ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿರುವ ಬಡ ರೈತರು ಹಾಗೂ ಕೂಲಿ ಕಾರ್ಮಿಕರಿಗೆ ಸಮರ್ಪಕ ಕೂಲಿ ಪಾವತಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಶಹಾಪುರ ತಾಲೂಕು ಸಮಿತಿ ವತಿಯಿಂದ ಗುರುವಾರ ರಸ್ತಾಪುರ ಗ್ರಾಮ ಪಂಚಾಯಿತಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಯಿತು.
ಧರಣಿ ವೇಳೆ ಮಾತನಾಡಿ ಸಂಘದ ಮುಖಂಡರು, ರಸ್ತಾಪುರ, ವಿಭೂತಹಳ್ಳಿ, ಗೋಲಗೇರಾ ಹಾಗೂ ಶಾರದಹಳ್ಳಿ ಗ್ರಾಮಗಳ ನೂರಾರು ಕೂಲಿ ಕಾರ್ಮಿಕರು ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿದ್ದು, ಕೆಲವರಿಗೆ ದುಡಿಮೆಗೆ ಅನುಗುಣವಾಗಿ ಕೂಲಿ ಪಾವತಿಯಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಗ್ರಾಮೀಣ ಪ್ರದೇಶದಲ್ಲಿ ದಿನಗೂಲಿ ₹250ರಿಂದ ₹300ರವರೆಗೆ ಇದ್ದರೆ, ಉದ್ಯೋಗ ಖಾತರಿ ಯೋಜನೆಯಡಿ ನಿಗದಿಯಾಗಿರುವ ಕೂಲಿ ಮೊತ್ತಕ್ಕೆ ಅನುಗುಣವಾಗಿ ಹಣ ಪಾವತಿಸಬೇಕು ಎಂದು ಒತ್ತಾಯಿಸಿದರು.
ಉದ್ಯೋಗ ಖಾತರಿ ಯೋಜನೆಯಡಿ ಬಾಕಿ ಇರುವ ಕೂಲಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಕಾರ್ಮಿಕರಿಗೆ ಶುದ್ಧ ಕುಡಿಯುವ ನೀರು ಹಾಗೂ ಟೆಂಟ್ ವ್ಯವಸ್ಥೆ ಕಲ್ಪಿಸಬೇಕು. ಗ್ರಾಮ ಪಂಚಾಯಿತಿಯಿಂದ ಐದು ಕಿ.ಮೀ. ದೂರದಲ್ಲಿ ಕೆಲಸ ನೀಡಿದರೆ ಸಂಚಾರ ವೆಚ್ಚವನ್ನು ಪಾವತಿಸಬೇಕು. ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ಬರುವ ಕಾರ್ಮಿಕರಿಂದ ಅರ್ಜಿ ಸ್ವೀಕರಿಸಿ ರಸೀದಿ ನೀಡಬೇಕು. ಎನ್ಎಂಆರ್ ಜಾರಿಯಾದ ಕೂಡಲೇ ಕೆಲಸ ಹಾಗೂ ಅಳತೆ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಸ್ತಾಪುರ ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು, ಸಿಸಿ ರಸ್ತೆ, ಒಳಚರಂಡಿ ಹಾಗೂ ಸಾಮೂಹಿಕ ಶೌಚಾಲಯ ಸೇರಿದಂತೆ ಮೂಲಸೌಕರ್ಯ ಕಲ್ಪಿಸಬೇಕು. ಗ್ರಾಮ ಪಂಚಾಯಿತಿ ಕಚೇರಿಗೆ ವಿದ್ಯುತ್ ಸಂಪರ್ಕ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಬಡ ರೈತರು ಹಾಗೂ ಕೂಲಿ ಕಾರ್ಮಿಕರಿಗೆ ನಿವೇಶನ ಹಕ್ಕುಪತ್ರ ನೀಡುವಲ್ಲಿ ಹಣದ ಬೇಡಿಕೆ ಇದ್ದರೆ ಅದನ್ನು ತಡೆಯಬೇಕು ಮತ್ತು ಉಚಿತವಾಗಿ ಹಕ್ಕುಪತ್ರ ಒದಗಿಸಬೇಕು ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿಗೆ ನೂತನವಾಗಿ ಆಗಮಿಸಿರುವ ಪವನ್ ಕಟ್ಟಿಮನಿ ಅವರನ್ನು ವರ್ಗಾವಣೆ ಮಾಡಬೇಕು ಎಂಬ ಬೇಡಿಕೆಯನ್ನೂ ಸಂಘ ಮುಂದಿಟ್ಟಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಮಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನ: ತಂದೆ ವಿರುದ್ಧ ಪ್ರಕರಣ ದಾಖಲು
ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಭೀಮಣ್ಣ ತಪ್ಪೆದಾರ, ಭಾಗಣ್ಣ ಪೂಜಾರಿ, ಶರಬಣ್ಣ ಗೋಲಗೇರಾ, ಮರಿಯಪ್ಪ ಗೋಲಗೇರ, ಅಯ್ಯಪ್ಪ ವಿಭೂತಹಳ್ಳಿ, ಅಯ್ಯಪ್ಪ ಕೊಂಬಿನ್, ಶಿವಪ್ಪ ವಿಭೂತಹಳ್ಳಿ, ಶಿವಾನಂದ ಪೂಜಾರಿ, ಶ್ರೀನಾಥ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.




