- ಯಾವುದೇ ಸಂಘಟನೆಗಳು ಕಾನೂನು ಕೈಗೆ ತೆಗೆದುಕೊಂಡರೆ ನಿಷೇಧ ಕಟ್ಟಿಟ್ಟ ಬುತ್ತಿ
- ಹಿಜಾಬ್, ಹಲಾಲ್ ಕಟ್ ಹಾಗೂ ಗೋಹತ್ಯೆ ಕಾನೂನುಗಳ ಮೇಲಿನ ನಿಷೇಧ ಹಿಂದಕ್ಕೆ
ರಾಜ್ಯದಲ್ಲಿ ಶಾಂತಿ ಕದಡಿದರೆ ಬಜರಂಗದಳ ಮತ್ತು ಆರ್‌ಎಸ್‌ಎಸ್‌ನಂತಹ ಸಂಘಟನೆಗಳನ್ನು ತಮ್ಮ ಸರ್ಕಾರ ನಿಷೇಧಿಸುತ್ತದೆ. ಒಂದು ವೇಳೆ ಬಿಜೆಪಿ ನಾಯಕರಿಗೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿದ್ದರೆ ಪಾಕಿಸ್ತಾನಕ್ಕೆ ಹೋಗಬಹುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, “ನಾವು ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡುತ್ತೇವೆ ಎಂದು ಭರವಸೆ ನೀಡಿದ್ದೇವೆ. ಒಂದು ವೇಳೆ ಶಾಂತಿ ಕದಡಿದರೆ ಅದು ಬಜರಂಗದಳ ಅಥವಾ ಆರ್‌ಎಸ್‌ಎಸ್ ಎಂಬುದನ್ನು ನಾವು ಪರಿಗಣಿಸುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.
“ಹಿಜಾಬ್, ಹಲಾಲ್ ಕಟ್ ಮತ್ತು ಗೋ ಹತ್ಯೆ ಕಾನೂನುಗಳ ಮೇಲಿನ ನಿಷೇಧವನ್ನು ಸರ್ಕಾರ ಹಿಂಪಡೆಯಲಿದೆ. ಸಮಾಜದಲ್ಲಿ ಕಾನೂನು ಮತ್ತು ಪೊಲೀಸರ ಭಯವಿಲ್ಲದೆ ಕೆಲವು ಅಂಶಗಳು ಮುಕ್ತವಾಗಿ ವಿಹರಿಸುತ್ತಿವೆ. ಕಳೆದ ಮೂರು ವರ್ಷಗಳಿಂದ ಈ ಪ್ರವೃತ್ತಿ ನಡೆಯುತ್ತಿದೆ” ಎಂದಿದ್ದಾರೆ.
“ಕಾನೂನನ್ನು ಕೈಗೆ ತೆಗೆದುಕೊಂಡರೆ ನಿಷೇಧ ಕಟ್ಟಿಟ್ಟ ಬುತ್ತಿ. ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಬಜರಂಗದಳ, ಆರ್‌ಎಸ್‌ಎಸ್ ಸೇರಿದಂತೆ ಯಾವುದೇ ಸಂಘಟನೆಯನ್ನು ನಿಷೇಧಿಸಲು ಹಿಂದೆ ಮುಂದೆ ಯೋಚಿಸುವುದಿಲ್ಲ” ಎಂದು ಹೇಳಿದ್ದಾರೆ.
“ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕುವ ಕಾನೂನು ನಮಗೆ ಬೇಕಾಗಿದೆ. ಯಾರೋ ನಾಗಪುರದವರು ಆದೇಶಿಸುವ ಕಾನೂನು ನಮಗೆ ಬೇಕಾಗಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ‘ಪುಣ್ಯಕೋಟಿ’ ಯೋಜನೆ ಪ್ರಾರಂಭ ಆಯಿತು. ಬಿಜೆಪಿ ಶಾಸಕರು ಯಾರೂ ಒಂದೇ ಒಂದು ಹಸುವನ್ನೂ ದತ್ತು ಪಡೆಯಲಿಲ್ಲ” ಎಂದು ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದರು.
ಈ ಸುದ್ದಿ ಓದಿದ್ದೀರಾ? ಷರತ್ತು ಇಲ್ಲದೆ ಗ್ಯಾರಂಟಿ ಯೋಜನೆ ಜಾರಿ ಮಾಡಿ, ಇಲ್ಲದಿದ್ದರೆ ವಿರೋಧಿ ಅಭಿಯಾನ: ಎಚ್‌ಡಿಕೆ ಎಚ್ಚರಿಕೆ
“ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜನರು ಅವರನ್ನು ವಿರೋಧ ಪಕ್ಷದಲ್ಲಿ ಕೂರಿಸಲು ಕಾರಣವೇನು ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು. ಕೇಸರೀಕರಣ ತಪ್ಪು ಎಂದು ಹೇಳಿದ್ದೇವೆ, ಎಲ್ಲರೂ ಅನುಸರಿಸಬಹುದಾದ ಬಸವಣ್ಣನವರ ತತ್ವಗಳನ್ನು ಕಾಂಗ್ರೆಸ್ ಅನುಸರಿಸುತ್ತದೆ” ಎಂದು ತಿಳಿಸಿದ್ದಾರೆ.