ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಸಕ್ರ್ಯ ನಾಯಕ ತಾಂಡಾ ನಿವಾಸಿ ಹಾಗೂ ಭಾಗ್ಯವಂತಿ ಮಠದ ಪೂಜಾರಿ ಅಣ್ಣಪ್ಪ ರೈಟರ್ ವಿರುದ್ಧ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಹಾಗೂ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಿಂದ ರಕ್ಷಣೆ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುರಪುರ ತಾಲೂಕಿನ ಗ್ರಾಮದೊಂದಕ್ಕೆ ಸೇರಿದ ಬಾಲಕಿ ಹಾಗೂ ಆಕೆಯ ತಂಗಿಯನ್ನು ಆ.18ರಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಅಕ್ಕ ಪಡೆ ಸಿಬ್ಬಂದಿ ಸಕ್ರ್ಯ ನಾಯಕ ತಾಂಡಾ ಸಮೀಪದಲ್ಲಿರುವ ಭಾಗ್ಯವಂತಿ ಮಠದಿಂದ ರಕ್ಷಿಸಿ ಕರೆತಂದಿದ್ದರು.
ಬಳಿಕ ಇಬ್ಬರು ಬಾಲಕಿಯರನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ವಿಚಾರಣೆ ನಡೆಸಲಾಗಿತ್ತು. ಅವರೊಂದಿಗೆ ಆಪ್ತ ಸಮಾಲೋಚನೆಯನ್ನೂ ನಡೆಸಲಾಗಿತ್ತು. ಆ.20ರಂದು ನಡೆದ ಆಪ್ತ ಸಮಾಲೋಚನೆ ಸಂದರ್ಭದಲ್ಲಿ ಬಾಲಕಿಯೊಬ್ಬಳು ಮಠದ ಪೂಜಾರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ಹೇಳಿಕೆಯಂತೆ, ಆಕೆಯ ತಾಯಿ ಬೆಂಗಳೂರಿನಲ್ಲಿ ಕೆಲಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಬಾಲಕಿಯನ್ನು ಹಾಗೂ ಆಕೆಯ ಸಹೋದರಿಯನ್ನು ಸಂಬಂಧಿಕರ ಬಳಿ ಬಿಟ್ಟಿದ್ದರು ಎನ್ನಲಾಗಿದೆ. ನಂತರ ಇಬ್ಬರು ಬಾಲಕಿಯರನ್ನು ಭಾಗ್ಯವಂತಿ ಮಠದಲ್ಲಿ ಇರಿಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಅಣ್ಣಪ್ಪ ರೈಟರ್ ಬಾಲಕಿಯೊಂದಿಗೆ ಲೈಂಗಿಕ ದುರುದ್ದೇಶದಿಂದ ವರ್ತಿಸುತ್ತಿದ್ದರು. ಬಾಲಕಿಯ ಮೈ–ಕೈ ಮುಟ್ಟುವುದು ಹಾಗೂ ಹೆಗಲ ಮೇಲೆ ಕೈ ಹಾಕುವುದು ಮಾಡುತ್ತಿದ್ದರು ಎಂದು ಆಪ್ತ ಸಮಾಲೋಚನೆ ವೇಳೆ ಬಾಲಕಿ ಮಾಹಿತಿ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ಹೇಳಿಕೆ ಹಾಗೂ ಆಪ್ತ ಸಮಾಲೋಚನೆಯ ವೇಳೆ ದೊರೆತ ಮಾಹಿತಿಯ ಆಧಾರದ ಮೇಲೆ ಅಣ್ಣಪ್ಪ ರೈಟರ್ ವಿರುದ್ಧ ಬಿಎನ್‌ಎಸ್ ಕಲಂ 75(2) ಹಾಗೂ ಪೋಕ್ಸೋ ಕಾಯ್ದೆಯ ಕಲಂ 8 ಮತ್ತು 10ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣ ಖಂಡಿಸಿ ದಸಂಸ ಪ್ರತಿಭಟನೆ
ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪದ ಸತ್ಯಾಸತ್ಯತೆ ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.




