ಉತ್ತಮ ಛಾಯಾಗ್ರಹಣಕ್ಕೆ ಕೇವಲ ಕ್ಯಾಮೆರಾ ಸಾಕಾಗುವುದಿಲ್ಲ. ಬೆಳಕು, ಕೋನ, ಸಮಯ ಹಾಗೂ ವಿಷಯದ ಬಗ್ಗೆ ಸೂಕ್ಷ್ಮ ಅರಿವು ಅತ್ಯಂತ ಮುಖ್ಯವಾಗಿದೆ. ವನ್ಯಜೀವಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಛಾಯಾಗ್ರಹಣಕ್ಕೆ ಉತ್ತಮ ಅವಕಾಶಗಳಿದ್ದು, ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ವನ್ಯಜೀವಿ ಮಂಡಳಿಯ ಸದಸ್ಯ ಧ್ರುವ ಎಂ ಪಾಟೀಲ ಅವರು ಸಲಹೆ ನೀಡಿದರು.
ವಿಜಯಪುರ ನಗರದ ಬಿಎಲ್ಡಿಇ ಸಂಸ್ಥೆಯ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗ, ಆರ್ಯನ್ ಡಿಜಿಟಲ್ ಲ್ಯಾಬ್ ಹಾಗೂ ನಿಕಾನ್ ಸ್ಕೂಲ್ ಇಂಡಿಯಾ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ʼಮಾಸ್ಟರ್ ಕ್ಲಾಸ್ ಆನ್ ನಿಕಾನ್ ಮಿರರ್ಲೆಸ್ ಟೆಕ್ನಾಲಜಿʼ ವಿಷಯದ ರಾಷ್ಟ್ರೀಯ ಮಟ್ಟದ ವಿಶೇಷ ತಾಂತ್ರಿಕ ಕಾರ್ಯಾಗಾರದಲ್ಲಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಪಿ. ಮಾತನಾಡಿ, “ಇಂತಹ ತಾಂತ್ರಿಕ ಕಾರ್ಯಾಗಾರಗಳು ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗೆ ಪೂರಕವಾಗಿದ್ದು, ಕೈಗಾರಿಕಾ ಕ್ಷೇತ್ರದ ಇತ್ತೀಚಿನ ತಂತ್ರಜ್ಞಾನಗಳನ್ನು ಅರಿಯಲು ಸಹಕಾರಿಯಾಗುತ್ತವೆ. ತಾಂತ್ರಿಕ ಜ್ಞಾನದೊಂದಿಗೆ ವೃತ್ತಿಪರ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಇಂದಿನ ಅಗತ್ಯ” ಎಂದು ಹೇಳಿದರು.
ಕಾರ್ಯಾಗಾರದಲ್ಲಿ ನಿಕಾನ್ ಮಿರರ್ಲೆಸ್ ಕ್ಯಾಮೆರಾಗಳ ಅತ್ಯಾಧುನಿಕ ತಂತ್ರಜ್ಞಾನ, ಕ್ಯಾಮೆರಾದ ಕಾರ್ಯವಿಧಾನ, ಆಧುನಿಕ ಛಾಯಾಗ್ರಹಣ ತಂತ್ರಗಳು, ವನ್ಯಜೀವಿ ಛಾಯಾಗ್ರಹಣ, ಸೂಕ್ತ ಲೆನ್ಸ್ ಆಯ್ಕೆ, ಬೆಳಕಿನ ಸಮರ್ಪಕ ಬಳಕೆ, ಡಿಜಿಟಲ್ ಇಮೇಜಿಂಗ್ ಹಾಗೂ ಛಾಯಾಗ್ರಹಣ ಕ್ಷೇತ್ರದಲ್ಲಿನ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳ ಕುರಿತು ತಜ್ಞರು ಸವಿಸ್ತಾರ ಮಾಹಿತಿ ನೀಡಿದರು.
ಪ್ರಾಯೋಗಿಕ ಪ್ರದರ್ಶನಗಳ ಮೂಲಕ ಮಿರರ್ಲೆಸ್ ಕ್ಯಾಮೆರಾಗಳ ವೈಶಿಷ್ಟ್ಯಗಳು ಹಾಗೂ ಅವುಗಳ ಪರಿಣಾಮಕಾರಿ ಬಳಕೆಯನ್ನು ಭಾಗವಹಿಸಿದವರಿಗೆ ಪರಿಚಯಿಸಲಾಯಿತು. ತಜ್ಞರೊಂದಿಗೆ ನೇರ ಸಂವಾದ, ಪ್ರಾಯೋಗಿಕ ಅಧಿವೇಶನಗಳು ಮತ್ತು ಪ್ರದರ್ಶನಗಳು ಕಾರ್ಯಾಗಾರದ ಪ್ರಮುಖ ಆಕರ್ಷಣೆಯಾಗಿದ್ದವು.
ಕರ್ನಾಟಕ ವನ್ಯಜೀವಿ ಮಂಡಳಿಯ ಸದಸ್ಯ ಧ್ರುವ ಎಂ. ಪಾಟೀಲ, ನಿಕಾನ್ ಪ್ರೈವೇಟ್ ಲಿಮಿಟೆಡ್ನ ತಾಂತ್ರಿಕ ತಜ್ಞ ಸ್ಟೆರಿನ್ ಹಾಗೂ ಆರ್ಯನ್ ಡಿಜಿಟಲ್ ಲ್ಯಾಬ್ನ ಮಾಲೀಕ ಹಾಗೂ ಅಧಿಕೃತ ನಿಕಾನ್ ಡೀಲರ್ ಗಗನ ಹಿರೇದೇಸಾಯಿ ಕಾರ್ಯಾಗಾರವನ್ನು ಉದ್ಘಾಟಿಸಿದ್ದು, ಕಾರ್ಯಗಾರ ಯಶಸ್ವಿಯಾಗಿ ನಡೆಯಿತು.
ಈ ಸುದ್ದಿ ಓದಿದ್ದೀರಾ? ಗೋಕರ್ಣ | ಮಹಾಬಲೇಶ್ವರ ದೇವಾಲಯಕ್ಕೆ ಕೊಳಚೆ ನೀರು ನುಗ್ಗುವ ಸಮಸ್ಯೆ; ಶಾಶ್ವತ ಪರಿಹಾರಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಸೂಚನೆ
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲೆ ಡಾ. ಲೀನಾ ರಾಘಾ, ಸಂಯೋಜಕ ಡಾ. ಮುರಗೇಶ ಪಟ್ಟಣಶೆಟ್ಟಿ, ಪ್ರಾಧ್ಯಾಪಕರಾದ ಪ್ರೊ. ಭಾಗ್ಯಶ್ರೀ ಪಾಟೀಲ, ಪ್ರೊ. ಸುಮಂಗಲಾ ಎಸ್. ಬಾದಾಮಿ, ಎಂಬಿಎ ವಿಭಾಗದ ಮುಖ್ಯಸ್ಥ ಪ್ರೊ. ಜಿ ಎಸ್ ಕರಡಿ ಸೇರಿದಂತೆ ಹಲವು ಗಣ್ಯರು ಇದ್ದರು.
ಕಾರ್ಯಾಗಾರದಲ್ಲಿ 300ಕ್ಕೂ ಅಧಿಕ ವಿದ್ಯಾರ್ಥಿಗಳು, ವೃತ್ತಿಪರ ಛಾಯಾಗ್ರಾಹಕರು ಹಾಗೂ ಛಾಯಾಗ್ರಹಣಾಸಕ್ತರು ಭಾಗವಹಿಸಿದ್ದರು. ಬಿಎಲ್ಡಿಇ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ವಿವಿಧ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಛಾಯಾಗ್ರಾಹಕರು ಕಾರ್ಯಾಗಾರದ ಪ್ರಯೋಜನ ಪಡೆದರು.




