ಅಧಿಕಾರಕ್ಕಿಂತ ಜನರ ವಿಶ್ವಾಸವೇ ನನಗೆ ಮುಖ್ಯ. ನಿಮ್ಮ ಪ್ರೀತಿ ಮತ್ತು ಬೆಂಬಲವೇ ನನ್ನ ದೊಡ್ಡ ಶಕ್ತಿ ಎಂದು ಹೇಳಿರುವ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆ ಹಿಂಪಡೆಯುವುದಾಗಿ ಘೋಷಿಸಿದರು.
ಇಂಡಿ ನಗರದ ಪ್ರವಾಸಿ ಮಂದಿರದ ಎದುರು ಸಾವಿರಾರು ಕಾರ್ಯಕರ್ತರು ಸೇರಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, “ಪಕ್ಷದ ವರಿಷ್ಠರು ನನ್ನನ್ನು ಸಚಿವರನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಅದರಿಂದ ಮನಸ್ಸಿಗೆ ನೋವಾಗಿ ರಾಜೀನಾಮೆ ನೀಡುವಂತಹ ದಿಟ್ಟ ನಿರ್ಧಾರ ಕೈಗೊಂಡಿದ್ದೆ. ಆದರೆ ನನ್ನ ನಿರ್ಧಾರದಿಂದ ಕಾರ್ಯಕರ್ತರು ಮತ್ತು ಜನರಿಗೆ ನೋವಾಗುತ್ತದೆ ಎಂದು ತಿಳಿದ ಬಳಿಕ ನಿಮ್ಮೆಲ್ಲರ ಮನವಿಗೆ ಮಣಿದು ರಾಜೀನಾಮೆಯನ್ನು ಹಿಂಪಡೆಯುತ್ತಿದ್ದೇನೆ,” ಎಂದು ಹೇಳಿದರು.
“ಮಂತ್ರಿ ಸ್ಥಾನಕ್ಕಿಂತ ಜನರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದವೇ ನನಗೆ ಮುಖ್ಯ. ನಿಮ್ಮ ಪ್ರೀತಿಗೆ ತಲೆಬಾಗುತ್ತೇನೆ. ಇನ್ನು ಮುಂದೆ ಸಚಿವ ಸ್ಥಾನಕ್ಕಾಗಿ ಯಾರ ಬಳಿಯೂ ನಾನು ಹೋಗುವುದಿಲ್ಲ. ನನ್ನ ಸಂಪೂರ್ಣ ಗಮನ ಮತಕ್ಷೇತ್ರದ ಅಭಿವೃದ್ಧಿಯ ಮೇಲೆಯೇ ಇರುತ್ತದೆ. ನಿಮ್ಮೆಲ್ಲರ ಮಧ್ಯೆಯೇ ಇದ್ದು ಜನಸೇವೆಯನ್ನು ಮುಂದುವರಿಸುತ್ತೇನೆ,” ಎಂದು ತಿಳಿಸಿದರು.
ತಮ್ಮ ರಾಜಕೀಯ ಪಯಣವನ್ನು ನೆನಪಿಸಿಕೊಂಡ ಅವರು, “ನಾನು ಮೂರು ಬಾರಿ ಶಾಸಕನಾಗಿ, ಎರಡು ಬಾರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಪಕ್ಷದ ವರಿಷ್ಠರು ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರಿಂದ ಸಹಜವಾಗಿಯೇ ಆಕಾಂಕ್ಷಿಯಾಗಿದ್ದೆ. ಆದರೆ ಅವಕಾಶ ದೊರೆಯದಿರುವುದು ಬೇಸರ ತಂದಿದೆ. ಆದರೂ 2028ರಲ್ಲಿಯೂ ಸಚಿವ ಸ್ಥಾನಕ್ಕಾಗಿ ಯಾರನ್ನೂ ಕೇಳುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.
ತಮ್ಮ ಬೆಳವಣಿಗೆಯನ್ನು ಕೆಲವರು ಸಹಿಸಿಕೊಳ್ಳಲಿಲ್ಲ ಎಂಬ ಅಸಮಾಧಾನವನ್ನೂ ವ್ಯಕ್ತಪಡಿಸಿದ ಅವರು, “ನಾನು ಸಚಿವನಾದರೆ ವಿಜಯಪುರ ರಾಜಕಾರಣದಲ್ಲಿ ಶಕ್ತಿ ಕೇಂದ್ರವಾಗುತ್ತೇನೆ ಎಂಬ ಆತಂಕದಿಂದ ಕೆಲವರು ಸಚಿವ ಸ್ಥಾನ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ” ಎಂದು ಅಸಮಾಧಾನ ಹೊರಹಾಕಿದರು.
ಕಾರ್ಯಕ್ರಮದಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಪ್ರಶಾಂತ್ ಕಾಳೆ, ಜಾವೀದ್ ಮೋಮಿನ್, ಇಲಿಯಾಸ್ ಬೋರಾಮಣಿ, ನೀಲಕಂಠಗೌಡ ಪಾಟೀಲ, ಈರಣ್ಣ ವಾಲಿ, ರಾಹುಲ್ ಮಸಳಿ, ಅಜೀತ ಧನಶೆಟ್ಟಿ, ಶಿವಯೋಗೆಪ್ಪ ಚನಗೊಂಡ, ಬಿ.ಸಿ. ಸಾಹುಕಾರ, ರುಕ್ಕುದ್ದೀನ್ ತಳವಾರ, ಸಣ್ಣಪ್ಪ ತಳವಾರ, ಜೆಟ್ಟೆಪ್ಪ ರವಳಿ, ಸತೀಶ ಕುಂಬಾರ, ಗಡ್ಡೆಪ್ಪ ನಾವಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಇದ್ದರು.




