ಣದೊಳಗಿರುವ ಶೌಚಾಲಯಗಳಲ್ಲಿ ಮೊದಲು ಹಣವನ್ನು ಬಚ್ಚಿಡುತ್ತಿದ್ದರು. ಭದ್ರತಾ ತಪಾಸಣೆಯಿಂದ ಪಾರಾಗಲು ನಂತರದ ದಿನಗಳಲ್ಲಿ ಅಲ್ಪಸ್ವಲ್ಪ ಪ್ರಮಾಣದಲ್ಲಿ ಆ ಹಣವನ್ನು ಮಂದಿರದ ಆವರಣದಿಂದ ಹೊರಗೆ ಸಾಗಿಸುತ್ತಿದ್ದರು ಎಂದು ಶುಕ್ಲಾ ಬಹಿರಂಗಪಡಿಸಿದ್ದಾನೆ.
ಇದನ್ನೂ ಓದಿ: ರಾಮನ ಹೆಸರಲ್ಲಿ ತನ್ನ ಕೋಟೆಯನ್ನೇ ಟೊಳ್ಳು ಮಾಡಿಕೊಂಡ ಆರ್‌ಎಸ್‌ಎಸ್
ಅತ್ಯಂತ ಕಟ್ಟುನಿಟ್ಟಿನ ಭದ್ರತೆ ಹೊಂದಿರುವ ದೇಣಿಗೆ ಎಣಿಕೆ ಕೊಠಡಿಯ ಎರಡು ಕೀಲಿ ಕೈಗಳ ಪೈಕಿ ಒಂದು ಕೀಲಿ ಕೈ, ಬ್ಯಾಂಕ್ ಅಧಿಕಾರಿಗಳ ಬಳಿ ಇರುತ್ತಿತ್ತು. ಆದರೆ, ಎಣಿಕೆ ಪ್ರಕ್ರಿಯೆಯಲ್ಲಿ ಯಾವುದೇ ಅಧಿಕೃತ ಜವಾಬ್ದಾರಿ ಇಲ್ಲದಿದ್ದ ಸಹ-ಆರೋಪಿ ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಎಂಬಾತನ ಬಳಿ ಮತ್ತೊಂದು ಕೀಲಿ ಕೈ ಇರುತ್ತಿತ್ತು ಎಂಬ ಅಂಶ ಬಯಲಾಗಿದೆ. ಈ ಕೀಲಿ ಕೈ ಬಳಸಿ ಆತ ಅನಧಿಕೃತವಾಗಿ ಕೊಠಡಿ ಪ್ರವೇಶಿಸುತ್ತಿದ್ದನೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರು ಇದುವರೆಗೆ ಬಂಧಿತ ಆರೋಪಿಗಳಿಂದ ಒಟ್ಟು ₹79.85 ಲಕ್ಷ ನಗದು, 1121 ಯುಎಸ್ ಡಾಲರ್, 11 ಗ್ರಾಂ ಚಿನ್ನ ಹಾಗೂ 375 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ಅವಿನಾಶ್ ಶುಕ್ಲಾನಿಂದಲೇ ಅತಿ ಹೆಚ್ಚು ಅಂದರೆ ₹20.39 ಲಕ್ಷ ನಗದು, 1121 ಡಾಲರ್, ಎರಡು ಚಿನ್ನದ ಸರಗಳು ಹಾಗೂ ಒಂದು ಚಿನ್ನದ ಉಂಗುರವನ್ನು ವಶಪಡಿಸಿಕೊಳ್ಳಲಾಗಿದೆ. ಇತರ ಆರೋಪಿಗಳಾದ ಕರುಣೇಶ್ ಪಾಂಡೆ (₹18.07 ಲಕ್ಷ), ಅನುಕಲ್ಪ್ ಮಿಶ್ರಾ (₹16.82 ಲಕ್ಷ), ಲವ್ ಕುಶ್ ಮಿಶ್ರಾ (₹14.25 ಲಕ್ಷ), ರಾಮಶಂಕರ್ ಮಿಶ್ರಾ (₹7.32 ಲಕ್ಷ), ಮನೀಶ್ ಯಾದವ್ (₹2 ಲಕ್ಷ) ಮತ್ತು ಟಿನ್ನು (₹1 ಲಕ್ಷ) ವಶಪಡಿಸಿಕೊಳ್ಳಲಾಗಿದೆ.




