ರೈತರ ಹೆಗಲಿಗೆ ತಮ್ಮ ಹೆಗಲು ಕೊಟ್ಟು ರೈತನ ಜೀವನಕ್ಕಾಗಿ ತಮ್ಮ ಜೀವ ತೇಯುವ ಮೂಕ ಪ್ರಾಣಿಗಳಾದ ಎತ್ತುಗಳು ದೇವರು ಇದ್ದ ಹಾಗೆ. ಹಾಗಾಗಿ ಕಾರಹುಣ್ಣಿಮೆಯ ದಿನದಂದು ಅವುಗಳನ್ನು ಸಿಂಗರಿಸಿ, ಪೂಜೆ ಮಾಡಿ ಸಂಭ್ರಮಿಸುವ ಒಂದು ರೀತಿಯ ಜನಪದ ಸೊಗಡಿನ ಹಬ್ಬವೇ ಕಾರಹುಣ್ಣಿಮೆ ಎಂದರೂ ತಪ್ಪಾಗಲಾರದು.
ಉತ್ತರ ಕರ್ನಾಟಕದ ಗ್ರಾಮೀಣ ಬದುಕಿನಲ್ಲಿ ಕಾರಹುಣ್ಣಿಮೆಗೆ ವಿಶಿಷ್ಟ ಮಹತ್ವವಿದೆ. ಮುಂಗಾರು ಮಳೆ ಸುರಿದು ಕೃಷಿ ಚಟುವಟಿಕೆಗಳು ಆರಂಭವಾಗಿ ಬಿತ್ತನೆ ಕಾರ್ಯ ಮುಗಿದ ಬಳಿಕ ಆಚರಿಸಲಾಗುವ ಈ ಹಬ್ಬವನ್ನು ರೈತರು ಮಳೆ-ಬೆಳೆಯ ಮುನ್ಸೂಚನೆ ನೀಡುವ ಹಬ್ಬವೆಂದು ನಂಬುತ್ತಾರೆ. ವರ್ಷವಿಡೀ ತಮ್ಮೊಂದಿಗೆ ಹೊಲದಲ್ಲಿ ದುಡಿಯುವ ಎತ್ತುಗಳಿಗೆ ಗೌರವ ಸಲ್ಲಿಸುವ ದಿನವಾಗಿಯೂ ಕಾರಹುಣ್ಣಿಮೆ ವಿಶೇಷ ಸ್ಥಾನ ಪಡೆದಿದೆ.
ಹಬ್ಬಕ್ಕೆ ಕೆಲ ದಿನಗಳ ಮುಂಚೆಯೇ ರೈತರು ಬಣ್ಣದ ಗುಲಾಲ್, ರಿಬ್ಬನ್, ಬಲೂನು ಸೇರಿದಂತೆ ಅಲಂಕಾರಿಕ ಸಾಮಗ್ರಿಗಳನ್ನು ಖರೀದಿಸುತ್ತಾರೆ. ಹಬ್ಬದ ದಿನ ಹೋರಿಗಳು ಹಾಗೂ ಜಾನುವಾರುಗಳನ್ನು ಕೆರೆ ಅಥವಾ ಕಟ್ಟೆಗಳ ಬಳಿ ಕರೆದುಕೊಂಡು ಹೋಗಿ ಸ್ನಾನ ಮಾಡಿಸಿ, ಕೊಂಬುಗಳನ್ನು ಸವರಿ ಬಣ್ಣ ಬಳಿದು, ರಿಬ್ಬನ್, ಗೆಜ್ಜೆ ಹಾಗೂ ಬಲೂನುಗಳಿಂದ ಅಲಂಕರಿಸುತ್ತಾರೆ. ಜಾನುವಾರುಗಳ ಮೈಮೇಲೆ ಬಣ್ಣದ ಚಿತ್ತಾರಗಳನ್ನು ಬಿಡಿಸಿ ಸಿಂಗರಿಸುವ ದೃಶ್ಯ ಗ್ರಾಮೀಣ ಸಂಸ್ಕೃತಿಯ ಸೊಬಗನ್ನು ಹೆಚ್ಚಿಸುತ್ತದೆ.
ಕಾರ ಹುಣಿಮೆಯ ದಿನ ಹೋಳಿಗೆ, ಕಡುಬು ಸೇರಿದಂತೆ ವಿವಿಧ ಸಾಂಪ್ರದಾಯಿಕ ತಿನಿಸುಗಳನ್ನು ಸಿದ್ಧಪಡಿಸುತ್ತಾರೆ. ಮೊದಲು ದೇವರಿಗೆ ನೈವೇದ್ಯ ಅರ್ಪಿಸಿ, ಬಳಿಕ ಜಾನುವಾರುಗಳಿಗೆ ಮೇವು ಮತ್ತು ತಿನಿಸುತ್ತಾರೆ. ನಂತರ ತಾವು ಊಟ ಮಾಡುವ ಸಂಪ್ರದಾಯ ಇಂದಿಗೂ ಮುಂದುವರಿದಿದೆ.
ಈ ಕುರಿತು ಈ ದಿನ.ಕಾಮ್ ಜತೆ ರೈತ ಬಸಪ್ಪ ಪೂಜೇರ ಮಾತನಾಡಿ, “ಕಾರಹುಣ್ಣಿಮೆ ಅಂದ್ರೆ ನಮಗದು ಬರೀ ಹಬ್ಬ ಅಲ್ಲರಿ…. ನಮ್ಮ ಜೀವನದ ಒಂದು ಭಾಗ. ವರ್ಷ ಪೂರ್ತಿ ನಮ್ಮ ಜತೆಗೆ ಹೊಲದಲ್ಲಿ ಬೆವರು ಸುರಿಸೋ ಎತ್ತುಗಳಿಗೆ ಆ ದಿನ ಗೌರವ ಕೊಡ್ತೀವಿ. ಅವುಗಳನ್ನು ಮಕ್ಕಳಂತೆ ಸಿಂಗಾರ ಮಾಡಿ, ಒಳ್ಳೆಯ ಊಟ ಹಾಕಿ ಖುಷಿ ಪಡ್ತೀವಿ. ಕರಿ ಹರಿಲೆ ಯಾವ ಎತ್ತು ಮೊದಲು ಹರೀತೋ, ಅದರ ಮೇಲೆ ಈ ವರ್ಷದ ಮಳೆ-ಬೆಳೆ ಹೇಗಿರುತ್ತೆ ಅಂತ ನಾವು ನಂಬ್ಕೊಂಡು ಬಂದಿದ್ದೀವಿ. ಇದು ನಮ್ಮ ಹಿರಿಯರು ಮಾಡಿಕೊಂಡು ಬಂದ ಪದ್ಧತಿ. ಹಬ್ಬದಿಂದ ಊರಿನ ಜನರೆಲ್ಲ ಒಟ್ಟಾಗ್ತಾರೆ, ರೈತರಿಗೆ ಹೊಸ ಉತ್ಸಾಹ ಬರುತ್ತೆ. ಎಷ್ಟು ಕಾಲ ಬದಲಾದ್ರೂ ಕಾರಹುಣ್ಣಿಮೆ ಆಚರಣೆ ಮಾತ್ರ ಕಡಿಮೆ ಆಗಬಾರದು. ನಮ್ಮ ಮುಂದಿನ ಪೀಳಿಗೆಯೂ ಈ ಸಂಪ್ರದಾಯ ಉಳಿಸಿಕೊಳ್ಳಬೇಕು” ಎಂದರು.

ಕಾರಹುಣ್ಣಿಮೆ ಕೇವಲ ಒಂದು ಹಬ್ಬವಾಗಿರದೆ ರೈತ ಹಾಗೂ ಎತ್ತುಗಳು, ಪ್ರಕೃತಿ ಮತ್ತು ಕೃಷಿ ಸಂಸ್ಕೃತಿಯ ನಡುವೆ ಇರುವ ಅವಿನಾಭಾವ ಸಂಬಂಧವನ್ನು ಸಾರುವ ಉತ್ತರ ಕರ್ನಾಟಕದ ಜೀವಂತ ಪರಂಪರೆಯಾಗಿದೆ.
ಕರಿ ಹರಿಯುವ ಕಾರ್ಯಕ್ರಮ
ಕಾರ ಹಬ್ಬದ ವಿಶೇಷತೆಯಲ್ಲಿ ಕರಿ ಹರಿಯುವ(ಎತ್ತುಗಳನ್ನು ಪೂಜಿಸಿ ಓಡಲು ಬಿಡುವುದು) ಕಾರ್ಯಕ್ರಮವೇ ಒಂದು ವೈಶಿಷ್ಟ್ಯ. ಊರ ಮುಂಭಾಗದಲ್ಲಿ ಬೇವಿನ ತೋರಣದ ನಡುವೆ ಕೊಬ್ಬರಿಯನ್ನು ಕಟ್ಟಲಾಗಿರುತ್ತದೆ. ಈ ಕರಿಯನ್ನು ಹರಿಯಲು ಬಿಳಿ ಹಾಗೂ ಕಂದು ಬಣ್ಣದ ಎತ್ತುಗಳಿಗೆ ಮಾತ್ರ ಅವಕಾಶವಿದ್ದು, ಜೋರಾಗಿ ಭಾಜ ಭಜಂತ್ರಿ ಡೋಲು ಮತ್ತು ತಮಟೆಯ ಸದ್ದಾಗುತ್ತಿದ್ದಂತೆಯೇ, ಸಿಂಗರಿಸಿದ್ದ ತಮ್ಮ ರಾಸುಗಳೊಂದಿಗೆ ರೈತರು ತಾಮುಂದು ನಾಮುಂದು ಎಂದು ಆ ಕರಿಯನ್ನು ಹರಿಯುವತ್ತ ದೌಢಾಯಿಸುತ್ತಾರೆ. ಕರಿ ಹರಿಯುವ ಓಟದಲ್ಲಿ ಎತ್ತುಗಳನ್ನು ಹಿಡಿದ ರೈತರು ಎದ್ದೆನೋ ಬಿದ್ದೇನೋ ಎಂದು ಓಡುತ್ತಿದ್ದರೆ, ಅದನ್ನು ನೋಡಲು ಬಂದಿರುವ ಪಡ್ಡೇ ಹುಡುಗರು ಮತ್ತು ಉಳಿದ ರೈತರುಗಳು ಸಿಳ್ಳೇ ಹೊಡೆಯುತ್ತ, ಜೋರಾಗಿ ಕೇಕೆ ಹಾಕುತ್ತ ಉತ್ಸಾಹ ತುಂಬುತ್ತಾರೆ. ಯಾವ ಬಣ್ಣದ ಎತ್ತು ಮೊದಲು ಕರಿಹರಿಯುತ್ತೋ ಆ ಬಣ್ಣದ ಬೆಳೆ ಆ ಬಾರಿ ಚೆನ್ನಾಗಿ ಬರುತ್ತದೆ ಎನ್ನುವ ನಂಬಿಕೆ ಆ ಎಲ್ಲ ರೈತರದ್ದಾಗಿದೆ.
ಬಿಳಿ ಎತ್ತು ಮೊದಲು ಕರಿ ಹರಿದರೆ ಬಿಳಿಜೋಳ, ಅಂದರೆ ಹಿಂಗಾರು ಮಳೆ-ಬೆಳೆ ಚೆನ್ನಾಗಿ ಆಗುತ್ತದೆ ಎನ್ನುವ ನಂಬಿಕೆ ಇದ್ದು, ಇನ್ನು ಕಂದು ಬಣ್ಣದ ಎತ್ತು ಕರಿ ಹರಿದರೆ ಮುಂಗಾರು ಮಳೆಯ ಬೆಳೆಗಳು ಚೆನ್ನಾಗಿ ಆಗುತ್ತೆ ಎನ್ನುವ ನಂಬಿಕೆಯು ಅಲ್ಲಿನ ರೈತರದ್ದಾಗಿದೆ.
ಕರಿ ಹರಿದ ಎತ್ತಿಗೆ ವಿಶೇಷ ಮೆರವಣಿಗೆ ನಡೆಸಿ, ಅದರ ಮಾಲೀಕರನ್ನು ಸನ್ಮಾನಿಸುವ ಸಂಪ್ರದಾಯವೂ ಕೆಲವು ಗ್ರಾಮಗಳಲ್ಲಿ ಇದೆ. ಕರಿ ಹರಿಯಲು ಬಿಟ್ಟ ಎತ್ತುಗಳು ಊರಿನ ಗಡಿ ದಾಟಿದರೆ ಮುಂದಿನ ವರ್ಷ ಈ ಆಚರಣೆ ನಡೆಸುವುದಿಲ್ಲ ಎಂಬ ನಂಬಿಕೆ ಇರುವುದರಿಂದ, ಎತ್ತುಗಳು ಊರು ದಾಟದಂತೆ ರೈತರು ವಿಶೇಷ ಎಚ್ಚರಿಕೆ ವಹಿಸುತ್ತಾರೆ. ಕರಿ ಹರಿದ ಬಳಿಕ ಗಂಡಸರಿಗೂ ಪಂದ್ಯಾವಳಿಗಳು ಇದ್ದು, ಅದರಲ್ಲೂ ವಿಶೇಷವಾಗಿ ಗುಂಡು ಎತ್ತುವ, ಇಲ್ಲವೇ ಮೂಟೆಗಳನ್ನು ಎತ್ತುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿರುತ್ತದೆ.
ವರ್ಷವಿಡೀ ಕೃಷಿ ಚಟುವಟಿಕೆಯಲ್ಲಿ ತೊಡಗಿ ದೇಹವನ್ನು ಹುರಿಗೊಳಿಸಿಕೊಂಡ ರೈತರಿಗೆ ಇಂದೊದು ರೀತಿಯ ದೈಹಿಕ ಕಸರತ್ತಿನ ಚಟುವಟಿಕೆಗಳು ನಡೆಡು ಅಲ್ಲಿ ಗೆದ್ದವರಿಗೆ ಪ್ರಶಸ್ತಿ ಪುರಸ್ಕಾರಗಳನ್ನು ಹಂಚಿದ ನಂತರ ಎಲ್ಲರು ತಮ್ಮ ಗ್ರಾಮ ದೇವತೆಯ ದೇವಾಲಯಕ್ಕೆ ಹೋಗಿ ಭಕ್ತಿಯಿಂದ ಈ ಬಾರಿ ಮಳೆ ಚೆನ್ನಾಗಿ ಆಗಿ ಬೆಳೆ ಸುಭಿಕ್ಷವಾಗುವಂತಾಗಲಿ ಎಂದು ಬೇಡಿಕೊಳ್ಳುತ್ತಾರೆ.
ಈ ಕಾರಹುಣ್ಣಿಮೆ ಮುಗಿದ ನಂತರವೇ ಮಳೆಗಾಲ ಆರಂಭವಾಗುವುದನ್ನು ನಮ್ಮ ವರಕವಿ ಬೇಂದ್ರೆಯವರೂ ಸಹಾ ತಮ್ಮ ಮೇಘದೂತ ಕವನದಲ್ಲಿ ವ್ಯಕ್ತಪಡಿಸುತ್ತ, ʼಆಗಲಿ ಇದ್ದರೂ ಆಸೆಗೊಂಡಿರಲು ಗಿರಿಯೊಳಂತೂ ಇತ್ತು ಕೆಲವೇ ತಿಂಗಳಲ್ಲಿ ಚಿನ್ನ ಕಡಗ ಮೊಳಕೈಗೆ ಸರಿದು ಬಂತು ಕಾರಹುಣ್ಣಿಮೆಯ ಮಾರನೆಯ ದಿನವೇ ಮೋಡ ಕೋಡನಪ್ಪಿ ಕಂಡಿತೊಡ್ಡಿ ನೋಡ ಡಿಕ್ಕಿಯಾಡುವಾ ಆನೆ ಬೇಡಗನೊಪ್ಪಿʼ ಎಂದು ಹೇಳಿತ್ತಾರೆ.
ರೈತರ ಹೆಗಲಿಗೆ ತಮ್ಮ ಹೆಗಲು ಕೊಟ್ಟು ರೈತನ ಜೀವನಕ್ಕಾಗಿ ತಮ್ಮ ಜೀವ ತೇಯುವ ಮೂಕ ಪ್ರಾಣಿಗಳಾದ ಎತ್ತುಗಳು ದೇವರು ಇದ್ದ ಹಾಗೆ. ಹಾಗಾಗಿ ಕಾರಹುಣ್ಣಿಮೆಯ ದಿನದಂದು ಅವುಗಳನ್ನು ಸಿಂಗರಿಸಿ, ಪೂಜೆ ಮಾಡಿ ಸಂಭ್ರಮಿಸುವ ಒಂದು ರೀತಿಯ ಜನಪದ ಸೊಗಡಿನ ಹಬ್ಬವೇ ಕಾರಹುಣ್ಣಿಮೆ ಎಂದರೂ ತಪ್ಪಾಗಲಾರದು.
ಹಳೇಮೈಸೂರಿನ ಕಡೆ ಸಂಕ್ರಾತಿಯ ದಿನ ಇದೇ ರೀತಿ ದನಗಳಿಗೆ ಸಿಂಗರಿಸಿ ಕಿಚ್ಚು ಹಾಯಿಸುವುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಆಚರಣೆಗಳು ಬೇರೆ ಬೇರೆ ದಿನಗಳಾದರೂ ಸಡಗರ ಸಂಭ್ರಮ ಮತ್ತು ಧ್ಯೇಯ ಒಂದೇ ಆಗಿರುತ್ತದೆ. ಈ ರೀತಿಯ ಹಬ್ಬಗಳು ವಿವಿಧತೆಯಲ್ಲಿ ಏಕತೆಯನ್ನು ಮೂಡಿಸಿ ಗ್ರಾಮ ಗ್ರಾಮಗಳಲ್ಲಿ ಸೌಹಾರ್ದತೆಯನ್ನು ಮೂಡಿಸುವುದರಲ್ಲಿ ಸಹಕಾರಿಯಾಗುತ್ತವೆ.
ಇತ್ತೀಚಿನ ದಿನಗಳಲ್ಲಿ ಎತ್ತುಗಳ ಬದಲಾಗಿ ಟ್ರ್ಯಾಕ್ಟರ್‌ಗಳು ಎಲ್ಲೆಡೆ ಹೇರಳವಾಗಿರುವುದರಿಂದ ಎತ್ತುಗಳೇ ಇಲ್ಲದೇ, ಈ ಕಾರಹುಣ್ಣಿಮೆಯನ್ನು ಹೇಗೆ ಆಚರಿಸುತ್ತಾರೆ ಎಂಬ ಜಿಜ್ಞಾಸೆ ಮೂಡಿದೆ. ಆದರೂ ಹಿರಿಯರು ಇಂತಹ ಪರಿಸ್ಥಿತಿಯನ್ನು ಅಂದೇ ಊಹಿಸಿ ಅದಕ್ಕೂ ಒಂದು ಪರಿಹಾರವನ್ನು ಸೂಚಿಸಿದ್ದಾರೆ. ಕಾರಹುಣ್ಣಿಮೆಗೂ ಮುಂಚೆ ಊರಿನ ಕುಂಬಾರರು ಊರ ಕೆರೆಯಿಂದ ಸಾಕಷ್ಟು ಜೇಡಿಮಣ್ಣನ್ನು ತಂದು ಅದನ್ನು ಹಸನುಮಾಡಿ ಅದರಿಂದ ಮುದ್ದಾದ ಎತ್ತುಗಳನ್ನು ಮಾಡಿ ಅವುಗಳನ್ನು ಚೆನ್ನಾಗಿ ಒಣಗಿಸಿಡುತ್ತಾರೆ. ಕೆಲವಡೆ ಅದಕ್ಕೆ ಬಣ್ಣಗಳಿಂದ ಸಿಂಗರಿಸಿವುದೂ ಉಂಟು.
ಹಬ್ಬದ ಹಿಂದಿನ ದಿನ ಊರಿನ ಮನೆಗಳಿಗೆ ಹೋಗಿ ಯಾರ ಮನೆಯಗಳಲ್ಲಿ ಎತ್ತುಗಳು ಇರುವುದಿಲ್ಲವೂ, ಅವರೆಲ್ಲರಿಗೂ ಮಣ್ಣೆತ್ತುಗಳ ಜೋಡಿಯನ್ನು ಕೊಡುವ ಸಂಪ್ರದಾಯವಿದೆ. ಈ ರೀತಿಯಾಗಿ ಪಡೆದ ಜೋಡೆತ್ತುಗಳಿಗೆ, ಮುಂಗಾರು ಮತ್ತು ಹಿಂಗಾರು ಎಂದು ಹೆಸರಿಟ್ಟು ಅವುಗಳನ್ನು ಭಕ್ತಿಯಿಂದ ಪೂಜೆ ಮಾಡಿ ಮಾರನೆಯ ದಿನ ನೀರಿನಲ್ಲಿ ವಿಸರ್ಜಿಸುತ್ತಾರೆ. ಮಣ್ಣೆತ್ತುಗಳನ್ನು ಮಾಡಿಕೊಟ್ಟ ಕುಂಬಾರರಿಗೆ ಹಿಂದೆಲ್ಲ ಯಥಾ ಶಕ್ತಿ ಧನ ಧಾನ್ಯಗಳನ್ನು ನೀಡುವ ಪದ್ದತಿ ಇತ್ತು. ಈಗ ಹಣವನ್ನೇ ನೀಡುತ್ತಾರೆ. ಈ ರೀತಿಯಾಗಿ ಗುಡಿ ಕೈಗಾರಿಕೆಗೂ ಒತ್ತು ನೀಡುವುದನ್ನು ಹಿಂದಿನವರು ಹಬ್ಬಗಳ ಮೂಲಕ ರೂಢಿಗೆ ತಂದಿರುವುದು ಗಮನಾರ್ಹವಾಗಿದೆ.
ಕಾರಹುಣ್ಣಿಮೆ ಮತ್ತು ನಾಗಪಂಚಮಿ ಹಬ್ಬಗಳಿಗೆ ಮಣ್ಣಿನ ಎತ್ತುಗಳು ಮತ್ತು ಮಣ್ಣಿನ ನಾಗಪ್ಪಗಳನ್ನು ಮಾಡುತ್ತಿದ್ದ ಕುಂಬಾರರಿಗೆ ಇತ್ತೀಚಿಗೆ ಬಂದಿರುವ ಪ್ಲ್ಯಾಸ್ಟಿಕ್ ಗೊಂಬೆಗಳು ಅನಾನುಕೂಲವಾಗಿವೆಯಾದರೂ ಬಹಳಷ್ಟು ಮಂದಿ ಹಿರಿಯರು ಇಂದಿಗೂ ಮಣ್ಣಿನ ಗೊಂಬೆಗಳಿಗೆ ಒತ್ತು ನೀಡುತ್ತಿರುವುದು ಶ್ಲಾಘನೀಯ.




