ಶಿವಸೇನೆಯಲ್ಲಿನ (ಉದ್ಧವ್ ಬಣ) ಪಕ್ಷಾಂತರದ ವದಂತಿಗಳು ತೀವ್ರಗೊಂಡಿರುವ ಬೆನ್ನಲ್ಲೇ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಪುಣೆಯಲ್ಲಿ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಎರಡು ದಿನಗಳ ಪುಣೆ ಪ್ರವಾಸದಲ್ಲಿರುವ ಅಮಿತ್ ಶಾ ಅವರು ಸೇನಾಪತಿ ಬಾಪಟ್ ರಸ್ತೆಯಲ್ಲಿರುವ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್‌ನಲ್ಲಿ ತಂಗಿದ್ದು, ಅಲ್ಲಿಗೆ ಭೇಟಿ ನೀಡಿದ ಏಕನಾಥ್ ಶಿಂದೆ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ. ಈ ಸಭೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ರವೀಂದ್ರ ಚವಾಣ್ ಕೂಡ ಉಪಸ್ಥಿತರಿದ್ದರು.
ಇದನ್ನೂ ಓದಿ: NCPಯಲ್ಲಿ ಮತ್ತೊಂದು ಬಿರುಕು? ತಾಯಿ-ಮಗನ ವಿರುದ್ಧ ಅಮಿತ್ ಶಾಗೆ ದೂರು ನೀಡಿದ ಹಿರಿಯ ನಾಯಕರು
ಉದ್ಧವ್ ಠಾಕ್ರೆ ಬಣದಿಂದ ಬಂಡಾಯವೆದ್ದು ಶಿಂದೆ ಬಣ ಸೇರಿರುವ ಸಂಸದರ ಪೈಕಿ ಓಮರಾಜೆ ನಿಂಬಾಳ್ಕರ್ ಕೂಡ ಈ ಭೇಟಿಯ ವೇಳೆ ಹಾಜರಿದ್ದು, ಶಿವಸೇನೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಕುರಿತು ಅಮಿತ್ ಶಾ ಮತ್ತು ಶಿಂದೆ ನಡುವೆ ಗಂಭೀರ ಚರ್ಚೆ ನಡೆದಿದೆ. ಮುಂಬರುವ ದಿನಗಳಲ್ಲಿ ಶಿವಸೇನೆಗೆ ಕೇಂದ್ರದಲ್ಲಿ ಒಂದು ಸಚಿವ ಸ್ಥಾನ ಸಿಗುವ ಸಾಧ್ಯತೆಯಿದ್ದು, ಆಕಾಂಕ್ಷಿಗಳ ಪಟ್ಟಿಯಲ್ಲಿ ನಿಂಬಾಳ್ಕರ್ ಹೆಸರು ಮುಂಚೂಣಿಯಲ್ಲಿದೆ ಎನ್ನಲಾಗಿದೆ.
ಮತ್ತೊಂದೆಡೆ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ವದಂತಿಗಳ ನಡುವೆಯೇ, ಪುಣೆಯಲ್ಲಿ ಅಮಿತ್ ಶಾ ಅವರ ಸ್ವಾಗತಕ್ಕಾಗಿ ಶಿಂದೆ ಬಣದ ಶಿವಸೇನೆ ಬ್ಯಾನರ್‌ಗಳನ್ನು ಹಾಕಿದೆ. ಅಮಿತ್ ಶಾ ತಂಗಿರುವ ಹೋಟೆಲ್ ಮಾರ್ಗದಲ್ಲಿ ಬಿಜೆಪಿ ನಾಯಕರಿಗಿಂತಲೂ ಏಕನಾಥ್ ಶಿಂದೆ ಅವರ ಬ್ಯಾನರ್‌ಗಳೇ ಹೆಚ್ಚು ರಾರಾಜಿಸುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದಕ್ಕೂ ಮುನ್ನ ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಏಕನಾಥ್ ಶಿಂದೆ, “ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಅಮಿತ್ ಶಾ ಅವರಿಗೆ ನನ್ನ ನಮನಗಳು. ಸಹಕಾರಿ ಕ್ಷೇತ್ರಕ್ಕೆ ಅವರು ಹೊಸ ರೂಪ ನೀಡಿದ್ದಾರೆ” ಎಂದು ಶ್ಲಾಘಿಸಿದ್ದರು.



