ಸನ್ನತ್ತಿ ಬ್ರಿಡ್ಜ್ ಕಂ ಬ್ಯಾರೇಜ್ ಹಿನ್ನೀರಿನಿಂದ ಭೂಮಿ ಕಳೆದುಕೊಂಡ ಚಿತ್ತಾಪುರ ಹಾಗೂ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ರೈತರಿಗೆ ನ್ಯಾಯಾಲಯದ ಆದೇಶದಂತೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರೈತರು ಅಕ್ಟೋಬರ್ 27ರಿಂದ ಬ್ಯಾರೇಜ್ ಬಳಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
‘ಸನ್ನತ್ತಿ, ಕೊಲ್ಲೂರು, ಶಿರವಾಳ, ಹುರಸಗುಂಡಗಿ, ಅಣಬಿ, ಹೊಸೂರು ಹಾಗೂ ರೋಜಾ ಎಸ್. ಸೇರಿದಂತೆ ವಿವಿಧ ಗ್ರಾಮಗಳ ಸುಮಾರು 1,650 ಎಕರೆ ಜಮೀನು ಹಿನ್ನೀರಿನಿಂದ ಮುಳುಗಡೆಯಾಗಿದೆ. ಕನಗನಹಳ್ಳಿ, ಉಳಂಡಿಗೇರಾ ಸೇರಿದಂತೆ ಹಲವು ಗ್ರಾಮಗಳ ಜಮೀನುಗಳನ್ನು ಕಾಲುವೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ, ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಸಮರ್ಪಕ ಪರಿಹಾರ ದೊರೆಯದ ಕಾರಣ ರೈತರು ಕಳೆದ 13 ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ’ ಎಂದು ರೈತ ಮುಖಂಡರು ತಿಳಿಸಿದ್ದಾರೆ.
‘ಹೆಚ್ಚುವರಿ ಪರಿಹಾರ ಕೋರಿ ರೈತರು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯಗಳು ನೀರಾವರಿ ಜಮೀನುಗಳಿಗೆ ಎಕರೆಗೆ ₹80 ಲಕ್ಷದಿಂದ ₹90 ಲಕ್ಷದವರೆಗೆ ಹಾಗೂ ಒಣಭೂಮಿಗೆ ಎಕರೆಗೆ ₹50 ಲಕ್ಷದಿಂದ ₹55 ಲಕ್ಷದವರೆಗೆ ಪರಿಹಾರ ನೀಡುವಂತೆ ಆದೇಶಿಸಿವೆ. ಆದರೆ, ಸರ್ಕಾರ ಈ ಆದೇಶವನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದ ಮೊರೆ ಹೋಗಿರುವುದರಿಂದ ಪರಿಹಾರ ಪಾವತಿ ವಿಳಂಬವಾಗಿದೆ’ ಎಂದು ರೈತರು ಆರೋಪಿಸಿದ್ದಾರೆ.
‘2012–13ರಲ್ಲಿ ಜಂಟಿ ಮಾಪನದ ವೇಳೆ ಕೆಲವು ಸರ್ವೆ ನಂಬರ್ಗಳ ಜಮೀನುಗಳನ್ನು ಒಣಭೂಮಿ ಎಂದು ಪರಿಗಣಿಸಿ ಪರಿಹಾರ ನೀಡಲಾಗಿತ್ತು. ಆದರೆ, 2022–23ರಲ್ಲಿ ಜಿಲ್ಲಾ ನ್ಯಾಯಾಲಯವು ಕೆಲವು ಜಮೀನುಗಳನ್ನು ನೀರಾವರಿ ಭೂಮಿಯೆಂದು ಪರಿಗಣಿಸಿ ಆದೇಶಿಸಿರುವುದರಿಂದ, ಅದರಂತೆ ಪರಿಹಾರ ಮರುನಿಗದಿಪಡಿಸಿ ಪಾವತಿಸಬೇಕು’ ಎಂದು ರೈತರು ಒತ್ತಾಯಿಸಿದ್ದಾರೆ.
ಈ ಹಿಂದೆ ಹಲವು ಬಾರಿ ಭೂಸ್ವಾಧೀನ ಅಧಿಕಾರಿಗಳಿಗೆ ಮನವಿ ಸಲ್ಲಿಸುವುದರ ಜತೆಗೆ ಭೀಮರಾಯನಗುಡಿ ಹಾಗೂ ಬಾಗಲಕೋಟೆಯ ಕೆಬಿಜೆಎನ್ಎಲ್ ಕಚೇರಿಗಳ ಮುಂದೆ ಧರಣಿ ನಡೆಸಿದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು, ಶಾಸಕರು ಸ್ಥಳಕ್ಕೆ ಬರಲು ಆಗ್ರಹ
‘ಚಿತ್ತಾಪುರ, ಯಾದಗಿರಿ ಹಾಗೂ ಶಹಾಪುರ ಕ್ಷೇತ್ರಗಳ ಶಾಸಕರು ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆಗೆ ಸ್ಪಂದಿಸಬೇಕು. ಕೆಬಿಜೆಎನ್ಎಲ್ನ ಬೆಂಗಳೂರು ಕಚೇರಿಯ ಹಿರಿಯ ಅಧಿಕಾರಿಗಳು ಹಾಗೂ ಬಾಗಲಕೋಟೆಯ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸಬೇಕು. ಮುಂಬರುವ ಲೋಕ ಅದಾಲತ್ನಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿ ಪರಿಹಾರ ಒದಗಿಸಬೇಕು’ ಎಂದು ರೈತರು ಆಗ್ರಹಿಸಿದ್ದಾರೆ.
‘ಅಕ್ಟೋಬರ್ 30ರೊಳಗೆ ಬೇಡಿಕೆ ಈಡೇರಿಸದಿದ್ದರೆ ಸನ್ನತ್ತಿ ಬ್ರಿಡ್ಜ್ ಕಂ ಬ್ಯಾರೇಜ್ನ ಗೇಟ್ಗಳನ್ನು ಎತ್ತಿ ನೀರು ಖಾಲಿ ಮಾಡುವ ಕ್ರಮಕ್ಕೆ ಮುಂದಾಗಬೇಕ್ಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಯಾದಗಿರಿ | ಆಂಧ್ರಪ್ರದೇಶದಲ್ಲಿ ಪ್ರಜಾಪ್ರಭುತ್ವದ ಹಕ್ಕುಗಳ ದಮನದ ಆರೋಪ: ಎಐಬಿಎಸ್ಪಿ ತೀವ್ರ ಖಂಡನೆ
ಧರಣಿಯಲ್ಲಿ ಗುರುಬಸವ ರಂಗಂಪೇಠ, ಭೀಮರಾಯ ಚಿಪ್ಪಾರ, ಮಂಜುನಾಥ ಅಂಗಡಿ, ಮಲ್ಲಿಕಾರ್ಜುನ ಚಿಗರಿ ಸೇರಿದಂತೆ ಸನ್ನತ್ತಿ, ಕೊಲ್ಲೂರು, ಅಣಬಿ ಹಾಗೂ ಹೊಸೂರು ಗ್ರಾಮಗಳ ರೈತ ಮುಖಂಡರು ಹೋರಾಟದಲ್ಲಿ ಭಾಗವಹಿಸಿದರು.





