ಶಿಕ್ಷಣ ಕ್ಷೇತ್ರದಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಶಿಕ್ಷಕರ ಪಾತ್ರ ಅತ್ಯಂತ ಸ್ಮರಣೀಯ. ಉರಿಗಾಂಪೇಟೆಯ ಜಿಎಂಹೆಚ್‌ಪಿಎಸ್ ಶಾಲೆಯ ಮುಖ್ಯ ಶಿಕ್ಷಕ ಎಸ್.ಎಂ. ಶ್ರೀನಿವಾಸಯ್ಯ ಅವರ ದಕ್ಷತೆ, ಶಿಸ್ತು ಮತ್ತು ಕರ್ತವ್ಯ ನಿಷ್ಠೆ ಪ್ರತಿಯೊಬ್ಬರಿಗೂ ಮಾದರಿಯಾಗಿದೆ” ಎಂದು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದೇವೇರಹಳ್ಳಿ ನಾರಾಯಣಸ್ವಾಮಿ ಬಣ್ಣಿಸಿದರು.
ಸ್ಥಳೀಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ (GMHPS) ಆವರಣದಲ್ಲಿ ಆಯೋಜಿಸಲಾಗಿದ್ದ ಮುಖ್ಯ ಶಿಕ್ಷಕ ಎಸ್.ಎಂ. ಶ್ರೀನಿವಾಸಯ್ಯ ಅವರ ಆತ್ಮೀಯ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಶ್ರೀನಿವಾಸಯ್ಯನವರು ತಮ್ಮ ಸುದೀರ್ಘ ಸೇವಾವಧಿಯಲ್ಲಿ ಶಾಲೆಯ ಭೌತಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ತಲುಪಿಸುವಲ್ಲಿ ಅವರ ಕೊಡುಗೆ ಹಿರಿದು. “ಸಹೋದ್ಯೋಗಿ ಶಿಕ್ಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ಕುಟುಂಬದ ಸದಸ್ಯರಂತೆ ಭಾವಿಸಿ, ಶಾಲೆಯಲ್ಲಿ ಸದಾ ಸೌಹಾರ್ದಯುತ ಶೈಕ್ಷಣಿಕ ವಾತಾವರಣ ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ನಿವೃತ್ತಿ ಜೀವನವು ಸುಖ, ಶಾಂತಿ ಮತ್ತು ಸದಾ ಆರೋಗ್ಯದಿಂದ ಕೂಡಿರಲಿ,” ಎಂದು ಶುಭಾಶಯ ಕೋರಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, “ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಎಂಬುದು ಪ್ರಕ್ರಿಯೆಯಷ್ಟೇ ಹೊರತು ಅನುಭವಕ್ಕಲ್ಲ. ಶ್ರೀನಿವಾಸಯ್ಯನವರಂತಹ ಹಿರಿಯ ಶಿಕ್ಷಕರ ಮಾರ್ಗದರ್ಶನ ಸಮಾಜಕ್ಕೆ ಸದಾ ಅಗತ್ಯ. ಶಾಲೆಯ ಶೈಕ್ಷಣಿಕ ವಾತಾವರಣವನ್ನು ಸದಾ ಸಕ್ರಿಯವಾಗಿಟ್ಟುಕೊಂಡು, ನೌಕರರ ಸಂಘದ ಬೆಳವಣಿಗೆಗೂ ಸದಾ ಸ್ಪಂದಿಸಿದ ಅವರ ಸೇವೆ ಶ್ಲಾಘನೀಯ. ಅವರ ನಿವೃತ್ತ ಜೀವನವು ಸುಖ, ಶಾಂತಿ ಹಾಗೂ ಪರಿಪೂರ್ಣ ಆರೋಗ್ಯದಿಂದ ಕೂಡಿರಲಿ,” ಎಂದು ಶುಭ ಹಾರೈಸಿದರು.
ಸೇವೆಯಿಂದ ನಿವೃತ್ತರಾಗುತ್ತಿರುವ ಮುಖ್ಯ ಶಿಕ್ಷಕ ಎಸ್.ಎಂ. ಶ್ರೀನಿವಾಸಯ್ಯ ದಂಪತಿಯನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕರ ಸಂಘ ಹಾಗೂ ಗ್ರಾಮಸ್ಥರ ಪರವಾಗಿ ಮೈಸೂರು ಪೇಟ ತೊಡಿಸಿ, ಶಾಲಿನೊಂದಿಗೆ ಹಾರ ಹಾಕಿ, ನೆನಪಿನ ಕಾಣಿಕೆ ನೀಡಿ ಆತ್ಮೀಯವಾಗಿ ಗೌರವಿಸಲಾಯಿತು. ಸುದೀರ್ಘ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸಿ ಸೇವಾನಿವೃತ್ತಿ ಹೊಂದುತ್ತಿರುವ ಎಸ್.ಎಂ. ಶ್ರೀನಿವಾಸಯ್ಯ ಅವರ ಸೇವೆಯನ್ನು ವಿವಿಧ ಗಣ್ಯರು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಕೆಜಿಎಫ್ ತಾಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ವಿವಿಧ ವೃಂದ ಸಂಘಗಳ ಪದಾಧಿಕಾರಿಗಳು ಮತ್ತು ಸಹೋದ್ಯೋಗಿಗಳು ಭಾಗವಹಿಸಿ, ನಿವೃತ್ತ ಶಿಕ್ಷಕರಿಗೆ ಹೂಮಾಲೆ, ಶಾಲು ಹೊದಿಸಿ ಆತ್ಮೀಯವಾಗಿ ಅಭಿನಂದಿಸಿ ಶುಭ ಕೋರಿದರು.
ಇದನ್ನು ಓದಿದ್ದೀರಾ..?ಕೋಲಾರ | ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷ ಹಿನ್ನೆಲೆ ಸಸಿ ನೆಡುವ ಕಾರ್ಯಕ್ರಮ: ವೇಮಗಲ್ ಮುನಿಯಪ್ಪ
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದೇವೇರಹಳ್ಳಿ ನಾರಾಯಣಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಪದಾಧಿಕಾರಿ ಕೃಷ್ಣಮೂರ್ತಿ, ಗೆನ್ನೆರಹಳ್ಳಿ ಶ್ರೀನಿವಾಸ್ ಮೂರ್ತಿ , ರಾಮಚಂದ್ರಪ್ಪ, ಹಾಗೂ ಅನೇಕ ಶಿಕ್ಷಕ ವೃಂದ, ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.




