ಅಸ್ಪೃಶ್ಯತೆ ಆಚರಣೆ ಹಾಗೂ ಜಾತಿ ನಿಂದನೆ ಆರೋಪದಡಿ 13 ಮಂದಿ ವಿರುದ್ಧ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಸುರಪುರ ತಾಲ್ಲೂಕಿನ ಸೂಗೂರ ಗ್ರಾಮದಲ್ಲಿ ಜಿಲ್ಲಾಡಳಿತ ಮಧ್ಯಪ್ರವೇಶಿಸಿದೆ. ಗ್ರಾಮದಲ್ಲಿ ಇಂತಹ ಅಮಾನವೀಯ ಆಚರಣೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ರಾಹುಲ್ ಪಾಂಡೈ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಗ್ರಾಮದಲ್ಲಿ ಮಂಗಳವಾರ ಎರಡೂ ಸಮುದಾಯಗಳ ಮುಖಂಡರು ಹಾಗೂ ಗ್ರಾಮಸ್ಥರೊಂದಿಗೆ ಶಾಂತಿ ಸಭೆ ನಡೆಸಿದ ಜಿಲ್ಲಾಧಿಕಾರಿ, ಪರಿಶಿಷ್ಟ ಜಾತಿಯವರಿಗೆ ಹೋಟೆಲ್ ಮತ್ತು ದೇವಸ್ಥಾನ ಪ್ರವೇಶ ನಿರಾಕರಿಸುವುದು ಗಂಭೀರ ಕಾನೂನು ಉಲ್ಲಂಘನೆಯಾಗಿದೆ ಎಂದು ತಿಳಿಸಿದರು.
“ಗ್ರಾಮದಲ್ಲಿ ಇನ್ನು ಮುಂದೆ ಅಸ್ಪೃಶ್ಯತೆ ಆಚರಣೆ, ಜಾತಿ ಆಧಾರಿತ ತಾರತಮ್ಯ ಹಾಗೂ ನಿರ್ಬಂಧಗಳಿಗೆ ಅವಕಾಶ ನೀಡಬಾರದು. ಪರಿಶಿಷ್ಟ ಜಾತಿಯವರನ್ನು ಹೋಟೆಲ್, ದೇವಸ್ಥಾನ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶಿಸದಂತೆ ತಡೆಯುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಅಸ್ಪೃಶ್ಯತೆ ಆಚರಣೆ ಹಾಗೂ ಜಾತಿ ನಿಂದನೆ ಆರೋಪದಡಿ 13 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಮತ್ತೆ ಇಂತಹ ಘಟನೆಗಳು ಮರುಕಳಿಸಿದರೆ ಕಾನೂನು ಕ್ರಮ ಅನಿವಾರ್ಯ” ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಪರಸ್ಪರ ಗೌರವದ ವಾತಾವರಣ ನಿರ್ಮಾಣವಾಗಬೇಕು. ಎಲ್ಲ ಸಮುದಾಯದವರು ಅನ್ಯೋನ್ಯತೆಯಿಂದ ಬದುಕಬೇಕು ಎಂದು ಅವರು ಕರೆ ನೀಡಿದರು.
ಎಸ್‌ಪಿ ಪೃಥ್ವಿಕ್ ಶಂಕರ್ ಮಾತನಾಡಿ, ಸಂವಿಧಾನ ಪ್ರತಿಯೊಬ್ಬರಿಗೂ ಸಮಾನತೆಯ ಹಕ್ಕು ನೀಡಿದೆ. ಜಾತಿ ಆಧಾರದ ಮೇಲೆ ವ್ಯಕ್ತಿಯ ಹಕ್ಕುಗಳನ್ನು ನಿರಾಕರಿಸುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಎಲ್ಲರೂ ಸಮಾನವಾಗಿ, ಗೌರವಯುತವಾಗಿ ಬದುಕುವ ವಾತಾವರಣ ನಿರ್ಮಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಕಲಬುರಗಿ | ವಕೀಲರ ಮೇಲಿನ ಹಲ್ಲೆ, ಕೊಲೆ ಪ್ರಕರಣಗಳಿಗೆ ಕಡಿವಾಣ ಹಾಕಿ: ಸಂರಕ್ಷಣಾ ಕಾಯ್ದೆ ಬಲಪಡಿಸಲು ಆಗ್ರಹ
ಸಭೆಯಲ್ಲಿ ತಹಶೀಲ್ದಾರ್ ಎಚ್.ಎ. ಸರಕಾವಸ, ಡಿವೈಎಸ್‌ಪಿ ಶಿವರಾಜ್ ಕಟಕಭಾವಿ, ಇಒ ಬಸವರಾಜ ಸಜ್ಜನ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಹಮದ್ ಸಲೀಂ, ಮುಖಂಡರಾದ ನಿಂಗಣ್ಣ ಗೋನಾಲ, ನಂದಕುಮಾರ್ ಬಾಂಬೆಕರ್, ನಾಗರಾಜ್ ಓಕುಳಿ, ಭೀಮಾಶಂಕರ ಬಿಲ್ಲವ್, ದಾನಪ್ಪ ಕಡಿಮನಿ, ಹಣಮಂತ ಬಿಲ್ಲವ್, ನಾಗು ಗೋಗಿಕೇರ, ಭೀಮಣ್ಣ ಅಡಗಿ, ಗ್ರಾಮಸ್ಥರಾದ ರಾಮಪ್ಪ ಕೋರೆ, ರಮೇಶ್ ಪೂಜಾರಿ ಸೇರಿದಂತೆ ಹಲವರು ಭಾಗವಹಿಸಿದ್ದರು.






