ಸುರಪುರ ತಾಲೂಕಿನ ಶಾಖಾಪುರ ಗ್ರಾಮದಲ್ಲಿ ದಲಿತರ ಮೇಲಿನ ಸಾಮಾಜಿಕ ಬಹಿಷ್ಕಾರ, ಗುಂಡಾಗಿರಿ ಹಾಗೂ ಆಡಳಿತಾತ್ಮಕ ವೈಫಲ್ಯ ಖಂಡಿಸಿ ವಿವಿಧ ಸಮುದಾಯಗಳ ಮುಖಂಡರು ಹಾಗೂ ಸಾರ್ವಜನಿಕರು ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ ದಲಿತರಿಗೆ ಬೆಂಬಲ ಸೂಚಿಸಿದರು.
ಕನಸು ಸೇವಾ ಸಂಸ್ಥೆ ಅಧ್ಯಕ್ಷ ಸಂತೋಷ್ ಕುಮಾರ್ ಎಸ್.ಪಿ. ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಿಂಗಾಯತ, ಕಬ್ಬಲಿಗ, ಕುರುಬ, ಜಂಗಮ ಸೇರಿದಂತೆ ವಿವಿಧ ಸಮುದಾಯಗಳವರು ಪಾಲ್ಗೊಂಡಿದ್ದರು. ಗ್ರಾಮದ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ದಲಿತ ಕುಟುಂಬಗಳೊಂದಿಗೆ ಮಾತುಕತೆ ನಡೆಸಿದರು.
ಈ ವೇಳೆ ದೌರ್ಜನ್ಯಕ್ಕೆ ಒಳಗಾದ ದಲಿತ ಮಹಿಳೆಯರು ತಮ್ಮ ನೋವು ಹಾಗೂ ಸಮಸ್ಯೆಗಳನ್ನು ಮುಖಂಡರ ಮುಂದೆ ತೋಡಿಕೊಂಡರು. ನೊಂದ ಕುಟುಂಬಗಳಿಗೆ ಧೈರ್ಯ ತುಂಬಿದ ಮುಖಂಡರು, “ನಿಮ್ಮೊಂದಿಗೆ ನಾವಿದ್ದೇವೆ” ಎಂದು ಬೆಂಬಲ ವ್ಯಕ್ತಪಡಿಸಿದರು.

“ದಲಿತರಿಗೆ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಸೌಲಭ್ಯಗಳನ್ನು ನಿರಾಕರಿಸಿರುವುದು, ಕುಡಿಯುವ ನೀರಿನ ವಾಲ್ವ್ ಧ್ವಂಸ, ದಿನಸಿ ಅಂಗಡಿ ಹಾಗೂ ಹಿಟ್ಟಿನ ಗಿರಣಿ ಬಂದ್ ಮಾಡಿರುವುದು ಮತ್ತು ಮಹಿಳೆಯರಿಗೆ ಜೀವ ಬೆದರಿಕೆ ಹಾಕಿರುವ ಘಟನೆಗಳನ್ನು” ಖಂಡಿಸಿದರು.
“ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ 17 ಆರೋಪಿಗಳನ್ನು ಕೂಡಲೇ ಬಂಧಿಸಿ, ಅವರ ವಿರುದ್ಧ ರೌಡಿಶೀಟ್ ತೆರೆಯಬೇಕು. ಸಾಕ್ಷಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು. ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಿ ಸಮಗ್ರ ತನಿಖೆ ನಡೆಸಬೇಕು” ಎಂದು ಆಗ್ರಹಿಸಲಾಯಿತು.
“ತಾಲ್ಲೂಕು ಆಡಳಿತವು ಮಧ್ಯಪ್ರವೇಶಿಸಿ ದಲಿತ ಕುಟುಂಬಗಳಿಗೆ ಕುಡಿಯುವ ನೀರು, ವಿದ್ಯುತ್, ಹಿಟ್ಟಿನ ಗಿರಣಿ ಹಾಗೂ ದಿನಸಿ ಅಂಗಡಿಗಳ ಸೌಲಭ್ಯಗಳನ್ನು ತಕ್ಷಣ ಮರುಸ್ಥಾಪಿಸಬೇಕು” ಎಂದು ಒತ್ತಾಯಿಸಿದರು.
“ಬೇಡಿಕೆಗಳನ್ನು ಈಡೇರಿಸುವಲ್ಲಿ ಆಡಳಿತ ನಿರ್ಲಕ್ಷ್ಯ ವಹಿಸಿದರೆ ಯಾದಗಿರಿ ಹಾಗೂ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ, ಸುರಪುರ ಬಂದ್ ಹಾಗೂ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು” ಎಂದು ಮುಖಂಡರು ಎಚ್ಚರಿಕೆ ನೀಡಿದರು.
ನಂತರ ವಿವಿಧ ಸಮುದಾಯಗಳ ಮುಖಂಡರು ದಲಿತ ಕುಟುಂಬಗಳ ಮನೆಗಳಿಗೆ ತೆರಳಿ ಸಹಭೋಜನ ನಡೆಸಿ ಸಾಮಾಜಿಕ ಸಾಮರಸ್ಯದ ಸಂದೇಶ ಸಾರಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಯುವಜನರಲ್ಲಿ ನಾಯಕತ್ವ ಗುಣ ಬೆಳೆಸಲು ತರಬೇತಿ ಅಗತ್ಯ: ಶರಣಬಸವ ಪೊಲೀಸ್ ಬೀರದಾರ್
ಈ ಸಂದರ್ಭದಲ್ಲಿ ಅಣವೀರಗೌಡ ಬಿರಾದಾರ, ಚನ್ನವೀರ ದಸ್ತಪುರ್, ರಾಚಯ್ಯ ಸ್ವಾಮಿ ಹಿರೇಮಠ, ಶೈಲೇಶ್ ಸೋನಾಳೆ, ಭೀಮಣ್ಣ ಕೋರಿ, ಸಿದ್ದು ದೊಡ್ಮನಿ, ಸಿದ್ದು ಪಾಟೀಲ್ ಸೇರಿದಂತೆ ಗ್ರಾಮಸ್ಥರು ಹಾಗೂ ವಿವಿಧ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.




