ಮಳೆಯಿಲ್ಲದೆ ಸಂಕಷ್ಟದಲ್ಲಿ ಇರುವ ವಿಜಯಪುರ ಜಿಲ್ಲೆಯ ರೈತರು ಸದ್ಯ ಜೋಳ ಬೆಳೆದು ಬೆಳೆ ಕೈಗೆ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ಬಿಳಿಜೋಳದ ಬೆಳೆಗೆ ಕೀಟಬಾಧೆ ಕಾಡುತ್ತಿದ್ದು ಜೋಳಬೆಳೆದ ರೈತರು ಆತಂಕಗೊಂಡಿದ್ದಾರೆ.
ಬಿಳಿಜೋಳಕ್ಕೆ ಸಾಮಾನ್ಯವಾಗಿ ಕೀಟಗಳು ಕಾಡುವುದಿಲ್ಲ. ಆದರೆ, ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಈ ಬಾರಿ ಎಲ್ಲಕಡೆಯೂ ಎಲೆಯನ್ನು ತಿಂದು ಹಾಕುವ ಬಿಳಿಶೀರು ಕೀಟಬಾಧೆ ರೈತರನ್ನು ಕಾಡುತ್ತಿದ್ದು, ಇದರಿಂದ ತೆನೆಗಟ್ಟುತ್ತದೆಯೋ ಇಲ್ಲವೋ ಎಂಬ ಪರಿಸ್ಥಿತಿ ಉಂಟಾಗಿದೆ ಎನ್ನುತ್ತಿದ್ದಾರೆ ಜೋಳ ಬೆಳೆದ ರೈತರು.
ನೀರಾವರಿ ಹಾಗೂ ಕಾಲುವೆ ನೀರಿನ ವ್ಯವಸ್ಥೆ ಇದ್ದಲ್ಲಿ ಜೋಳದ ಬೆಳೆ ಉತ್ತಮವಾಗಿ ಬೆಳೆದಿದೆ. ಇನ್ನೊಂದು ತಿಂಗಳಲ್ಲಿ ಫಸಲು ರೈತರ ಕೈ ಸೇರಲಿದೆ. ಹೀಗಾಗಿ ಉತ್ತಮ ದರ ಸಿಗುವ ಉತ್ಸಾಹದಲ್ಲಿ ರೈತರಿದ್ದು, ಕೀಟಬಾಧೆ ಅವರನ್ನು ನಿರಾಸೆಗೆ ದೂಡಿದೆ.
ತಾಲೂಕಿನ ಇಂಗಳಗೇರಿ ಸೇರಿದಂತೆ ಬಹುತೇಕ ಕಡೆ ಬೆಳೆದಿರುವ ಜೋಳದ ತೆನೆಗಳ ಒಳಗಡೆ ಬಿಳಿ ಶೀರು ಕೀಟ ಕಂಡು ಬಂದಿದೆ. ಇದರಿಂದ ಬೆಳೆಯಲ್ಲಿ ಕಾಳು ಮೂಡದಂತಾಗಿ ತೆನೆಯೇ ಕಾಣುವುದಿಲ್ಲ. ಹೀಗಾದಾಗ ಇಳುವರಿ ಕುಸಿತ ಕಂಡು ರೈತರು ಬೆಳೆದಿರುವ ಖರ್ಚು ಹೊಂದಿಸಲು ಕಷ್ಟ ಪಡುವ ದುಸ್ಥಿತಿ ಎದುರಾಗಬಹುದು ಎನ್ನುವುದು ರೈತರ ಆತಂಕ.
ಜೋಳದ ಬೆಲೆ ಏರಿಕೆಯಾಗಿದ್ದು, 8000 ರೂ. ಕ್ವಿಂಟಲ್‌ಗೆ ಬಿಳಿ ಜೋಳ ಮಾರಾಟವಾದ ಉದಾಹರಣೆಗಳಿವೆ. ಕೆ.ಜಿ ಜೋಳ 70ರೂ.ದಿಂದ 80ರೂ. ಮಾರಾಟವಾಗುತ್ತಿದೆ. ಈ ಬಾರಿ ಜೋಳದ ಫಸಲು ಉತ್ತಮವಾಗಿ ಬರದೇ ಹೋದರೆ ಈ ದರ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ಗ್ರಾಹಕರು.