ಜೋಕಟ್ಟೆ ಸಂತ್ರಸ್ತರ 12 ವರ್ಷಗಳ ಹೋರಾಟ, ಮಾಲಿನ್ಯ ಸಂಕಷ್ಟಕ್ಕೆ ಸಿಗಲಿದೆಯೇ ಪರಿಹಾರ?

Date:

ಎಂಆರ್‌ಪಿಎಲ್‌‘ನ ಕೋಕ್ ಸಲ್ಫರ್ ಘಟಕದಿಂದ ಉಂಟಾಗುತ್ತಿರುವ ಮಾಲಿನ್ಯ ಸಮಸ್ಯೆಯ ವಿರುದ್ಧ ಕಳೆದ ಹನ್ನೆರಡು ವರ್ಷಗಳಿಂದ ಹೋರಾಟ ನಡೆಸುತ್ತಿರುವ ಜೋಕಟ್ಟೆ, ಕಳವಾರು, ಕೆಂಜಾರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳ ಹೋರಾಟ ಇದೀಗ ಮತ್ತೊಂದು ಮಹತ್ವದ ಹಂತ ತಲುಪಿದೆ. ಹಸಿರು ವಲಯ ನಿರ್ಮಾಣಕ್ಕಾಗಿ ಗುರುತಿಸಲಾಗಿರುವ 27 ಎಕರೆ ಭೂಮಿಯನ್ನು ಕೆಐಎಡಿಬಿ ಮೂಲಕ ಸ್ವಾಧೀನಪಡಿಸಿಕೊಳ್ಳಲು ಒಪ್ಪಿಗೆ ದೊರೆತಿರುವ ಹಿನ್ನೆಲೆಯಲ್ಲಿ ಸಂತ್ರಸ್ತರು ನಡೆಸುತ್ತಿದ್ದ ಎಂಟು ದಿನಗಳ ಹಗಲು-ರಾತ್ರಿ ಧರಣಿಯನ್ನು ತಾತ್ಕಾಲಿಕವಾಗಿ ಕಳೆದ ವಾರ ಹಿಂಪಡೆದಿದ್ದಾರೆ. ಆದರೆ ಈ ನಿರ್ಧಾರವು ಹೋರಾಟದ ಅಂತ್ಯವಲ್ಲ, ಬದಲಾಗಿ ಆಡಳಿತ ಮತ್ತು ಕಂಪೆನಿ ನೀಡಿರುವ ಭರವಸೆಗಳ ಅನುಷ್ಠಾನವನ್ನು ಗಮನಿಸುವ ಹೊಸ ಹಂತದ ಆರಂಭವಾಗಿದೆ.

- Advertisement -
1011118224

ಜೋಕಟ್ಟೆ ಪ್ರದೇಶದಲ್ಲಿ ಎಂಆರ್‌ಪಿಎಲ್‌ನ ಕೋಕ್ ಸಲ್ಫರ್ ಘಟಕ ಕಾರ್ಯಾರಂಭಿಸಿದ ಬಳಿಕದಿಂದಲೇ ಸ್ಥಳೀಯರು ಮಾಲಿನ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಘಟಕದಿಂದ ಹೊರಬರುವ ಕೋಕ್ ಸಲ್ಫರ್ ಧೂಳು, ಗಾಳಿಯಲ್ಲಿ ಹರಡುವ ದುರ್ವಾಸನೆ ಹಾಗೂ ಪರಿಸರ ಮಾಲಿನ್ಯದಿಂದ ಜನಜೀವನ ತೀವ್ರವಾಗಿ ಹದಗೆಟ್ಟಿದೆ ಎನ್ನುವುದು ಗ್ರಾಮಸ್ಥರ ಆರೋಪ. ಮನೆಗಳ ಮೇಲ್ಚಾವಣಿ, ಮರಗಳು, ಕೃಷಿ ಜಮೀನುಗಳು ಹಾಗೂ ಕುಡಿಯುವ ನೀರಿನ ಮೂಲಗಳ ಮೇಲೆ ನಿರಂತರವಾಗಿ ಧೂಳು ಆವರಿಸುತ್ತಿದ್ದು, ಉಸಿರಾಟದ ತೊಂದರೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ ಎಂದು ಅವರು ಹಲವು ವರ್ಷಗಳಿಂದ ಹೇಳುತ್ತಾ ಬಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19...

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲೆಮಟ್ಟದಲ್ಲಿ ಮತಗಟ್ಟೆಗೆ ಧಾವಿಸಿ ಭರ್ಜರಿ ಓಟಿಂಗ್‌ ಮಾಡಿದ್ದಾರೆ. 19 ಸೀಟುಗಳನ್ನು ಗೆಲ್ಲುವ ಮೂಲಕ ನೆತನ್ಯಾಹು ಭವಿಷ್ಯವನ್ನು...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ,...

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಜೀವನಮರಡಗಿ ಗ್ರಾಮದ ಜನರ ಬದುಕಿನಲ್ಲಿ ಮಾತ್ರ ಇಂದಿಗೂ ಹಲವು ಸಮಸ್ಯೆಗಳು ಮುಂದುವರಿದಿವೆ. ಗ್ರಾಮಕ್ಕೆ...
1011118225

ಈ ಸಮಸ್ಯೆಯ ತೀವ್ರತೆಯನ್ನು ಮನಗಂಡು 2016ರಲ್ಲಿ ರಾಜ್ಯ ಸರ್ಕಾರ ತಜ್ಞರ ಸಮಿತಿಯನ್ನು ರಚಿಸಿತ್ತು. ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಕೋಕ್ ಸಲ್ಫರ್ ಘಟಕದ ಸುತ್ತಮುತ್ತಲಿನ ಜನವಸತಿ ಪ್ರದೇಶದಲ್ಲಿ ಹಸಿರು ವಲಯ ನಿರ್ಮಿಸಿ, ಮಾಲಿನ್ಯದಿಂದ ನೇರವಾಗಿ ಬಾಧಿತವಾಗಿರುವ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಆದೇಶ ಹೊರಬಿದ್ದ ನಂತರವೂ ಭೂಸ್ವಾಧೀನ ಪ್ರಕ್ರಿಯೆ ವಿವಿಧ ಹಂತಗಳಲ್ಲಿ ವಿಳಂಬವಾಗುತ್ತಾ ಬಂದ ಕಾರಣ ಸಂತ್ರಸ್ತರ ಅಸಮಾಧಾನ ಮತ್ತಷ್ಟು ಹೆಚ್ಚಾಗಿತ್ತು.

1011118223

ಕಳೆದ ಕೆಲವು ತಿಂಗಳುಗಳಿಂದ ಜಿಲ್ಲಾಡಳಿತ, ಎಂಆರ್‌ಪಿಎಲ್ ಮತ್ತು ಸಂತ್ರಸ್ತರ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದವು. ಈ ವೇಳೆ ಸಂತ್ರಸ್ತರಿಗೆ ಒಂದೇ ಬಾರಿಗೆ ಪೂರ್ಣ ಪರಿಹಾರ ನೀಡುವ ಭರವಸೆ ನೀಡಲಾಗಿತ್ತು. ಈ ಭರವಸೆಯನ್ನು ನಂಬಿ ಅನೇಕ ಕುಟುಂಬಗಳು ಹೊಸ ನಿವೇಶನಗಳಿಗಾಗಿ ಮುಂಗಡ ಹಣ ಪಾವತಿಸಿದ್ದವು. ಕೆಲವರು ಹೊಸ ಮನೆಗಳ ಕನಸು ಕಟ್ಟಿಕೊಂಡಿದ್ದರೆ, ಇನ್ನೂ ಕೆಲವರು ತಮ್ಮ ಮಕ್ಕಳನ್ನು ಬೇರೆ ಪ್ರದೇಶಗಳ ಶಾಲೆಗಳಿಗೆ ಸೇರಿಸುವ ಯೋಜನೆ ರೂಪಿಸಿದ್ದರು. ಆದರೆ ನಂತರ ಭೂಸ್ವಾಧೀನ ಪ್ರಕ್ರಿಯೆಯನ್ನು ಕೆಐಎಡಿಬಿ ಮೂಲಕ ನಡೆಸುವ ಪ್ರಸ್ತಾಪ ಹೊರಬಿದ್ದ ಹಿನ್ನೆಲೆಯಲ್ಲಿ ಪರಿಹಾರ ವಿತರಣೆ ಮತ್ತಷ್ಟು ವಿಳಂಬವಾಗಲಿದೆ ಎಂಬ ಆತಂಕ ಸಂತ್ರಸ್ತರಲ್ಲಿ ಮೂಡಿತ್ತು.

1011118221

ಈ ಹಿನ್ನೆಲೆಯಲ್ಲಿ ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಎಂಆರ್‌ಪಿಎಲ್ ಕೋಕ್ ಸಲ್ಫರ್ ಘಟಕದ ಮುಂಭಾಗ ಆಹೋರಾತ್ರಿ ಧರಣಿ ಆರಂಭಿಸಲಾಗಿತ್ತು. ಧರಣಿಯ ವೇಳೆ ಹೋರಾಟಗಾರರು ಮತ್ತು ಸ್ಥಳೀಯರು, ತಮ್ಮ ಜೀವನದೊಂದಿಗೆ ಆಡಳಿತ ಮತ್ತು ಕಂಪೆನಿ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದ್ದರು. ಹಲವು ವರ್ಷಗಳಿಂದ ನೀಡುತ್ತಿರುವ ಭರವಸೆಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಮಾಲಿನ್ಯದ ಸಮಸ್ಯೆಯಿಂದ ಜನರು ಬದುಕು ಸಾಗಿಸಲು ಕಷ್ಟಪಡುತ್ತಿದ್ದರೂ, ಪರಿಹಾರ ಮತ್ತು ಪುನರ್ವಸತಿ ಪ್ರಕ್ರಿಯೆಗಳು ನಿರಂತರವಾಗಿ ಮುಂದೂಡಲ್ಪಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

1011118222

ಹೋರಾಟದ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಧರಣಿ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ಮನವಿ ಸ್ವೀಕರಿಸಿದ್ದರು. ಬಳಿಕ ಮಾಜಿ ಸಚಿವ ಅಭಯಚಂದ್ರ ಜೈನ್ ಸೇರಿದಂತೆ ಹಲವು ನಾಯಕರು ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. 2016ರಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರ ಇನ್ನೂ ಸಂಪೂರ್ಣ ಜಾರಿಯಾಗದಿರುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದರು.

1011118226

ಕೊನೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ಬ್ರಿಜೇಶ್ ಚೌಟ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಿತು. ಸಭೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಭೂಸ್ವಾಧೀನಕ್ಕೆ ಲಭ್ಯವಿರುವ ವಿವಿಧ ಆಯ್ಕೆಗಳ ಬಗ್ಗೆ ವಿವರಿಸಿದ್ದರು. ಕಂಪೆನಿಯಿಂದ ನೇರ ಖರೀದಿ, ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯ ಮೂಲಕ ಸ್ವಾಧೀನ ಅಥವಾ ಕೆಐಎಡಿಬಿ ಮೂಲಕ ಭೂಸ್ವಾಧೀನ ಎಂಬ ಮೂರು ಮಾರ್ಗಗಳ ಬಗ್ಗೆ ಚರ್ಚೆ ನಡೆದು, ಅಂತಿಮವಾಗಿ ಕೆಐಎಡಿಬಿ ಮೂಲಕ ಭೂಸ್ವಾಧೀನ ನಡೆಸುವ ಪ್ರಕ್ರಿಯೆಗೆ ಒಪ್ಪಿಗೆ ನೀಡಲಾಯಿತು.

ಸಭೆಯಲ್ಲಿ ಸಂತ್ರಸ್ತರು ತಮ್ಮ ಪ್ರಮುಖ ಬೇಡಿಕೆಗಳನ್ನು ಮತ್ತೊಮ್ಮೆ ಮುಂದಿಟ್ಟರು. ಎಂಆರ್‌ಪಿಎಲ್‌ನ ನಾಲ್ಕನೇ ಹಂತದ ಭೂಸ್ವಾಧೀನ ವೇಳೆ ಪೆರ್ಮುದೆ ಗ್ರಾಮಸ್ಥರಿಗೆ ನೀಡಲಾಗಿರುವ ಪುನರ್ವಸತಿ ಪ್ಯಾಕೇಜ್‌ನ ಎಲ್ಲಾ ಸೌಲಭ್ಯಗಳನ್ನು ಜೋಕಟ್ಟೆ ಸಂತ್ರಸ್ತರಿಗೂ ನೀಡಬೇಕು ಎಂದು ಆಗ್ರಹಿಸಿದ್ದರು. ಮನೆ ಬಾಡಿಗೆ ಭತ್ಯೆ, ಸ್ಥಳಾಂತರ ವೆಚ್ಚ, ಪುನರ್ವಸತಿ ಸೌಲಭ್ಯಗಳು ಹಾಗೂ ಅಪಾಯದ ಸ್ಥಿತಿಯಲ್ಲಿರುವ ಮನೆಗಳಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದ್ದರು. ಜೊತೆಗೆ ಜಿಲ್ಲಾಡಳಿತವೇ ಮಧ್ಯಸ್ಥಿಕೆ ವಹಿಸಿ ಏಕಗಂಟಿನಲ್ಲಿ ಪರಿಹಾರ ವಿತರಣೆ ಮಾಡಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟದ್ದರು.

ಇದನ್ನೂ ಓದಿ> ದಕ್ಷಿಣ ಕನ್ನಡ | ಫಲ್ಗುಣಿ ಕಲುಷಿತ- ಹಾಲಾಹಲವನ್ನೂ ಅರಗಿಸಿಕೊಳ್ಳುವ ʼಇರ್ಪೆʼಯ ಮಾರಣ ಹೋಮ

ಸಭೆಯ ಬಳಿಕ ಸಂಸದ ಬ್ರಿಜೇಶ್ ಚೌಟ ಹಾಗೂ ಶಾಸಕ ಉಮನಾಥ್ ಕೋಟ್ಯಾನ್ ಸಂತ್ರಸ್ತರಿಗೆ ಭರವಸೆ ನೀಡಿದ್ದು, ಪ್ರಕ್ರಿಯೆ ವಿಳಂಬವಾಗದಂತೆ ಹಿರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಜಿಲ್ಲಾಧಿಕಾರಿಯವರ ಪ್ರಕಾರ ಅಗತ್ಯ ದಾಖಲೆಗಳು ಸಮಯಕ್ಕೆ ಸಲ್ಲಿಕೆಯಾದರೆ ಕೆಐಎಡಿಬಿಯ ಪ್ರಕ್ರಿಯೆಗಳು ಎಂಟು ತಿಂಗಳೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು.

1011118221 1

ಈ ಭರವಸೆಗಳ ಹಿನ್ನೆಲೆಯಲ್ಲಿ ಧರಣಿ ಮಂಟಪದಲ್ಲಿ ನಡೆದ ಸಾಮೂಹಿಕ ಸಭೆಯಲ್ಲಿ ಹೋರಾಟಗಾರರು ಎಂಟು ದಿನಗಳಿಂದ ನಡೆಯುತ್ತಿದ್ದ ಧರಣಿಯನ್ನು ಹಿಂಪಡೆಯಲು ತೀರ್ಮಾನಿಸಿದ್ದರು. ಆದರೆ ಇದು ಹೋರಾಟದ ಅಂತ್ಯವಲ್ಲ ಎಂದು ಸ್ಪಷ್ಟಪಡಿಸಿರುವ ಹೋರಾಟ ಸಮಿತಿ, ಭೂಸ್ವಾಧೀನ ಮತ್ತು ಪುನರ್ವಸತಿ ಪ್ರಕ್ರಿಯೆಗಳು ನಿಗದಿತ ಅವಧಿಯಲ್ಲಿ ನಡೆಯದಿದ್ದರೆ ಮತ್ತಷ್ಟು ತೀವ್ರ ಹೋರಾಟ ಆರಂಭಿಸುವ ಎಚ್ಚರಿಕೆಯನ್ನೂ ನೀಡಿದ್ದರು.

ಈ ಕುರಿತು ಈ ದಿನ.ಕಾಮ್ ಜೊತೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ, 2014ರಲ್ಲಿ ಎಂಆರ್‌ಪಿಎಲ್‌ನ ಮೂರನೇ ಹಂತದ ವಿಸ್ತರಣೆ ಯೋಜನೆ ಜೋಕಟ್ಟೆ ಗ್ರಾಮದ ಜನವಸತಿ ಪ್ರದೇಶದ ಸಮೀಪ ಆರಂಭವಾದ ಬಳಿಕ ಅಲ್ಲಿನ ಜನರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಹೇಳಿದರು.

“ಕೋಕ್ ಸಲ್ಫರ್ ಧೂಳು ಮನೆಗಳ ಮೇಲೆ ಬೀಳಲು ಆರಂಭವಾಗಿದ್ದು, ಮಾಲಿನ್ಯ ಸೇರಿದಂತೆ ಹಲವು ಸಮಸ್ಯೆಗಳು ಜನರನ್ನು ಕಾಡಲಾರಂಭಿಸಿದವು. ಇದರ ವಿರುದ್ಧ ಸ್ಥಳೀಯರು ನಿರಂತರ ಹೋರಾಟ ಆರಂಭಿಸಿದ್ದು, ಸುಮಾರು ಎರಡು ವರ್ಷಗಳ ಹೋರಾಟದ ಬಳಿಕ ಸರ್ಕಾರ ಆರು ಅಂಶಗಳ ಪರಿಹಾರಾತ್ಮಕ ಆದೇಶ ಹೊರಡಿಸಿತ್ತು. ಆ ಆದೇಶದ ಪ್ರಕಾರ ಎಂಆರ್‌ಪಿಎಲ್ ಕೈಗೊಳ್ಳಬೇಕಿದ್ದ ಐದು ಕ್ರಮಗಳನ್ನು ಕಂಪನಿ ಒಳಗೆ ಅವರು ಜಾರಿಗೊಳಿಸಿದೆ ಎನ್ನುವ ಮಾಹಿತಿ ಅವರು ನೀಡಿದ್ದಾರೆ. ಆದರೆ ಅತ್ಯಂತ ಪ್ರಮುಖವಾಗಿದ್ದ ಆರನೇ ಅಂಶ ಇನ್ನೂ ಪೂರ್ಣವಾಗಿ ಜಾರಿಯಾಗಿಲ್ಲ. ಗ್ರಾಮ ಹಾಗೂ ಜನವಸತಿ ಪ್ರದೇಶ ಮತ್ತು ಕಂಪನಿಯ ಘಟಕದ ಮಧ್ಯೆ 27 ಎಕರೆ ಭೂಮಿಯಲ್ಲಿ ಹಸಿರು ವಲಯ (ಗ್ರೀನ್ ಬೆಲ್ಟ್) ನಿರ್ಮಿಸಿ ಅರಣ್ಯೀಕರಣ ಕೈಗೊಳ್ಳಬೇಕು. ಈ ಹಸಿರು ವಲಯವು ಜನವಸತಿ ಮತ್ತು ಕಂಪನಿಯ ನಡುವಿನ ಪ್ರಾಕೃತಿಕ ತಡೆಗೋಡೆಯಾಗಿ ಕಾರ್ಯನಿರ್ವಹಿಸಬೇಕು ಎಂಬುದು ಸರ್ಕಾರದ ಮುಖ್ಯ ನಿರ್ಧಾರವಾಗಿತ್ತು. ಇದಕ್ಕಾಗಿ ಹೆಚ್ಚು ಬಾಧಿತ ಪ್ರದೇಶದ ನಿವಾಸಿಗಳನ್ನು ಪುನರ್ವಸತಿ ಕಲ್ಪಿಸಿ, ಆ ಪ್ರದೇಶವನ್ನು ಸಂಪೂರ್ಣ ಹಸಿರು ವಲಯವಾಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿತ್ತು” ಎಂದು ತಿಳಿಸಿದರು.

“ಹಸಿರು ವಲಯಕ್ಕಾಗಿ ಅಗತ್ಯ ಭೂಮಿಯನ್ನು ಗುರುತಿಸುವುದು, ಪರಿಹಾರ ಪ್ಯಾಕೇಜ್ ಅಂತಿಮಗೊಳಿಸುವುದು ಹಾಗೂ ಪುನರ್ವಸತಿ ಯೋಜನೆ ರೂಪಿಸುವ ಕಾರ್ಯಗಳು ಪೂರ್ಣಗೊಂಡಿದ್ದರೂ, ಅನಗತ್ಯ ವಿಳಂಬಗಳಿಂದ ಭೂಸ್ವಾಧೀನ ಮತ್ತು ಪುನರ್ವಸತಿ ಪ್ರಕ್ರಿಯೆಗಳು ಮುಂದೂಡಲ್ಪಟ್ಟವು. ಇದರಿಂದ ಅನಿವಾರ್ಯವಾಗಿ ನಾವು ಮತ್ತೆ ಹೋರಾಟದ ಹಾದಿ ಹಿಡಿಯಬೇಕಾಯಿತು. ಹಗಲು-ರಾತ್ರಿ ನಿರಂತರ ಪ್ರತಿಭಟನೆ ನಡೆಸಿದ ಪರಿಣಾಮ, ಕೆಐಎಡಿಬಿ ಮೂಲಕ ಆರು ತಿಂಗಳೊಳಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಅಗತ್ಯ ಕ್ರಮಗಳನ್ನು ಹಂತ ಹಂತವಾಗಿ ಜಾರಿಗೊಳಿಸುವ ಭರವಸೆಯನ್ನು ಸರ್ಕಾರ ನೀಡಿದೆ. ಈ ಭರವಸೆಯ ಹಿನ್ನೆಲೆಯಲ್ಲಿ ನಾವು ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಹಿಂಪಡೆದಿದ್ದೇವೆ” ಎಂದು ಹೇಳಿದರು.

“ಇದು ಜನರ ಹೋರಾಟಕ್ಕೆ ದೊರೆತ ಸಾಂಕೇತಿಕ ಗೆಲುವಾಗಿದೆ. ಮುಂದಿನ ಆರು ತಿಂಗಳಲ್ಲಿ ಎಲ್ಲ ಪ್ರಕ್ರಿಯೆಗಳು ಹಂತ ಹಂತವಾಗಿ ಪೂರ್ಣಗೊಳ್ಳಲಿವೆ ಎಂಬ ನಿರೀಕ್ಷೆ ಇದೆ. ಒಂದು ವೇಳೆ ಸರ್ಕಾರ ನೀಡಿರುವ ಭರವಸೆ ಈಡೇರದಿದ್ದರೆ ಅಥವಾ ಮತ್ತಷ್ಟು ವಿಳಂಬವಾದರೆ, ಮತ್ತೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

ಸುಮಾರು ಹನ್ನೆರಡು ವರ್ಷಗಳಿಂದ ಮಾಲಿನ್ಯದ ವಿರುದ್ಧ ಹೋರಾಡುತ್ತಿರುವ ಜೋಕಟ್ಟೆ, ಕಳವಾರು ಮತ್ತು ಕೆಂಜಾರು ಭಾಗದ ಜನರಿಗೆ ಈಗ ಮತ್ತೊಮ್ಮೆ ನಿರೀಕ್ಷೆ ಮೂಡಿದೆ. ಆದರೆ ಈ ಬಾರಿ ಭರವಸೆಗಳು ಕೇವಲ ಸಭೆಗಳಲ್ಲೇ ಉಳಿಯದೆ, ಭೂಸ್ವಾಧೀನ, ನ್ಯಾಯಯುತ ಪರಿಹಾರ ಮತ್ತು ಸಮಗ್ರ ಪುನರ್ವಸತಿ ರೂಪದಲ್ಲಿ ಕಾರ್ಯರೂಪಕ್ಕೆ ಬರಬೇಕು ಎಂಬುದೇ ಸಂತ್ರಸ್ತರ ಆಗ್ರಹವಾಗಿದೆ. ಅವರ ಪಾಲಿಗೆ ಇದು ಕೇವಲ ಭೂಮಿಯ ಪ್ರಶ್ನೆಯಲ್ಲ; ಆರೋಗ್ಯಕರ ಪರಿಸರದಲ್ಲಿ ಗೌರವಯುತ ಬದುಕು ಕಟ್ಟಿಕೊಳ್ಳುವ ಹಕ್ಕಿನ ಹೋರಾಟವಾಗಿದೆ.

WhatsApp Image 2023 08 22 at 3.23.15 PM
ಶಾರೂಕ್ ತೀರ್ಥಹಳ್ಳಿ
+ posts

ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಶಾರೂಕ್ ತೀರ್ಥಹಳ್ಳಿ
ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಹೆಣ್ಣು ಬೋಗದ ವಸ್ತುವಲ್ಲ, ಸ್ತ್ರೀ ಶೋಷಣೆ ಕೊನೆಗೊಳ್ಳಲಿ: ಸಂಕಮ್ಮ ಸಂಕಣ್ಣನವರ

"ಮಹಿಳೆಯರ ಮೇಲಿನ ಶೋಷಣೆ, ದೌರ್ಜನ್ಯ, ತಾರತಮ್ಯ ಹಾಗೂ ಲಿಂಗಾಧಾರಿತ ಅಸಮಾನತೆಗಳನ್ನು ಕೊನೆಗೊಳಿಸಿ,...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ, ಊರಲ್ಲಿ ಪಡಿತರವೂ ಇಲ್ಲ!

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು...

ಮಹಿಳಾ ಶಕ್ತಿಯ ಅನಾವರಣ: ಮಂಡ್ಯ ಜಿಲ್ಲಾ ಪಂಚಾಯತ್ ಸ್ತಬ್ಧಚಿತ್ರಕ್ಕೆ ಈಶ್ವರ ಖಂಡ್ರೆ ಮೆಚ್ಚುಗೆ

ಮೈಸೂರು ದಸರಾ ಜಂಬೂಸವಾರಿಯಲ್ಲಿ ಜನಮೆಚ್ಚುಗೆ ಗಳಿಸುವುದರ ಜೊತೆಗೆ ಪ್ರಥಮ ಬಹುಮಾನ ಪಡೆದ...

ಕಬ್ಬಿನ ದರ ನಿಗದಿಗೆ ಆಗ್ರಹಿಸಿ ಮೈಶುಗರ್ ಸಕ್ಕರೆ ಗೋದಾಮಿಗೆ ರೈತರ ಮುತ್ತಿಗೆ

ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನೀಡಬೇಕು ಹಾಗೂ ಪ್ರತಿ ಟನ್ ಕಬ್ಬಿಗೆ...