ಗಣೇಶೋತ್ಸವ ಸಂದರ್ಭದಲ್ಲಿ ಡಿಜೆ ಹಾಗೂ ವಿದ್ಯುತ್ ಅವಘಡಗಳಿಂದ ಯಾವುದೇ ಅನಾಹುತ ಸಂಭವಿಸದಂತೆ ಗಜಾನನ ಮಂಡಳಿಗಳು ಮುನ್ನೆಚ್ಚರಿಕೆ ವಹಿಸಬೇಕು. ವಿದ್ಯುತ್ ಸುರಕ್ಷತೆ ಹಾಗೂ ಮೆರವಣಿಗೆಯ ಶಿಸ್ತು ಕಾಪಾಡಲು ಸ್ವಯಂಸೇವಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ ಕೆ. ಸಾರ್ವಜನಿಕರಿಗೆ ಮನವಿ ಮಾಡಿದರು.
ವಿಜಯಪುರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗಣೇಶ ಹಬ್ಬ ಆಚರಣೆ ಕುರಿತು ನಡೆದ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಣೇಶೋತ್ಸವ ಹಿನ್ನೆಲೆಯಲ್ಲಿ ಈಗಾಗಲೇ ನಾಲ್ಕೈದು ಬಾರಿ ಶಾಂತಿ ಸಭೆಗಳನ್ನು ನಡೆಸಲಾಗಿದೆ. ಗಣೇಶ ಮೂರ್ತಿ ವಿಸರ್ಜನೆಗೆ ದರ್ಗಾ ಜೈಲ್ ಬಳಿ ನಾಲ್ಕು ಎಕರೆ ಪ್ರದೇಶದಲ್ಲಿ ಕೃತಕ ಹೊಂಡ ನಿರ್ಮಿಸಲಾಗಿದೆ.
ವಿಸರ್ಜನಾ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಗಜಾನನ ಮಂಡಳಿಗಳು ಜಿಲ್ಲಾಡಳಿತ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ನಗರದ ಬಹುತೇಕ ಗಜಾನನ ಮಂಡಳಿಗಳು ಪಿಒಪಿ ಗಣೇಶ ಮೂರ್ತಿಗಳ ಬಳಕೆಯನ್ನು ಕೈಬಿಟ್ಟು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಿರುವುದು ಶ್ಲಾಘನೀಯ. ಇದೇ ರೀತಿಯಲ್ಲಿ ಪರಿಸರ ಸ್ನೇಹಿ ಹಾಗೂ ಅರ್ಥಪೂರ್ಣವಾಗಿ ಹಬ್ಬ ಆಚರಿಸುವ ಮೂಲಕ ಮಾದರಿ ಸಂದೇಶ ನೀಡಬೇಕು ಎಂದು ಹೇಳಿದರು.
ಡಿಜೆ ಬಳಕೆ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಗಜಾನನ ಮಂಡಳಿಗಳು ಸಾಂಸ್ಕೃತಿಕ ಮೆರುಗು ಹೆಚ್ಚಿಸುವ ಕಲಾ ಪ್ರಕಾರಗಳು, ವಾದ್ಯಮೇಳಗಳು ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ರಾತ್ರಿ 10ರ ಬಳಿಕ ಧ್ವನಿವರ್ಧಕ ಬೇಡ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ರಾತ್ರಿ 10 ಗಂಟೆಯ ನಂತರ ಗಜಾನನ ಮಂಡಳಿಗಳು ಧ್ವನಿವರ್ಧಕಗಳನ್ನು ಬಳಸಬಾರದು. ಹಬ್ಬದ ಆಚರಣೆಯಿಂದ ಸಾರ್ವಜನಿಕರಿಗೆ, ಹಿರಿಯ ನಾಗರಿಕರಿಗೆ, ಶಾಲಾ ಮಕ್ಕಳಿಗೆ ಹಾಗೂ ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಯುವಕರು ಸದಾ ಅಭಿವೃದ್ಧಿ ಹಾಗೂ ಸಕಾರಾತ್ಮಕ ಸಂದೇಶ ಸಾರುವ ಹಾಡುಗಳನ್ನು ಬಳಸುವಂತೆ ನೋಡಿಕೊಳ್ಳಬೇಕು. ಪ್ರಚೋದನಕಾರಿ ಹಾಡುಗಳನ್ನು ಯಾವುದೇ ಕಾರಣಕ್ಕೂ ಬಳಸಬಾರದು. ಈ ಕುರಿತು ಗಜಾನನ ಮಂಡಳಿಗಳ ಪದಾಧಿಕಾರಿಗಳು ಯುವಕರಿಗೆ ತಿಳಿವಳಿಕೆ ನೀಡಬೇಕು ಎಂದು ಸೂಚಿಸಿದರು.
ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ತರಬೇತಿ ಪಡೆದ ವಿಸರ್ಜನಾ ತಂಡ ಹಾಗೂ ಸ್ವಯಂಸೇವಕರು ಹೊಂಡದ ಸುತ್ತಮುತ್ತ ನಿರಂತರವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ಅಥವಾ ಇತರರಿಗೆ ತೊಂದರೆಯಾಗದಂತೆ ಅಳವಡಿಸಬೇಕು ಎಂದರು.
ಮೆರವಣಿಗೆಯ ಸಂದರ್ಭದಲ್ಲಿ ಸ್ವಯಂಸೇವಕರನ್ನು ನಿಯೋಜಿಸಿ ಶಿಸ್ತುಬದ್ಧವಾಗಿ ಹಾಗೂ ಶಾಂತಿಯುತವಾಗಿ ಕಾರ್ಯಕ್ರಮ ನಡೆಯಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಾಮಾಜಿಕ ಜಾಲತಾಣದ ಸಂದೇಶ ಪರಿಶೀಲಿಸಿ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಯಾವುದೇ ಸಂದೇಶವನ್ನು ತಕ್ಷಣ ನಂಬಬಾರದು. ಅದರ ಸತ್ಯಾಸತ್ಯತೆ ಪರಿಶೀಲಿಸಿದ ಬಳಿಕವೇ ಪ್ರತಿಕ್ರಿಯಿಸಬೇಕು. ಪ್ರಚೋದನಕಾರಿ ಅಥವಾ ಸೌಹಾರ್ದತೆ ಕದಡುವಂತಹ ಸಂದೇಶಗಳು ಕಂಡುಬಂದರೆ ಕೂಡಲೇ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು ಎಂದು ಲಕ್ಷ್ಮಣ ನಿಂಬರಗಿ ಹೇಳಿದರು.
ಪರಸ್ಪರ ಸಹಾಯ, ಸಹಕಾರ ಹಾಗೂ ಸೌಹಾರ್ದತೆಯೊಂದಿಗೆ ಗಣೇಶ ಹಬ್ಬವನ್ನು ಸುಸೂತ್ರವಾಗಿ ಆಚರಿಸುವ ಮೂಲಕ ವಿಜಯಪುರ ಜಿಲ್ಲೆಯ ಶಾಂತಿಯ ಪರಂಪರೆಯನ್ನು ಮುಂದುವರಿಸಬೇಕು ಎಂದರು.
ವಿದ್ಯುತ್ ಸುರಕ್ಷತೆಗೆ ಆರ್‌ಸಿಸಿಬಿ ಅಳವಡಿಸಿ
ಹೆಸ್ಕಾಂ ಇಂಜಿನಿಯರ್ ಸಿದ್ದಪ್ಪ ಬಿಂಜಿಗೇರಿ ಮಾತನಾಡಿ, ಗಣೇಶೋತ್ಸವದ ಸಂದರ್ಭದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸೇರಿದಂತೆ ಯಾವುದೇ ಅವಘಡ ಸಂಭವಿಸದಂತೆ ಗಜಾನನ ಮಂಡಳಿಗಳು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯುತ್ ಸಂಪರ್ಕದಲ್ಲಿ ಆರ್‌ಸಿಸಿಬಿ (RCCB) ಅಳವಡಿಸುವ ಮೂಲಕ ವಿದ್ಯುತ್ ಸೋರಿಕೆ ಹಾಗೂ ಅದರಿಂದ ಉಂಟಾಗಬಹುದಾದ ಅವಘಡಗಳನ್ನು ತಡೆಯಬಹುದು. ಹೀಗಾಗಿ ಮಂಡಳಿಯವರು ವಿದ್ಯುತ್ ಅಲಂಕಾರ ಹಾಗೂ ಸಂಪರ್ಕ ವ್ಯವಸ್ಥೆಯನ್ನು ಸುರಕ್ಷಿತವಾಗಿ ನಿರ್ವಹಿಸಬೇಕು ಎಂದು ಹೇಳಿದರು.
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನೀಡುವ ಮಾರ್ಗಸೂಚಿಗಳನ್ನು ಪಾಲಿಸಿ ಗಣೇಶ ಚತುರ್ಥಿಯನ್ನು ಶಾಂತಿ, ಸೌಹಾರ್ದತೆ, ಪರಿಸರ ಕಾಳಜಿ ಹಾಗೂ ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಆಚರಿಸುವಂತೆ ಸಭೆಯಲ್ಲಿ ಕರೆ ನೀಡಲಾಯಿತು.





