ಸಾರ್ವಜನಿಕರ ಹಿತರಕ್ಷಣೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು, ಆರೋಪಿಯೊಬ್ಬರಿಗೆ ಗೌರವ ಸಲ್ಲಿಸುವ ನೆಪದಲ್ಲಿ ವ್ಯವಸ್ಥೆಯನ್ನೇ ಅಣಕಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರಿಗೆ ನೋಟಿಸ್ ನೀಡಲು ತೆರಳಿದ್ದ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (ಪಿಎಸ್‌ಐ) ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬದಲು ಸೆಲ್ಯೂಟ್ ಹೊಡೆದಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಒಂದು ಕಾಲದಲ್ಲಿ ಕಾನೂನಿನ ಭಯದಿಂದ ತಿಂಗಳಿಗೆ ಮೂರ್ನಾಲ್ಕು ಬಾರಿ ಪೊಲೀಸ್ ಠಾಣೆಗೆ ಅಲೆದು, ರಿಜಿಸ್ಟರ್‌ಗೆ ಸಹಿ ಹಾಕಿ ಬರುತ್ತಿದ್ದ ಇತಿಹಾಸ ಹೊಂದಿರುವ ಒಬ್ಬ ಆರೋಪಿಗೆ ಇಲಾಖೆಯ ಅಧಿಕಾರಿಯೇ ಸಾಷ್ಟಾಂಗ ನಮಸ್ಕಾರ ಎಂಬಂತೆ ಸೆಲ್ಯೂಟ್ ಹೊಡೆಯುವ ಅಗತ್ಯ ಏನಿತ್ತು? ಎಂದು ಪ್ರಶ್ನಿಸಿದ್ದಾರೆ.
ಸಾರ್ವಜನಿಕರು ಪೊಲೀಸ್ ಇಲಾಖೆಯ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಕಾನೂನು ಎಲ್ಲರಿಗೂ ಒಂದೇ, ಅಧಿಕಾರಿಗಳು ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ನಿರ್ಭಯವಾಗಿ ಕರ್ತವ್ಯ ನಿರ್ವಹಿಸುತ್ತಾರೆ ಎಂಬ ಭರವಸೆ ಜನರಲ್ಲಿದೆ. ಆದರೆ, ಆರೋಪಿ ಸ್ಥಾನದಲ್ಲಿರುವ ರಾಜಕಾರಣಿಯ ಎದುರು ಇಲಾಖೆಯ ಶಿಸ್ತು ಮತ್ತು ಆತ್ಮಾಭಿಮಾನವನ್ನು ಒತ್ತೆಯಿಟ್ಟು ಸೆಲ್ಯೂಟ್ ಹೊಡೆಯುವ ಅಧಿಕಾರಿಗಳ ನಡವಳಿಕೆ ಇಲಾಖೆಯ ಮೇಲಿರುವ ಜನಸಾಮಾನ್ಯರ ಗೌರವವನ್ನು ಕುಸಿಯುವಂತೆ ಮಾಡಿದೆ ಎಂದು ನಾಗೇಂದ್ರ ಪುತ್ರನ್ ಹೇಳಿದ್ದಾರೆ.
ಪೊಲೀಸ್ ಅಧಿಕಾರಿಗಳು ಒಂದು ವಿಷಯವನ್ನು ಸ್ಪಷ್ಟವಾಗಿ ನೆನಪಿನಲ್ಲಿಡಬೇಕು. ರಾಜಕಾರಣ ಹಾಗೂ ಅಧಿಕಾರ ಎಂಬುದು ಕೆಲವೇ ವರ್ಷಗಳ ಕಾಲ ಮಾತ್ರ ಇರಬಹುದಾದ ತಾತ್ಕಾಲಿಕ ವ್ಯವಸ್ಥೆ. ಆದರೆ, ಸರ್ಕಾರಿ ಉದ್ಯೋಗ ಮತ್ತು ಇಲಾಖೆಯ ಶಿಸ್ತು ನಿಮ್ಮ ನಿವೃತ್ತಿಯ ತನಕ ಜೊತೆಗಿರುತ್ತದೆ. ರಾಜಕಾರಣಿಗಳ ಮುಂದೆ ತಲೆಬಾಗಿ ಖಾಕಿ ಸಮವಸ್ತ್ರದ ಘನತೆಯನ್ನು ಕುಗ್ಗಿಸುವ ಕೆಲಸವನ್ನು ಯಾವುದೇ ಅಧಿಕಾರಿಯೂ ಮಾಡಬಾರದು ಎಂದು ಅವರು ಎಚ್ಚರಿಸಿದ್ದಾರೆ.
ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬುದನ್ನು ಸಾಬೀತುಪಡಿಸಬೇಕಾದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣವೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಆರೋಪಿ ಶಾಸಕನಿಗೆ ನೋಟಿಸ್ ನೀಡುವಾಗ ಅನಗತ್ಯವಾಗಿ ಸೆಲ್ಯೂಟ್ ಹೊಡೆದು ಇಲಾಖೆಗೆ ಮುಜುಗರ ತಂದಿಟ್ಟ ಆ ಪೊಲೀಸ್ ಅಧಿಕಾರಿಯ ವಿರುದ್ಧ ಕೂಡಲೇ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಕೋಟ ನಾಗೇಂದ್ರ ಪುತ್ರನ್ ಆಗ್ರಹಿಸಿದ್ದಾರೆ.
ವೀಡಿಯೋ ವೈರಲ್ ಆದ ಬೆನ್ನಲ್ಲೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಮಾಣದಲ್ಲಿ ಚರ್ಚೆಗಳು ನಡೆಯುತ್ತಿವೆ. ಸಾಮಾಜಿಕ ಹೋರಾಟಗಾರ ಡಿವೈಎಫ್ ಐ ಮುಖಂಡ ಮುನೀರ್ ಕಾಟಿಪಳ್ಳ ಈ ಕುರಿತು ಸಾಮಾಜಿಕ ತಾಣದಲ್ಲಿ ಪ್ರತಿಕ್ರಿಯಿಸಿದ್ದು ” ಕ್ರಿಮಿನಲ್ ಪ್ರಕರಣದಲ್ಲಿ FIR ಆಗಿರುವ ಆರೋಪಿಗೆ ವಿಚಾರಣೆಗೆ ಹಾಜರಾಗಲು ನೋಟೀಸು ನೀಡಿದ ತರುವಾಯ ಸೆಲ್ಯೂಟ್ ಹೊಡೆಯುವ ಸಂಪ್ರದಾಯ ಇದೆಯೆ ? ಅಥವಾ ಇದು ಉಡುಪಿಯಲ್ಲಿ ಮಾತ್ರ ಜಾರಿಯಲ್ಲಿ ಇರುವುದೆ ? ಕ್ರಿಮಿನಲ್ ಆರೋಪ ಹೊತ್ತ ಬಿಜೆಪಿ ಶಾಸಕರುಗಳಿಗೆ ಮಾತ್ರ ಈ ಗೌರವವೆ ?
ರಾಹುಲ್ ಗಾಂಧಿ ಹಾಗು ಪ್ರಕಾಶ್ ರೈ ಅವರಿಗೆ ಕೊಲೆ ಬೆದರಿಕೆ ಒಡ್ಡಿದ ಪ್ರಕರಣದ ಆರೋಪಿ ಶಾಸಕ ಯಶ್ಪಾಲ್ ಸುವರ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸು ನೀಡಿದ ತರುವಾಯ ಪೊಲೀಸ್ ಅಧಿಕಾರಿ ಯಶ್ಪಾಲ್ ಸುವರ್ಣ ಅವರಿಗೆ ಸೆಲ್ಯೂಟ್ ಹೊಡೆದಿರುವ ವೀಡಿಯೋ ನೋಡಿ ಅಚ್ಚರಿ ಹಾಗು ಆಘಾತವಾಯಿತು. ಇಷ್ಟೊಂದು ಭಯ, ಗೌರವ ಇರುವವರು ನಡೆಸುವ ವಿಚಾರಣೆ ಎಷ್ಟು ವಿಶ್ವಾಸಾರ್ಹ ಆಗಿರಬಹುದು ? ಎಂದು ಪ್ರಶ್ನಿಸಿದ್ದಾರೆ.








