ಬುದ್ಧನ ಸಮಾನತೆ, ಶಾಂತಿ, ಮಾನವೀಯತೆ ಹಾಗೂ ಪ್ರಜ್ಞೆಯ ಸಂದೇಶವನ್ನು ಜನಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದೊಂದಿಗೆ ಶಹಾಪುರ ತಾಲೂಕಿನ ಸಾರಿಪುತ್ರ ಬುದ್ಧ ವಿಹಾರ ಧಮ್ಮಗಿರಿಯಲ್ಲಿ ಮೂರು ತಿಂಗಳ ವರ್ಷವಾಸ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ಭಿಕ್ಕುಗಳಿಗೆ ಚೀವರದಾನ ಕಾರ್ಯಕ್ರಮ ಬುಧವಾರ ನಡೆಸಲಾಯಿತು.
ವರ್ಷವಾಸದ ಅಂಗವಾಗಿ ಕಳೆದ ಮೂರು ತಿಂಗಳಿನಿಂದ ಪ್ರತಿ ಭಾನುವಾರ ನಿರಂತರವಾಗಿ 13 ವಾರಗಳ ಕಾಲ ಧಮ್ಮ ಪ್ರವಚನಗಳನ್ನು ಆಯೋಜಿಸಲಾಗಿತ್ತು. ಪೂಜ್ಯ ಭಂತೆ ಧಮ್ಮತಿಸ್ಸ ಅವರ ಸಾನ್ನಿಧ್ಯದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಬುದ್ಧ ವಂದನೆ, ಧಮ್ಮ ವಂದನೆ, ಸಂಘ ವಂದನೆ ಹಾಗೂ ತ್ರಿಸರಣ ಪಂಚಶೀಲ ಬೋಧಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ನೀಲಕಂಠ ಬಡಿಗೇರ, ‘ಬುದ್ಧನ ಧಮ್ಮದ ಬೆಳಕಿನಲ್ಲಿ ವೈಚಾರಿಕ ಪ್ರಜ್ಞೆ ಮತ್ತು ಧಾರ್ಮಿಕ ಅರಿವು ಬೆಳೆಸುವ ಉದ್ದೇಶದಿಂದ ನಿರಂತರವಾಗಿ ಪ್ರವಚನಗಳನ್ನು ಆಯೋಜಿಸಲಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧಮ್ಮದ ತತ್ವಗಳನ್ನು ಅರಿತುಕೊಂಡು, ಅನೇಕ ಸಂಕಷ್ಟಗಳ ನಡುವೆಯೂ ದೇಶಕ್ಕೆ ಸಂವಿಧಾನವನ್ನು ನೀಡಿದ್ದಾರೆ. ಧಮ್ಮದ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬ ಉಪಾಸಕರ ಮೇಲಿದೆ’ ಎಂದರು.
‘ಬುದ್ಧನ ಸಂದೇಶಗಳನ್ನು ಗ್ರಾಮೀಣ ಪ್ರದೇಶಗಳಿಗೂ ತಲುಪಿಸುವ ಮೂಲಕ ಸಮಾನತೆ ಮತ್ತು ಐಕ್ಯತೆಯನ್ನು ಬಲಪಡಿಸಬೇಕು. ಸಂಕಲ್ಪ ಹಾಗೂ ನಿಷ್ಠೆಯನ್ನು ಜೀವನದಲ್ಲಿ ಅಳವಡಿಸಿಕೊಂಡು, ಬುದ್ಧನ ‘ನಿನಗೆ ನೀನೇ ಬೆಳಕಾಗಬೇಕು’ ಎಂಬ ಸಂದೇಶದಂತೆ ಮುನ್ನಡೆಯಬೇಕು’ ಎಂದು ಕರೆ ನೀಡಿದರು.

ವಿಶೇಷ ಉಪನ್ಯಾಸ ನೀಡಿದ ಬಿ.ಆರ್. ಅಂಚೆಸುಗೂರು, ‘ಬುದ್ಧನ ವಿಚಾರಗಳು ಮಾನವೀಯತೆ, ಸಮಾನತೆ ಮತ್ತು ಶಾಂತಿಯ ಬದುಕಿಗೆ ದಾರಿದೀಪವಾಗಿವೆ. ಬುದ್ಧನು ಹಿಂಸೆಯನ್ನು ತಿರಸ್ಕರಿಸಿ, ಮನುಷ್ಯರ ನಡುವೆ ಸಮಾನತೆಯನ್ನು ಪ್ರತಿಪಾದಿಸಿದ ಮಹಾನ್ ತತ್ವಜ್ಞಾನಿ. ಅಂಗುಲಿಮಾಲನ ಮನಪರಿವರ್ತನೆಯ ಮೂಲಕ ಹಿಂಸೆಯ ಮಾರ್ಗದಿಂದ ಶಾಂತಿಯ ಮಾರ್ಗಕ್ಕೆ ಬದಲಾವಣೆ ಸಾಧ್ಯವೆಂಬುದನ್ನು ತೋರಿಸಿಕೊಟ್ಟನು’ ಎಂದು ಹೇಳಿದರು.
‘ಮನುಷ್ಯತ್ವಕ್ಕಿಂತ ದೊಡ್ಡ ಧರ್ಮ ಮತ್ತೊಂದಿಲ್ಲ. ಜಾತಿ ಮತ್ತು ಅಸಮಾನತೆಯ ವಿರುದ್ಧ ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರು ಪ್ರತಿಪಾದಿಸಿದ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು ಬುದ್ಧನ ತತ್ವಗಳನ್ನು ಅರ್ಥಮಾಡಿಕೊಂಡು ಆಚರಣೆಗೆ ತರಬೇಕು’ ಎಂದು ತಿಳಿಸಿದರು.
‘ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಪೂಜ್ಯ ಭಂತೆ ಧಮ್ಮತಿಸ್ಸ ಮಾತನಾಡಿ, ಧಮ್ಮದ ಅರಿವಿಗೆ ಶ್ರದ್ಧೆ ಮತ್ತು ಪ್ರಜ್ಞೆ ಅತ್ಯಗತ್ಯ. ಧಮ್ಮವನ್ನು ಕೇವಲ ಕೇಳುವುದಕ್ಕೆ ಸೀಮಿತಗೊಳಿಸದೆ, ಪ್ರಶ್ನಿಸುವ, ಅರ್ಥಮಾಡಿಕೊಳ್ಳುವ ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಅಷ್ಟಾಂಗ ಮಾರ್ಗದಲ್ಲಿ ನಡೆಯುವ ಮೂಲಕ ಪ್ರಜ್ಞೆಯನ್ನು ವೃದ್ಧಿಸಿಕೊಂಡು ಧಮ್ಮದ ಬೆಳವಣಿಗೆಗೆ ಕೊಡುಗೆ ನೀಡಬೇಕು’ ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಿಕಾರ್ಜುನ ಪೂಜಾರಿ ವಹಿಸಿದ್ದರು. ವಿಶ್ವನಾಥ ನಾಟ್ಟೇಕರ್ ನಿರೂಪಿಸಿದರು. ಭೀಮರಾಯ ಹೊಸಮನಿ ಸ್ವಾಗತಿಸಿದರು. ನಾಗಣ್ಣ ಬಡಿಗೇರ ವಂದಿಸಿದರು.
ವೇದಿಕೆಯಲ್ಲಿ ಗಿರೇಪ್ಪ, ಶ್ರೀನಿವಾಸ ನಾಯಕ್, ಚನ್ನಪ್ಪ ಆನೆಗುಂದಿ, ಶ್ರೀಶೈಲ ಹೊಸಮನಿ, ಶಿವಕುಮಾರ್ ತಳವರ, ಭಾಗಣ್ಣ ಮುಂಡಾಸ್, ರಾಗಣ್ಣ ಸೈದಾಪುರ, ಮಲ್ಲಣ್ಣ ಬೀರನೂರು, ಶಂಕರ್ ಸಿಂಗೆ, ರಾಮಣ್ಣ ಸದ್ಯಾಪುರ, ಭೀಮರಾಯ ತಳವಾರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದನ್ನು ಓದಿದ್ದೀರಾ? ಕಲಬುರಗಿ | ಆಹಾರ ಕಲಬೆರಕೆಗೆ ಕಡಿವಾಣ, ಕ್ಯಾನ್ಸರ್ ಔಷಧ ದರ ಇಳಿಕೆಗೆ ಯತ್ನ: ಸಚಿವ ಖಾದರ್‌ಗೆ ಹೋಟೆಲ್ ಸಂಘದ ಶಹಬ್ಬಾಸ್!
ಕಾರ್ಯಕ್ರಮದಲ್ಲಿ ದಮ್ಮ ಉಪಾಸಕರು ಹಾಗೂ ಉಪಾಸಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವರ್ಷವಾಸ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡರು.





