ವೈದ್ಯರು ನಿರ್ಲಕ್ಷ್ಯದಿಂದ ನವಜಾತ ಶಿಶು ಸಾವನ್ನಪ್ಪಿದೆ ಎಂದು ಕುಟುಂಬಸ್ಥರು ಆರೋಪಿಸಿ ತಾಯಿ ಮಕ್ಕಳ ಆಸ್ಪತ್ರೆಯ ಮುಂಭಾಗ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು.
ಕವಿತಾಳ ಸಮೀಪದ ಜಂಗಮರಹಳ್ಳಿಯ ಪಾರಮ್ಮ ಗುಂಡಪ್ಪ ಎನ್ನುವವರು ತಾಯಿ ಮಕ್ಕಳ ಆಸ್ಪತ್ರೆಗೆ ಹೆರಿಗೆಗೆಂದು ದಾಖಲಾಗಿದ್ದರು.
ಕಳೆದೊಂದು ವಾರದಿಂದ ಸಹಜ ಹೆರಿಗೆ ಆಗುತ್ತದೆ ಎಂದು ಚಿಕಿತ್ಸೆ ನೀಡುತ್ತಲೇ ಬಂದ ವೈದ್ಯರು ಮಂಗಳವಾರ ಬೆಳಗ್ಗೆ ಏಕಾಏಕಿ ಮಗುವಿನ ಉಸಿರಾಟ ಸರಿಯಿಲ್ಲ ಎಂದು ಶಸ್ತ್ರಚಿಕಿತ್ಸೆ ಮಾಡಿದ್ದು ಮಗು ಸಾವನ್ನಪ್ಪಿದೆ. ಸಾವಿಗೆ ವೈದ್ಯರ ನಿರ್ಲಕ್ಷ್ಯ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೇ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಹಾಗೂ ಕುಟುಂಬಸ್ಥರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಸಾವಾಗೀಡಾದ ಮಗುವನ್ನಿಟ್ಟು ಕುಟುಂಬಸ್ಥರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಪೊಲೀಸರು ಆಗಮಿಸಿ ಕುಟುಂಬಸ್ಥರಿಗೆ ಮನವೊಲಿಸಲು ಪ್ರಯತ್ನಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ನರೇಗಾ ಕಾಮಗಾರಿ ವೇಳೆ ತೀವ್ರ ಬಿಸಿಲಿಗೆ ಕಾರ್ಮಿಕ ಸಾವು
ತಾಯಿ ಮಕ್ಕಳ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಕಾವೇರಿ ಶಾವಿ ಮಾತನಾಡಿ, ದಿ.27ರಂದು ಹೆರಿಗೆಗಾಗಿ ಪಾರಮ್ಮ ಎನ್ನುವ ಗರ್ಭಿಣಿ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು. ಸಹಜ ಹೆರಿಗೆ ಆಗದ ಹಿನ್ನಲೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿಕೊಳ್ಳಲಾಗಿದೆ. ಗರ್ಭದಲ್ಲೇ ಮಗುವಿನ ಎದೆಬಡಿತ ಜೋರಾಗಿತ್ತು. ಕೃತಕ ಉಸಿರಾಟ ಕೊಟ್ಟಾಗ್ಯೂ ಮಗುವನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ತಿಳಿಸಿದರು.





