ಸರ್ವರಿಗೂ ಸಮಪಾಲು ಮತ್ತು ಸಮಬಾಳು ನೀಡಿದ ಮಹಾನ್ ವ್ಯಕ್ತಿ ಬಾಬಾಸಾಹೇಬ್ ಅಂಬೇಡ್ಕರ್. ಯಾವುದೇ ಜಯಂತಿಗಳು ಜಾತಿಗೆ ಸೀಮಿತವಾಗಬಾರದು, ಸಂವಿಧಾನವೇ ನಮ್ಮ ಉಸಿರು, ಹೆಸರು ಆಗಬೇಕು. ಅದು ನಮ್ಮ ಪವಿತ್ರ ಗ್ರಂಥವಾಗಿದ್ದು, ಅದರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗದಗ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಅರ್ಜುನ್ ಗೊಳಸಂಗಿ ಹೇಳಿದರು.
ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದ ಸಹಯೋಗದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ 155ನೇ ಜಯಂತಿಯ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುಲಪತಿ ವಿಜಯ ಕೊರಿಶೆಟ್ಟಿ ಮಾತನಾಡಿ, “ಸಂವಿಧಾನವು ಕೇವಲ ಪುಸ್ತಕವಾಗಿರದೆ, ನಮ್ಮ ದಿನನಿತ್ಯದ ಜೀವನಕ್ಕೆ ದಾರಿ ತೋರಿಸುವ ಮಾರ್ಗದರ್ಶಕವಾಗಿದೆ. ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಪ್ರತಿಯೊಂದು ಕಾರ್ಯಕ್ರಮದಲ್ಲೂ ಸಂವಿಧಾನದ ಪೀಠಿಕೆಯನ್ನು ಓದುವ ಪದ್ಧತಿಯನ್ನು ಕಡ್ಡಾಯವಾಗಿ ಅನುಸರಿಸಲಾಗುತ್ತಿದೆ. ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗಾಗಿ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ” ಎಂದರು.
ಕುಲಸಚಿವ ಶಂಕರಗೌಡ ಸೊಮನಾಳ ಮಾತನಾಡಿ, “ಪ್ರತಿಯೊಬ್ಬರೂ ಕಾನೂನುಗಳ ಕುರಿತು ಅರಿವು ಹೊಂದುವುದು ಅಗತ್ಯ” ಎಂದು ಹೇಳಿದರು.
ಜಯಂತಿ ಪ್ರಯುಕ್ತ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರನ್ನು ಸನ್ಮಾನಿಸಲಾಯಿತು. ರಸಪ್ರಶ್ನೆ ಸ್ಪರ್ಧೆಯಲ್ಲಿ ಅಶ್ವಿನಿ ಅನಶಟ್ಟಿ ಪ್ರಥಮ (₹5000), ಅಂಕಿತಾ ಹಾವಿನಾಳ ದ್ವಿತೀಯ (₹3000) ಹಾಗೂ ನಾಗಮ್ಮ ಗುಬ್ಯಾಡ ತೃತೀಯ (₹2000) ಸ್ಥಾನ ಪಡೆದರು.
ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ. ಬಸವರಾಜ ಲಕ್ಕಣ್ಣವರ, ಸಹಾಯಕ ಕುಲಸಚಿವೆ ರಾಜೇಶ್ವರಿ ಬದನೂರ, ಡಾ. ಸುರೇಖಾ ರಾಠೋಡ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಡಾ. ಬಿ ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಸಂಜೀವಕುಮಾರ ಗಿರಿ ಸ್ವಾಗತಿಸಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದ ಉಪ ನಿರ್ದೇಶಕ ಡಾ.ಬಾಬು ಲಮಾಣಿ ವಂದಿಸಿದರು. ಡಾ.ಕಲಾವತಿ ಕಾಂಬಳೆ ನಿರೂಪಿಸಿದರು.




