ಸುಮಾರು ನಾಲ್ಕು ದಶಕಗಳ ಹಿಂದೆ ಸ್ವಾಧೀನಪಡಿಸಿಕೊಂಡಿದ್ದ ಜಮೀನಿಗೆ ಸಂಬಂಧಿಸಿದ ಪರಿಹಾರ ಮೊತ್ತವನ್ನು ಪಾವತಿಸದ ಹಿನ್ನೆಲೆಯಲ್ಲಿ ಯಾದಗಿರಿ ನಗರಸಭೆಗೆ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶದ ಬಿಸಿ ತಟ್ಟಿದ್ದು, ಕಚೇರಿಯಲ್ಲಿನ ವಿವಿಧ ಸಾಮಗ್ರಿಗಳನ್ನು ಮಂಗಳವಾರ ಜಪ್ತಿ ಮಾಡಲಾಗಿದೆ.
ನಗರದ ನಿವಾಸಿ ಸರಸ್ವತಿ ನಾರಾಯಣರಾವ್ ಅವರಿಗೆ ಸೇರಿದ ಜಮೀನನ್ನು ನಗರಸಭೆ ಹಲವು ವರ್ಷಗಳ ಹಿಂದೆ ಸ್ವಾಧೀನಪಡಿಸಿಕೊಂಡಿತ್ತು. ಆರಂಭದಲ್ಲಿ ಭಾಗಶಃ ಪರಿಹಾರ ನೀಡಲಾಗಿದ್ದರೂ, ಉಳಿದ ಮೊತ್ತಕ್ಕಾಗಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯವು ಸರಸ್ವತಿ ಅವರಿಗೆ ₹2.12 ಕೋಟಿ ಪರಿಹಾರ ಪಾವತಿಸುವಂತೆ ನಗರಸಭೆಗೆ ಆದೇಶಿಸಿತ್ತು.
ಆದರೆ, ನ್ಯಾಯಾಲಯದ ಆದೇಶದಂತೆ ಪರಿಹಾರ ಮೊತ್ತ ಪಾವತಿಯಾಗದ ಕಾರಣ ನ್ಯಾಯಾಲಯವು ನಗರಸಭೆ ಕಚೇರಿಯಲ್ಲಿನ ಆಸ್ತಿಗಳನ್ನು ಜಪ್ತಿ ಮಾಡುವಂತೆ ವಾರಂಟ್ ಹೊರಡಿಸಿತ್ತು. ಅದರಂತೆ ನ್ಯಾಯಾಲಯದ ಸಿಬ್ಬಂದಿ ಮಂಗಳವಾರ ನಗರಸಭೆ ಕಚೇರಿಗೆ ತೆರಳಿ ಕಂಪ್ಯೂಟರ್‌ಗಳು, ಸಿಸಿಟಿವಿ ಕ್ಯಾಮೆರಾಗಳು, ಟೇಬಲ್, ಕುರ್ಚಿಗಳು ಸೇರಿದಂತೆ ವಿವಿಧ ಕಚೇರಿ ಸಾಮಗ್ರಿಗಳನ್ನು ಜಪ್ತಿ ಮಾಡಿಕೊಂಡರು.
ಈ ಮೊದಲು ಸೋಮವಾರವೇ ಸಿಬ್ಬಂದಿ ಲಾರಿಯೊಂದಿಗೆ ನಗರಸಭೆಗೆ ಆಗಮಿಸಿದ್ದರು. ಆಗ ಎಸ್‌ಐಆರ್‌ಗೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಕಂಪ್ಯೂಟರ್‌ಗಳಲ್ಲಿ ಇರುವುದರಿಂದ ಸ್ವಲ್ಪ ಕಾಲಾವಕಾಶ ನೀಡುವಂತೆ ಪೌರಾಯುಕ್ತ ಉಮೇಶ್ ಚವ್ಹಾಣ ಮನವಿ ಮಾಡಿದ್ದರು. ಆದರೆ ಯಾವುದೇ ಪರಿಹಾರ ಕಂಡುಬರದ ಹಿನ್ನೆಲೆಯಲ್ಲಿ ಮಂಗಳವಾರ ಜಪ್ತಿ ಪ್ರಕ್ರಿಯೆ ಜಾರಿಗೊಂಡಿತು.
ಇದನ್ನು ಓದಿದ್ದೀರಾ? ಯಾದಗಿರಿ | ಗುರು ಪೂರ್ಣಿಮೆ ಅಂಗವಾಗಿ ಶಿಕ್ಷಕರಿಗೆ ಗ್ರಾಮಸ್ಥರಿಂದ ಗುರುವಂದನೆ ಕಾರ್ಯಕ್ರಮ
ಪೌರಾಯುಕ್ತ ಉಮೇಶ್ ಚವ್ಹಾಣ ಮಾತನಾಡಿ, ನ್ಯಾಯಾಲಯದ ಆದೇಶವನ್ನು ಪಾಲಿಸುವ ಬದ್ಧತೆ ನಗರಸಭೆಗಿದೆ. ಆದರೆ ಒಂದೇ ಬಾರಿಗೆ ₹2.12 ಕೋಟಿ ಪಾವತಿಸಲು ಆರ್ಥಿಕವಾಗಿ ಸಾಧ್ಯವಾಗುತ್ತಿಲ್ಲ. ಈಗಾಗಲೇ ₹20 ಲಕ್ಷ ಪಾವತಿಸಿದ್ದು, ಹೆಚ್ಚುವರಿಯಾಗಿ ₹5 ಲಕ್ಷ ನೀಡುವ ಪ್ರಸ್ತಾಪ ಮಾಡಲಾಗಿತ್ತು. ಅದಕ್ಕೆ ಒಪ್ಪಿಗೆ ಸಿಗದ ಕಾರಣ ನ್ಯಾಯಾಲಯದ ಆದೇಶದಂತೆ ಕಚೇರಿ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.





