ದಕ್ಷಿಣ ಕೊರಿಯಾದ ಜಾಗತಿಕ ಮೆಟಲ್-ಕಟಿಂಗ್ ಮೆಷಿನ್ ತಯಾರಿಕಾ ದೈತ್ಯ ಡಿ.ಎನ್. ಸಲ್ಯೂಷನ್ಸ್ ಕಂಪನಿಯು ಆಗಸ್ಟ್ 26ರಿಂದ ಕರ್ನಾಟಕದಲ್ಲಿ ಕಾರ್ಯಾರಂಭ ಮಾಡಲಿದ್ದು, 400 ಎಂಜಿನಿಯರ್‌ಗಳಿಗೆ ಉದ್ಯೋಗ ನೀಡುತ್ತಿದೆ. ವಿಜಯಪುರದ ಬಿ.ಎಲ್.ಡಿ.ಇ. ಎಂಜಿನಿಯರಿಂಗ್ ಕಾಲೇಜಿನ 8 ವಿದ್ಯಾರ್ಥಿಗಳು ಹಾಗೂ ಶ್ರೀ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್ ಕಾಲೇಜಿನ 12 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 20 ವಿದ್ಯಾರ್ಥಿಗಳು ಈಗಾಗಲೇ ಉದ್ಯೋಗ ಪಡೆದಿದ್ದಾರೆ ಎಂದು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
ಈ ಕಂಪನಿಯಲ್ಲಿ ಉದ್ಯೋಗ ಪಡೆಯುವುದು ಹೆಮ್ಮೆಯ ಸಂಗತಿಯಾಗಿದ್ದು, ಮೊದಲ ಹಂತದಲ್ಲಿ ಆಯ್ಕೆಯಾದ 400 ಯುವಕರಲ್ಲಿ ಉತ್ತರ ಕರ್ನಾಟಕದ 117 ಮಂದಿಗೆ ಅವಕಾಶ ದೊರೆತಿರುವುದು ಸಂತಸದ ವಿಷಯ ಎಂದು ಸಚಿವರು ಹೇಳಿದರು.
ಡಿ.ಎನ್. ಸಲ್ಯೂಷನ್ಸ್ ದಕ್ಷಿಣ ಕೊರಿಯಾದ ನಂ.1 ಹಾಗೂ ವಿಶ್ವದ ಮೂರನೇ ಅತಿದೊಡ್ಡ ಮೆಟಲ್-ಕಟಿಂಗ್ ಮೆಷಿನ್ ತಯಾರಿಕಾ ಸಂಸ್ಥೆಯಾಗಿದೆ. ಕರ್ನಾಟಕದಲ್ಲಿ ತನ್ನ ಮಹತ್ವಾಕಾಂಕ್ಷಿ ಉತ್ಪಾದನಾ ಘಟಕದ ನಿರ್ಮಾಣವನ್ನು ಈ ವರ್ಷದ ಫೆಬ್ರವರಿಯಿಂದ ಆರಂಭಿಸಲಾಗಿದೆ. ದೇವನಹಳ್ಳಿ ಐಟಿಐಆರ್ ಸಮೀಪ ಸುಮಾರು ₹1,000 ಕೋಟಿ ಹೂಡಿಕೆಯಲ್ಲಿ ನಿರ್ಮಾಣವಾಗುತ್ತಿರುವ ಈ ಘಟಕಕ್ಕೆ 10 ಎಕರೆ ಜಮೀನು ಮೀಸಲಿಡಲಾಗಿದ್ದು, ಆಗಸ್ಟ್ 26ರಂದು ಘಟಕವನ್ನು ಉದ್ಘಾಟಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ರಾಜ್ಯ ಸರ್ಕಾರಕ್ಕೆ ಬಂದಿರುವ ಕೈಗಾರಿಕಾ ಹೂಡಿಕೆಗಳು ಕೇವಲ ಘೋಷಣೆಗಳಾಗಿಯೇ ಉಳಿಯದೆ, ಅನುಷ್ಠಾನಗೊಂಡು ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ರಾಜ್ಯದ ಯುವಕರ ಭವಿಷ್ಯ ನಿರ್ಮಾಣಕ್ಕೆ ನೆರವಾಗುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ, ಡಿ.ಎನ್. ಸಲ್ಯೂಷನ್ಸ್‌ನ ಭಾರತ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಯಂಗ್‌ಸಾಮ್ ಕಿಮ್ ಹಾಗೂ ಅವರ ತಂಡ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿ ಮಾಡಿ, ಆಗಸ್ಟ್ 26ರಂದು ನಡೆಯಲಿರುವ ಘಟಕದ ಉದ್ಘಾಟನಾ ಸಮಾರಂಭಕ್ಕೆ ಅಧಿಕೃತ ಆಹ್ವಾನ ನೀಡಿದರು.




