ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಶಹಾಪುರ ತಾಲೂಕಿನ ಸಾವೂರು, ಕಾಟಮನಹಳ್ಳಿ ಗ್ರಾಮಗಳನ್ನು ಸಂಪರ್ಕಿಸುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಎರಡು ಗ್ರಾಮಗಳ ನಡುವಿನ ಸಂಚಾರ ಸ್ಥಗಿತಗೊಂಡಿದೆ.
ಸೇತುವೆ ಮೇಲೆ ಅಪಾರ ಪ್ರಮಾಣದ ನೀರು ಹರಿಯುತ್ತಿರುವುದರಿಂದ ವಾಹನಗಳು ಹಾಗೂ ಪಾದಚಾರಿಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಇದರಿಂದ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದ್ದು, ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ.
ಜೀವಹಾನಿ ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಸಾರ್ವಜನಿಕರು ಸೇತುವೆ ದಾಟಲು ಪ್ರಯತ್ನಿಸಬಾರದು ಹಾಗೂ ಸುರಕ್ಷಿತ ಸ್ಥಳಗಳಲ್ಲಿ ಇರಬೇಕು ಎಂದು ಮನವಿ ಮಾಡಲಾಗಿದೆ.
ಸಂಬಂಧಿತ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಅಪಾಯದ ಪ್ರದೇಶಗಳಲ್ಲಿ ಎಚ್ಚರಿಕೆ ಫಲಕಗಳು, ಬ್ಯಾರಿಕೇಡ್‌ಗಳು ಹಾಗೂ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಳೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ನದಿ, ಹಳ್ಳ ಹಾಗೂ ಸೇತುವೆಗಳ ಸಮೀಪ ಅನಗತ್ಯವಾಗಿ ತೆರಳುವುದನ್ನು ತಪ್ಪಿಸಿ, ಜಿಲ್ಲಾಡಳಿತ ಮತ್ತು ಸ್ಥಳೀಯ ಆಡಳಿತದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ಇದನ್ನು ಓದಿದ್ದೀರಾ? ಯಾದಗಿರಿ | ಖಾಸಗಿ ಶಾಲೆಗಳ ವ್ಯಾಮೋಹ ಬೇಡ; ಸರ್ಕಾರಿ ಶಾಲೆಯಲ್ಲೇ ಮಕ್ಕಳ ಭವಿಷ್ಯ ರೂಪಿಸಿ”: ವೆಂಕಟೇಶ ಎಚ್ ದೊರೆ
ಈ ಕುರಿತು ಕೆಪಿಸಿಸಿ ಪದವೀಧರ ವಿಭಾಗದ ಯಾದಗಿರಿ ಜಿಲ್ಲಾ ಉಪಾಧ್ಯಕ್ಷ ಮರಿಲಿಂಗ ಸಾವೂರ ಅವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.





