ಯಾದಗಿರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ವಾರದೊಳಗೆ ಎರಡನೇ ಬಾರಿ ಬಾಂಬ್ ಬೆದರಿಕೆ ಇ-ಮೇಲ್ ಬಂದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ನ್ಯಾಯಾಲಯ ಆವರಣದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಿ ವ್ಯಾಪಕ ತಪಾಸಣೆ ನಡೆಸಲಾಯಿತು. ಆದರೆ ಯಾವುದೇ ಸ್ಫೋಟಕ ಅಥವಾ ಅನುಮಾನಾಸ್ಪದ ವಸ್ತು ಪತ್ತೆಯಾಗದೆ, ಬೆದರಿಕೆ ಹುಸಿಯೆಂದು ಪೊಲೀಸರು ದೃಢಪಡಿಸಿದ್ದಾರೆ.
ಅನಾಮಧೇಯ ವ್ಯಕ್ತಿಯಿಂದ ನ್ಯಾಯಾಲಯದಲ್ಲಿ ಬಾಂಬ್ ಇರಿಸಿರುವುದಾಗಿ ಇ-ಮೇಲ್ ಬಂದ ತಕ್ಷಣ ನ್ಯಾಯಾಲಯದ ಆಡಳಿತ ಸಿಬ್ಬಂದಿ ಎಚ್ಚೆತ್ತುಕೊಂಡು ವಕೀಲರು, ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಿದರು. ಬಳಿಕ ಜಿಲ್ಲಾ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ಸ್ಥಳಕ್ಕೆ ಆಗಮಿಸಿ ನ್ಯಾಯಾಲಯದ ಕಟ್ಟಡದ ಪ್ರತಿಯೊಂದು ಭಾಗವನ್ನು ಪರಿಶೀಲಿಸಿದರು.
ಹಲವು ಗಂಟೆಗಳ ಕಾಲ ನಡೆದ ತಪಾಸಣೆಯಲ್ಲೂ ಯಾವುದೇ ಸ್ಫೋಟಕ ಪತ್ತೆಯಾಗದ ಹಿನ್ನೆಲೆಯಲ್ಲಿ ನ್ಯಾಯಾಲಯದ ಕಾರ್ಯಚಟುವಟಿಕೆಗಳು ಸಹಜ ಸ್ಥಿತಿಗೆ ಮರಳಿದವು.
ಗಮನಾರ್ಹ ಸಂಗತಿಯೆಂದರೆ, ಕಳೆದ ವಾರವೂ ಇದೇ ನ್ಯಾಯಾಲಯಕ್ಕೆ ಇದೇ ಮಾದರಿಯ ಬೆದರಿಕೆ ಇ-ಮೇಲ್ ಬಂದಿತ್ತು. ಸತತವಾಗಿ ಎರಡನೇ ಬಾರಿ ಇಂತಹ ಬೆದರಿಕೆ ಬಂದಿರುವುದು ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆಯ ಕಳವಳಕ್ಕೆ ಕಾರಣವಾಗಿದೆ. ಬೆದರಿಕೆ ಇ-ಮೇಲ್ ಕಳುಹಿಸಿದ ವ್ಯಕ್ತಿಯನ್ನು ಪತ್ತೆಹಚ್ಚಲು ಪೊಲೀಸರು ಸೈಬರ್ ತಾಂತ್ರಿಕ ನೆರವಿನೊಂದಿಗೆ ತನಿಖೆ ಮುಂದುವರಿಸಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಅಂಬೇಡ್ಕರ್ ನಿವಾಸ ಯೋಜನೆ ಅನುದಾನಕ್ಕೆ ಲಂಚ: ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
ಕಳೆದ ಗುರುವಾರ ಬಂದಿದ್ದ ಇ-ಮೇಲ್‌ನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿಯೂ ಬಾಂಬ್ ಇರಿಸಿರುವುದಾಗಿ ಉಲ್ಲೇಖಿಸಲಾಗಿದ್ದ ಹಿನ್ನೆಲೆಯಲ್ಲಿ, ಸೋಮವಾರ ಜಿಲ್ಲಾಡಳಿತ ಭವನದಲ್ಲಿಯೂ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದಿಂದ ಸಮಗ್ರ ತಪಾಸಣೆ ನಡೆಸಲಾಯಿತು. ಅಲ್ಲಿಯೂ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.




