ಕೃಷ್ಣಾ ಕೊಳ್ಳ ಜಲ ಸಂರಕ್ಷಣಾ ಹೋರಾಟ ಸಮಿತಿಯ ಪದಾಧಿಕಾರಿಗಳು ಬೆಳಗಾವಿಗೆ ಭೇಟಿ ನೀಡಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಆಲಮಟ್ಟಿ ಅಣೆಕಟ್ಟಿನ ನೀರು ಸಂಗ್ರಹಣೆ ಮತ್ತು ಬಳಕೆಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದರು.
“ಆಲಮಟ್ಟಿ ಜಲಾಶಯವು ಕೃಷ್ಣಾ ನದಿ ತಟದ ಲಕ್ಷಾಂತರ ರೈತರ ಹಾಗೂ ಜನರ ಬದುಕಿನ ಜೀವ ನಾಡಿಯಾಗಿದ್ದು, ಉತ್ತರ ಕರ್ನಾಟಕ ಭಾಗದ ನೀರಾವರಿ, ಕುಡಿಯುವ ನೀರು ಮತ್ತು ಸಮಗ್ರ ಅಭಿವೃದ್ಧಿಗೆ ಪ್ರಮುಖ ಆಧಾರವಾಗಿದೆ. ಹೀಗಾಗಿ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹಿಸಲು ಹಾಗೂ ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
“ಉತ್ತರ ಕರ್ನಾಟಕದ ಜನರಿಗೆ ನ್ಯಾಯಯುತವಾಗಿ ದೊರಕಬೇಕಾದ ನೀರಿನ ಹಕ್ಕಿಗಾಗಿ ಹೋರಾಟ ಮುಂದುವರಿಯಲಿದ್ದು, ರಾಜಕೀಯ ಭೇದಗಳನ್ನು ಮೀರಿ ಎಲ್ಲಾ ಜನಪ್ರತಿನಿಧಿಗಳು ಹಾಗೂ ಸರ್ಕಾರಗಳು ಈ ಭಾಗದ ಬೇಡಿಕೆಗೆ ಸ್ಪಂದಿಸಬೇಕು. ಕೃಷ್ಣಾ ನದಿ ನೀರಿನ ಹಕ್ಕು, ರೈತರ ಹಿತಾಸಕ್ತಿ ಹಾಗೂ ಪ್ರದೇಶದ ಅಭಿವೃದ್ಧಿಗಾಗಿ ಹೋರಾಟವನ್ನು ಮತ್ತಷ್ಟು ಬಲಪಡಿಸಲಾಗುವುದು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯ ಶ್ರೀಕಾಂತ ಕುಲಕರ್ಣಿ, ರಾಜೇಂದ್ರ ಪೊದ್ದಾರ, ಪಂಚಪ್ಪ ಕಲಬುರ್ಗಿ, ಅರವಿಂದ ಕುಲಕರ್ಣಿ, ಅನಿಲ್ ಹೊಸಮನಿ, ಬಿ. ಭಗವಾನ್ ರೆಡ್ಡಿ, ಎಸ್.ವಿ. ಪಾಟೀಲ, ಸುರೇಶ್ ಬಿಜಾಪುರ, ಭೋಗೇಶ್ ಸೋಲಾಪುರ ಮತ್ತು ಗುರುರಾಜ ಪಡಶೆಟ್ಟಿ ಉಪಸ್ಥಿತರಿದ್ದರು.




