ಕುವೆಂಪು ವಿವಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸುವಂತೆ ಹಲವು ಬಾರಿ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ ವಿದ್ಯಾರ್ಥಿಗಳು ಕುಲಪತಿ ಡಾ. ಶರತ್ ಅನಂತಮೂರ್ತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಶಂಕರಘಟ್ಟದಲ್ಲಿರುವ ಕುಲಪತಿಗಳ ಕಚೇರಿ ಆವರಣದಲ್ಲಿನ ಕುರ್ಚಿ, ಹೂಕುಂಡಗಳನ್ನು ಪುಡಿ ಮಾಡಿರುವ ಘಟನೆ ನಡೆದಿದೆ.
ವಿದ್ಯಾರ್ಥಿ ವಿರೋಧಿ ನೀತಿ ತೋರುತ್ತಿರುವ ಕುಲಪತಿ ವಿರುದ್ಧ ಎನ್‌ಎಸ್‌ಯುಐ ವತಿಯಿಂದ ಬುಧವಾರ ಕುವೆಂಪು ವಿಶ್ವ ವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವಿಸಿ ಕಚೇರಿ ಬೋರ್ಡ್‌ಗೆ ಕಪ್ಪು ಮಸಿ ಬಳಿದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ʼಕುವೆಂಪು ವಿಶ್ವವಿದ್ಯಾಲಯಲ್ಲಿ ಇತ್ತೀಚೆಗೆ ನಿರಂತರವಾಗಿ ವಿದ್ಯಾರ್ಥಿ ವಿರೋಧಿ ನಡೆ ಅನುಸರಿಸುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಚೆಲ್ಲಾಟವಾಡಲಾಗುತ್ತಿದೆ. ವಿಶ್ವವಿದ್ಯಾಲಯದ ಇಂತಹ ನಡೆ ಖಂಡನೀಯ” ಎಂದ ವಿದ್ಯಾರ್ಥಿಗಳು ವಿಸಿಗೆ ಧಿಕ್ಕಾರ ಕೂಗಿದರು.
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರೊಬ್ಬರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕುಲಪತಿಗಳು ಅಧಿಕಾರ ಸ್ವೀಕರಿಸಿದಾಗಿನಿಂದಲೂ ವಿಶ್ವವಿದ್ಯಾಲಯದಲ್ಲಿ ಅಧಿಕಾರಿ ವರ್ಗದವರು ಆಂತರಿಕ ಕಚ್ಚಾಟದಲ್ಲೇ ತೊಡಗಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಏಕಾಏಕಿ ಪರೀಕ್ಷಾ ಶುಲ್ಕಗಳನ್ನು ಏರಿಸುತ್ತಾರೆ. ಕಳೆದ 5 ತಿಂಗಳ ಹಿಂದೆ ಪರೀಕ್ಷೆ ಬರೆದಿದ್ದ 1, 3 ಮತ್ತು 5ನೇ ಸೆಮಿಸ್ಟರ್‌ಗಳ ಫಲಿತಾಂಶ ಪ್ರಕಟಿಸಿಲ್ಲ. ಅಲ್ಲದೆ 3 ವರ್ಷಗಳಿಂದ ನಡೆದಿರುವ ಪರೀಕ್ಷೆಗಳ ಯಾವುದೇ ಅಂಕಪಟ್ಟಿಯನ್ನು ವಿತರಿಸಿಲ್ಲ. ಕೇಳಿದರೆ ಅಂಕಪಟ್ಟಿಗಳನ್ನು ಮುದ್ರಿಸಲು ಟೆಂಡರ್ ಕರೆಯುವುದಾಗಿ ಹೇಳುತ್ತಲೇ ಬರಲಾಗುತ್ತಿದೆ. ಇದರಿಂದಾಗಿ ಪದವಿ ಪೂರೈಸಿದ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸಕ್ಕೆ ಹೋಗಲು, ಉದ್ಯೋಗ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ” ಎಂದು ಹೇಳಿದರು.
“ಕುವೆಂಪು ವಿವಿಯಲ್ಲಿ ಭ್ರಷ್ಟಾಚಾರ, ಲೈಂಗಿಕ ದೌರ್ಜನ್ಯ ಆರೋಪಗಳು ಹೆಚ್ಚಾಗಿದ್ದು, ಕುಲಪತಿ ಡಾ. ಶರತ್ ಅನಂತಮೂರ್ತಿ ಅಲ್ಲಿಯ ಯುವತಿಯೊಂದಿಗೆ ವಾಟ್ಸ್ಯಾಪ್ ಚಾಟ್ ಮಾಡಿರುವ ಸ್ಕ್ರೀನ್‌ಶಾಟ್ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಲ್ಲದೆ, ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಈ ಹಿನ್ನೆಲೆ ಮಂಗಳವಾರ ಎಬಿವಿಪಿ ಸಂಘಟನಾಕಾರರು ಪ್ರತಿಭಟನೆ ನಡೆಸಿದ್ದರು. ಇಂದು ಎನ್‌ಎಸ್‌ಯುಐ ಸಂಘಟನಾಕಾರರು ತೀವ್ರವಾದ ರೀತಿಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ” ಎಂದು
“ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಪಾಸಿಂಗ್ ಸರ್ಟಿಫಿಕೇಟ್ ಅಥವಾ ಪದವಿ ಪ್ರಮಾಣ ಪತ್ರ ನೀಡುತ್ತಿಲ್ಲ. ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ನೀಡುವಂತೆ ಒರಿಜಿನಲ್ ಅಂಕಪಟ್ಟಿಗಳನ್ನು ಕೊಡದೇ ಇರುವುದರಿಂದಾಗಿ ಕುವೆಂಪು ವಿವಿಯಲ್ಲಿ ವ್ಯಾಸಂಗ ಮಾಡಿದವರಿಗೆ ಯಾವುದೇ ಕಂಪನಿಗಳಲ್ಲಿ ಉದ್ಯೋಗ ಸಿಗುವುದು ಕಷ್ಟವಾಗುತ್ತಿದೆ” ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಪೊಲೀಸರ ಕಿರುಕುಳ ಆರೋಪ
ಸಂದರ್ಭದಲ್ಲಿ ಎನ್‌ಎಸ್‌ಯುಐನ ಜಿಲ್ಲಾಧ್ಯಕ್ಷ ವಿಜಯ್, ಕಾರ್ಯಾಧ್ಯಕ್ಷ ರವಿ ಕಟಿಕೆರೆ, ನಗರಾಧ್ಯಕ್ಷ ರವಿ, ಯುವ ಮುಖಂಡ ಮುರುಗೇಶ್, ನಗರ ಉಪಾಧ್ಯಕ್ಷ ಆದಿತ್ಯ ಸುಭಾನ್, ಪ್ರಧಾನ ಕಾರ್ಯದರ್ಶಿ ಚಂದ್ರೋಜಿ ರಾವ್, ವರುಣ್, ಅಭಿ, ಫರಾಜ್, ಸೃಜನ್, ಚೇತನ್, ಧನುಷ್, ಸೃಜನ್ ಲೋಹಿತ್, ಆಕಾಶ್, ಹಾಲಸ್ವಾಮಿ ಸೇರಿದಂತೆ ಇತರರು ಇದ್ದರು.





