ಚಿಕ್ಕಮಗಳೂರು ನಗರದಲ್ಲಿ ವಿಧಾನ ಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ ‘ಅತಂರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,’ಇಂದಿನ ಯುವಜನರು ಕೇವಲ ರಾಜಕೀಯವನ್ನು ವೀಕ್ಷಿಸುವವರಾಗಿರದೆ, ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಜವಾಬ್ದಾರಿಯುತವಾಗಿ ಭಾಗವಹಿಸುವವರಾಗಬೇಕು. ಯುವ ಸಂಸತ್ ಅಂತಹ ಕಾರ್ಯಕ್ರಮಗಳು ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಮಾತನಾಡುವ ಕೌಶಲ್ಯ, ತಾರ್ಕಿಕ ಚಿಂತನೆ, ಸಮಯಪ್ರಜ್ಞೆ, ನಾಯಕತ್ವ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಪರಸ್ಪರರ ಅಭಿಪ್ರಾಯಗಳನ್ನು ಗೌರವಿಸುವ ಗುಣಗಳು ಬೆಳೆಯಲು ಸಹಕಾರಿಯಾಗುತ್ತದೆ. ಭಿನ್ನಾಭಿಪ್ರಾಯಗಳಿದ್ದರೂ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಚರ್ಚಿಸುವ ಮನೋಭಾವವನ್ನು ಯುವ ಸಂಸತ್ ಕಲಿಸುತ್ತದೆ. ವಿದ್ಯಾರ್ಥಿಗಳು ಸ್ವಪ್ರೇರಣೆಯಿಂದ ಧೈರ್ಯವಾಗಿ ಸಮಾಜದ ತೊಡಕುಗಳನ್ನು ಚರ್ಚಿಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ತರುವಲ್ಲಿ ಸಾಧ್ಯವಾಗುತ್ತದೆ ಎಂದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ರಾಜಕೀಯದಲ್ಲಿ ಯುವಜನರ ಪಾತ್ರ ಬಹುಮುಖ್ಯ: ಹೆಚ್.ಡಿ ತಮ್ಮಯ್ಯ
ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷರಾದ ಎ.ಎನ್.ಮಹೇಶ್ ಮಾತನಾಡಿ. ಭಾರತದ ಸಂಸತ್ತು ಪ್ರಪಂಚದಲ್ಲೆ ಬಹಳ ಪ್ರಸಿದ್ದಿ ಪಡೆದ ಸಂಸತ್ತಾಗಿ ಗುರುತಿಸಿಕೊಂಡಿದೆ. ಯುವಜನರು ವಿವಿಧ ಹಂತಗಳ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಭಾಗವಹಿಸಬೇಕು. ಮತದಾನದ ಹಕ್ಕನ್ನು ಜವಾಬ್ದಾರಿಯಿಂದ ಚಲಾಯಿಸುವುದರ ಜೊತೆಗೆ ಸಾರ್ವಜನಿಕ ಸಮಸ್ಯೆಗಳ ಕುರಿತು ಜನಪ್ರತಿನಿಧಿಗಳ ಗಮನ ಸೆಳೆಯಬೇಕು.ಸಾಮಾಜಿಕ ಜಾಲತಾಣಗಳ ಬಳಕೆಯೂ ರಾಜಕೀಯದಲ್ಲಿ ಯುವಜನರಿಗೆ ಹೊಸ ಅವಕಾಶಗಳನ್ನು ಒದಗಿಸಿದೆ. ಆದರೆ ಸುಳ್ಳು ಸುದ್ದಿಗಳಿಗೆ ಮರುಳಾಗದೆ, ಯಾವುದೇ ವಿಷಯವನ್ನು ಪರಿಶೀಲಿಸಿ ಅಭಿಪ್ರಾಯ ವ್ಯಕ್ತಪಡಿಸುವ ಜವಾಬ್ದಾರಿಯೂ ಯುವಜನರ ಮೇಲಿದೆ.ರಾಜಕೀಯದಲ್ಲಿ ಯುವಜನರ ಭಾಗವಹಿಸುವಿಕೆ ಹೆಚ್ಚಾದಾಗ ಹೊಸ ಆಲೋಚನೆಗಳು, ಹೊಸ ನಾಯಕತ್ವ ಮತ್ತು ಅಭಿವೃದ್ಧಿಯ ಕುರಿತ ಹೊಸ ಚರ್ಚೆಗಳಿಗೆ ಅವಕಾಶ ಸಿಗುತ್ತದೆ. ಜಾತಿ, ಧರ್ಮ, ಭಾಷೆ ಹಾಗೂ ಪಕ್ಷಭೇದಗಳನ್ನು ಮೀರಿ ದೇಶದ ಏಕತೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡುವುದು ಯುವಜನರ ಕರ್ತವ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ ತಿಳಿಸಿದರು.




