ವಿಜಯಪುರ ಜಿಲ್ಲಾದ್ಯಂತ ಮಳೆಯ ಕೊರತೆಯಿಂದ ರೈತರು ಆತಂಕದಲ್ಲಿರುವ ಹಿನ್ನೆಲೆ, ನಗರದ ಹೊರವಲಯದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ರೈತರು ಹಾಗೂ ಜನಪರ ಕಾಳಜಿಯ ಮುಖಂಡರು ವಿಶೇಷ ಪೂಜೆ ಮತ್ತು ಇಂದ್ರ ಹೋಮ ನೆರವೇರಿಸಿದರು.
ದೇವಸ್ಥಾನದಲ್ಲಿ ವೆಂಕಟೇಶ್ವರ ಸ್ವಾಮಿಗೆ ಹಾಲು, ತುಪ್ಪ ಸೇರಿದಂತೆ ವಿವಿಧ ದ್ರವ್ಯಗಳಿಂದ ಅಭಿಷೇಕ ಪೂಜೆ ಸಲ್ಲಿಸಲಾಯಿತು. ಬಳಿಕ ಗೋವುಗಳಿಗೆ ಪೂಜೆ ನೆರವೇರಿಸಿ, ಸಮರ್ಪಕ ಮಳೆಯಾಗುವಂತೆ ಹಾಗೂ ಭೂಮಂಡಲದ ಜನಜೀವನ ಸುಭಿಕ್ಷವಾಗುವಂತೆ ಇಂದ್ರ ದೇವರನ್ನು ಪ್ರಾರ್ಥಿಸಿ ವಿಶೇಷ ಇಂದ್ರ ಯಜ್ಞ ನಡೆಸಲಾಯಿತು.
“ಈ ವರ್ಷ ಉತ್ತಮ ಮಳೆಯಾಗಿ ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿ, ರೈತರ ಬದುಕು ಹಸನಾಗಲಿ, ರಾಜ್ಯದಲ್ಲಿ ಸುಭಿಕ್ಷ ನೆಲೆಸಲಿ” ಎಂದು ಪೂಜೆಯಲ್ಲಿ ಭಾಗವಹಿಸಿದವರು ಪ್ರಾರ್ಥಿಸಿದರು. ಮಳೆಯ ಕೊರತೆಯಿಂದ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಶೀಘ್ರ ಪರಿಹಾರ ದೊರೆಯಲಿ ಎಂಬ ಆಶಯವೂ ವ್ಯಕ್ತವಾಯಿತು.
ಇದನ್ನೂ ಓದಿದ್ದೀರಾ? ಮಳೆ-ಬೆಳೆಯ ಭವಿಷ್ಯ ಹೇಳುವ ಕಾರಹುಣ್ಣಿಮೆ: ಬೇಸಾಯ ಬದುಕಿನ ಅಪರೂಪದ ಹಬ್ಬ
ಈ ಸಂದರ್ಭದಲ್ಲಿ ಮುಖಂಡರಾದ ಉಮೇಶ ಕಾರಜೋಳ, ಸುರೇಶ ಬಿರಾದಾರ, ಸಂದೀಪ ಪಾಟೀಲ ಹಾಗೂ ಹಿರಿಯ ರೈತ ಮುಖಂಡರಾದ ಪಂಚಪ್ಪ ಕಲ್ಬುರ್ಗಿ, ಸಂಗಮೇಶ ಸಗರ, ಸಾತಲಿಂಗಯ್ಯ ಸಾಲಿಮಠ, ರಾಮನಗೌಡ ಪಾಟೀಲ, ಮಹಾದೇವ ಬನಸೋಡೆ, ವಿರೇಶ ಗೊಬ್ಬೂರ, ಶಾನೂರ್ ನಂದರಗಿ, ತಿಪ್ಪಣ್ಣ ನಾಟಿಕಾರ, ಧರೆಪ್ಪ ಅನಂತಪುರ, ಶಿವರಾಜ ಕುಮಟಗಿ ಸೇರಿದಂತೆ ಅನೇಕ ರೈತರು ಇದ್ದರು.




