ಅನಿಶ್ಚಿತತೆಯ ನಡುವೆಯೇ ಕೃಷ್ಣಾ ನದಿಯ ನೀರು ಕೊನೆಗೂ ಆಲಮಟ್ಟಿ ಜಲಾಶಯ ಪ್ರವೇಶಿಸಿದ್ದು, ರೈತರು ಹಾಗೂ ಸಾರ್ವಜನಿಕರಲ್ಲಿ ನೆಮ್ಮದಿ ಮೂಡಿಸಿದೆ. ಸೋಮವಾರದಿಂದ ಜಲಾಶಯಕ್ಕೆ 1,232 ಕ್ಯುಸೆಕ್ ಒಳಹರಿವು ಆರಂಭವಾಗಿದ್ದು, 822 ಕ್ಯುಸೆಕ್ ನೀರನ್ನು ವಿವಿಧ ಉದ್ದೇಶಗಳಿಗೆ ಹೊರಹರಿಸಲಾಗುತ್ತಿದೆ.
ಜುಲೈ ಮೊದಲ ವಾರ ಕಳೆದರೂ ಒಳಹರಿವು ಆರಂಭವಾಗದ ಕಾರಣ ಜಲಾಶಯ ಡೆಡ್‌ಸ್ಟೋರೇಜ್ ಮಟ್ಟದತ್ತ ಸಾಗಿತ್ತು. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಒಳಹರಿವು ಆರಂಭವಾಗಿದ್ದು, ಮುಂದಿನ ಎರಡು-ಮೂರು ದಿನಗಳಲ್ಲಿ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ. 2002ರಿಂದ ಜಲಾಶಯದಲ್ಲಿ ಪೂರ್ಣ ಪ್ರಮಾಣದ ನೀರು ಸಂಗ್ರಹ ಆರಂಭವಾದ ಬಳಿಕ, 2026ರ ಜುಲೈ 6ರಂದು ಒಳಹರಿವು ಆರಂಭವಾಗಿರುವುದು ಎರಡನೇ ಅತಿ ವಿಳಂಬದ ದಾಖಲೆಯಾಗಿದೆ.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಶೇ.42ರಷ್ಟು ಮಳೆ: ಜಲಾಶಯಳಿಗೆ ಜೀವಕಳೆ
ಮುಂದಿನ ಒಂದು ವಾರ ನಿರಂತರ ಒಳಹರಿವಿನ ನಿರೀಕ್ಷೆಯಿದ್ದು, ನೀರಿನ ಸಮರ್ಪಕ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯ ಎಂಜಿನಿಯರ್ ಡಿ. ಬಸವರಾಜ ತಿಳಿಸಿದ್ದಾರೆ.
ತಡವಾಗಿಯಾದರೂ ಆಲಮಟ್ಟಿ ಜಲಾಶಯಕ್ಕೆ ನೀರು ಹರಿದು ಬರುತ್ತಿರುವುದು ರೈತರಿಗೆ ಹೊಸ ಆಶಾಭಾವ ಮೂಡಿಸಿದೆ.




