ಹಲವಾರು ಪ್ರದೇಶಗಳಲ್ಲಿ ತಾಪಮಾನ ಹೆಚ್ಚುತ್ತಿದೆ. ಬಿಸಿಲಿನ ಧಗೆಗೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಈ ನಡುವೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ಬಿಸಿ ಗಾಳಿಯ ಎಚ್ಚರಿಕೆ ನೀಡಿದೆ. ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ.
ಮಧ್ಯಾಹ್ನದ ಸಮಯದಲ್ಲಿ ನೇರ ಸೂರ್ಯನ ಬೆಳಕಿಗೆ ದೀರ್ಘಕಾಲ ಮೈಯೊಡ್ಡಬೇಡಿ, ಹೆಚ್ಚು ನೀರು ಕುಡಿಯಿರಿ, ತೆಳ್ಳನೆಯ ಬಟ್ಟೆಗಳನ್ನು ಧರಿಸಿ, ಸಾಧ್ಯವಾದಷ್ಟು ಹೊರಗೆ ಹೋಗುವುದನ್ನು ತಪ್ಪಿಸಿ ಎಂದು ಹವಾಮಾನ ಇಲಾಖೆ ಹೇಳಿದೆ.
ಇದನ್ನು ಓದಿದ್ದೀರಾ? ಈ ಬಾರಿ ಮುಂಗಾರು ಮಳೆ ಸಾಮಾನ್ಯಕ್ಕಿಂತ ಕಡಿಮೆ: ಭಾರತೀಯ ಹವಾಮಾನ ಇಲಾಖೆ ಕಳವಳ
ಮಕ್ಕಳು, ವೃದ್ಧರು ಮತ್ತು ಮೊದಲೇ ಆರೋಗ್ಯ ಸಮಸ್ಯೆ ಹೊಂದಿರುವವರು ಹೆಚ್ಚು ಕಾಳಜಿ ವಹಿಸಿ. ಬಿಸಿ ಗಾಳಿಯ ದುಷ್ಪರಿಣಾಮದಿಂದ ತಪ್ಪಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಾಯುವ್ಯ, ಮಧ್ಯ ಮತ್ತು ಪರ್ಯಾಯ ದ್ವೀಪದ ಹಲವು ಭಾಗಗಳಲ್ಲಿ ಗರಿಷ್ಠ ತಾಪಮಾನವು ಪ್ರಸ್ತುತ 40 ಡಿಗ್ರಿ ಸೆಲ್ಸಿಯಸ್ ಮತ್ತು 44 ಡಿಗ್ರಿ ಸೆಲ್ಸಿಯಸ್ ನಡುವೆ ಇದೆ. ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಅತ್ಯಧಿಕ ತಾಪಮಾನ 44.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹಲವು ಪ್ರದೇಶಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಐದು ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಾಗಿದೆ.
ಮುಂಬರುವ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯ ಭಾರತದ ಪ್ರತ್ಯೇಕ ಪ್ರದೇಶಗಳಲ್ಲಿ ಬಿಸಿ ಗಾಳಿ ಅಧಿಕವಾಗುವ ಸಾಧ್ಯತೆಯಿದೆ ಎಂದು ಐಎಂಡಿ ಸೂಚಿಸಿದೆ.
ಕರಾವಳಿ ಮತ್ತು ಪೂರ್ವ ಪ್ರದೇಶಗಳಲ್ಲಿ ಕಡುಬಿಸಿಲು ಮತ್ತು ಆರ್ದ್ರತೆ ಇರಲಿದೆ. ಆದರೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ರಾತ್ರಿ ವೇಳೆಯೂ ಬಿಸಿ ಗಾಳಿ ಹೆಚ್ಚಾಗಲಿದೆ. ಏಪ್ರಿಲ್ 27ರವರೆಗೆ ಹೀಗೆಯೇ ಮುಂದುವರೆಯಲಿದೆ. ಕ್ರಮೇಣ ಇಳಿಕೆಯಾಗಲಿದೆ. ತಾಪಮಾಣ ನಿರಂತರ ಏರಿಳಿತವಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿ ಮಾಹಿತಿ ನೀಡಿದ್ದಾರೆ.




