ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 135ನೇ ಜಯಂತಿ ಉತ್ಸವ ಅಂಗವಾಗಿ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಜಂಬಗಿ ಎಚ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಿತು.
1970ರ ಏಪ್ರಿಲ್ 25ರಂದು ಅಂದಿನ ಮೈಸೂರು ರಾಜ್ಯದ ಪೌರಾಡಳಿತ ಸಚಿವ ಬಿ ಎಂ ಪಾಟೀಲ ಅವರು ಈ ಶಾಲೆಯನ್ನು ಉದ್ಘಾಟಿಸಿದ್ದರು. ಅದರ ಶತಮಾನೋತ್ಸವ ದಿನದಂದು ದಿ. ಬಿ ಎಂ ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಹಾಗೂ ಸಂಶೋಧನ ಕೇಂದ್ರ ಹಾಗೂ ಜಂಬಗಿಯ ಡಾ. ಬಾಬಾಸಾಹೇಬ ಅಂಬೇಡ್ಕರ ತರುಣ ಸಂಘ ಜಂಬಗಿ ಎಚ್ ಸಹಯೋಗದಲ್ಲಿ ಶಿಬಿರ ಆಯೋಜನೆ ಮಾಡಿರುವುದು ವಿಶೇಷ.
ಶತಮಾನದ ಇತಿಹಾಸವಿರುವ ಶಾಲೆಯ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಸಿಎಸ್‌ಆರ್ ಅನುದಾನದಲ್ಲಿ ಹೊಸ ಕೊಠಡಿಗಳು, ಶೌಚಾಲಯ ನಿರ್ಮಾಣ ಮತ್ತು ಕ್ರೀಡಾ ಸಾಮಾಗ್ರಿಗಳಿಗೆ ಅನುದಾನ ಮಂಜೂರು ಮಾಡಿದ್ದಾರೆ.
ಶಿಬಿರದಲ್ಲಿ ವೈದ್ಯಕೀಯ ಚಿಕಿತ್ಸೆ ವಿಭಾಗ, ಶಸ್ತ್ರಚಿಕಿತ್ಸೆ ವಿಭಾಗ, ಎಲುಬು ಮತ್ತು ಕೀಲು ಚಿಕಿತ್ಸೆ ವಿಭಾಗ, ಹೆರಿಗೆ ಮತ್ತು ಪ್ರಸೂತಿ ವಿಭಾಗ, ಚಿಕ್ಕ ಮಕ್ಕಳ ಚಿಕಿತ್ಸೆ ವಿಭಾಗ, ಚರ್ಮರೋಗ ಚಿಕಿತ್ಸೆ ವಿಭಾಗ, ನೇತ್ರಚಿಕಿತ್ಸೆ ವಿಭಾಗ, ದಂತ ಚಿಕಿತ್ಸೆ ವಿಭಾಗಗಳ ತಜ್ಞ ವೈದ್ಯರು ಇದ್ದರು. ಜಂಬಗಿ ಎಚ್ ಮತ್ತು ಸುತ್ತಮುತ್ತಲಿನ ಗ್ರಾಮದ ನೂರಾರು ರೋಗಿಗಳು ಈ ಶಿಬಿರದ ಸದುಪಯೋಗ ಪಡೆದುಕೊಂಡರು.
ಈ ಸುದ್ದಿ ಓದಿದ್ದೀರಾ? ಕುವೆಂಪು ವಿವಿ ಕುಲಪತಿ ಡಾ. ಶರತ್ ಅನಂತಮೂರ್ತಿ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ
ಕಾರ್ಯಕ್ರಮಕ್ಕೂ ಮೊದಲು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಊರಿನ ಹಿರಿಯರಾದ ಎಚ್ ಎಸ್ ಕೊರಡ್ಡಿ, ಕಲ್ಲಪ್ಪಗೌಡ ಕೊಡಬಾಗಿ, ಎಚ್ ಕೆ ನ್ಯಾಮಗೌಡ, ದುಂಡಣ್ಣಗೌಡ ಕೊರಡ್ಡಿ, ಪಿ ವಿ ಚಿಗದಾನಿ, ತಿಮ್ಮನಗೌಡ ಪಾಟೀಲ, ಹನುಮಂತ ಕಜ್ಜಿದೋಣಿ, ಭೀಮಪ್ಪ ಕಜ್ಜಿದೋಣಿ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಡಾ. ಬಿ ಆರ್ ಅಂಬೇಡ್ಕರ್ ತರುಣ ಸಂಘದ ಸದಸ್ಯರು, ಗ್ರಾಮಸ್ಥರು ಇದ್ದರು.




