ಅನ್ಯಭಾಷೆಗಳ ಪ್ರಭಾವವನ್ನು ತನ್ನ ಭಾಷಾ ಒಳಗೊಳ್ಳುವಿಕೆಯ ಮೂಲಕ ಸ್ವೀಕರಿಸುತ್ತಲೇ ತನ್ನದೇ ಆದ ವೈಶಿಷ್ಟ್ಯವನ್ನು ಜಗತ್ತಿಗೆ ಪರಿಚಯಿಸಿರುವುದು ಕನ್ನಡ ಭಾಷೆಯ ವಿಶೇಷತೆಯಾಗಿದೆ ಎಂದು ಬಸವೇಶ್ವರ ಕಲಾ ಮಹಾವಿದ್ಯಾಲಯದ ಕನ್ನಡ ಸ್ನಾತಕೋತ್ತರ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀಹರಿ ಧೂಪದ ಅಭಿಪ್ರಾಯಪಟ್ಟರು.
ಬಾಗಲಕೋಟೆ ನಗರದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎರಡು ಸಾವಿರ ವರ್ಷಗಳಿಗೂ ಮಿಗಿಲಾದ ಇತಿಹಾಸ ಮತ್ತು ಶ್ರೀಮಂತ ಪರಂಪರೆಯನ್ನು ಹೊಂದಿರುವ ಕನ್ನಡ ಭಾಷೆಯ ಹೆಮ್ಮೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಯುವಜನತೆಯ ಮೇಲಿದೆ. ಕನ್ನಡ ಕೇವಲ ಸಂವಹನದ ಭಾಷೆಯಲ್ಲ, ಅದೊಂದು ಜ್ಞಾನದ ಗಣಿಯಾಗಿದೆ. ಕನ್ನಡದ ಜ್ಞಾನ ಸಂಪತ್ತನ್ನು ಅನ್ಯಭಾಷೆಗಳ ಸಂಪರ್ಕದೊಂದಿಗೆ ಜಗತ್ತಿಗೆ ತಲುಪಿಸುವ ಕಾರ್ಯವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಸ್.ಜೆ. ಒಡೆಯರ್ ಮಾತನಾಡಿ, ಮಗುವಿನಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯ ಬೀಜ ಬಿತ್ತುವಲ್ಲಿ ಮಾತೃಭಾಷೆಯ ಪಾತ್ರ ಮಹತ್ವದ್ದಾಗಿದೆ. ಶ್ರೇಷ್ಠ ಪರಂಪರೆಯನ್ನು ಹೊಂದಿರುವ ಕನ್ನಡ ಭಾಷೆ ನಾಡಿನ ಸಂಸ್ಕೃತಿ ಹಾಗೂ ಸಂಸ್ಕಾರದ ಪ್ರತೀಕವಾಗಿದೆ ಎಂದರು.
ಕವಿಗೋಷ್ಠಿ, ಡೊಳ್ಳು ವಾದ್ಯಮೇಳ, ನೃತ್ಯ ಪ್ರದರ್ಶನಕನ್ನಡ ರಾಜ್ಯೋತ್ಸವದ ಅಂಗವಾಗಿ ಕವಿಗೋಷ್ಠಿ, ಡೊಳ್ಳು ವಾದ್ಯಮೇಳ ಹಾಗೂ ಕನ್ನಡ ನಾಡು-ನುಡಿಯನ್ನು ಬಿಂಬಿಸುವ ನೃತ್ಯ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು.
ಕವಿಗೋಷ್ಠಿಯಲ್ಲಿ ಒಂಬತ್ತು ವಿದ್ಯಾರ್ಥಿನಿಯರು ಹಾಗೂ ಐವರು ಪ್ರಾಧ್ಯಾಪಕರು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿ ಕನ್ನಡ ಸಾಹಿತ್ಯದ ಸೊಗಡನ್ನು ಅನಾವರಣಗೊಳಿಸಿದರು.
ಡೊಳ್ಳು ವಾದ್ಯಮೇಳದ ಕಲಾವಿದರು ಡೊಳ್ಳು ಬಾರಿಸುತ್ತಾ, ಅತಿಥಿಗಳನ್ನು ಬಿಳೂರು ಅಜ್ಜನ ಗುಡಿಯಿಂದ ಮೆರವಣಿಗೆಯ ಮೂಲಕ ಸ್ವಾಗತಿಸಿ ಕಾರ್ಯಕ್ರಮದ ಸ್ಥಳಕ್ಕೆ ಕರೆತಂದರು.ಮೂರು ತಂಡಗಳ ವಿದ್ಯಾರ್ಥಿನಿಯರು ಕನ್ನಡ ನಾಡು-ನುಡಿಯ ಮಹತ್ವ ಸಾರುವ ಆಕರ್ಷಕ ನೃತ್ಯ ಪ್ರದರ್ಶನ ನೀಡಿ ನೆರೆದವರ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಡಾ. ಜಿ.ಐ. ನಂದಿಕೋಲಮಠ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಂದನಾ ಸತ್ತಿಗೇರಿ ವಂದಿಸಿದರು. ಎಸ್.ಕೆ. ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.




