ಜಿಲ್ಲೆಯ ಶಹಾಪುರದಲ್ಲಿ ಮೇ 19ರಂದು ನಡೆಯಲಿರುವ “ಬಸವಾದಿ ಶರಣರ ಹಿಂದೂ ಸಮಾವೇಶ” ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ, ಸೌಹಾರ್ದ ಕರ್ನಾಟಕ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿ ಮುಖಂಡರು ಮಾತನಾಡಿ, ‘ಬಸವಾದಿ ಶರಣರ ತತ್ವಗಳು ಸಮಾನತೆ, ಸಹಿಷ್ಣುತೆ, ಸಾಮಾಜಿಕ ನ್ಯಾಯ ಮತ್ತು ಎಲ್ಲ ವರ್ಗದ ಜನರನ್ನು ಒಳಗೊಳ್ಳುವ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ ಎಂದು ಉಲ್ಲೇಖಿಸಲಾಗಿದೆ. ಈ ತತ್ವಗಳು ಯಾವುದೇ ಒಂದು ಧಾರ್ಮಿಕ ಅಥವಾ ಸಂಕುಚಿತ ಚೌಕಟ್ಟಿಗೆ ಸೀಮಿತವಾಗಿರದೆ, ಸಮಗ್ರ ಸಮಾಜದ ಹಿತಕ್ಕಾಗಿ ರೂಪುಗೊಂಡಿವೆ’ ಎಂಬುದನ್ನು ಪ್ರತಿಭಟನಾಕಾರರು ಸ್ಪಷ್ಟಪಡಿಸಿದರು.
“ಬಸವಾದಿ ಶರಣರ ಹೆಸರಿನಲ್ಲಿ ‘ಹಿಂದೂ ಸಮಾವೇಶ’ ಆಯೋಜನೆ ಮಾಡುತ್ತಿರುವುದು ಅವರ ಮೂಲ ತತ್ವಗಳಿಗೆ ವಿರುದ್ಧವಾಗಿದ್ದು, ಇದರಿಂದ ಶರಣರ ಚಿಂತನೆಗಳನ್ನು ತಪ್ಪಾಗಿ ಪ್ರತಿಪಾದಿಸುವ ಸಾಧ್ಯತೆ ಇದೆ” ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಗೊಂದಲ ಉಂಟುಮಾಡುವ ಜೊತೆಗೆ, ವಿಭಿನ್ನ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಹಾಗೂ ಉದ್ವಿಗ್ನತೆ ಹೆಚ್ಚಿಸುವ ಆತಂಕವಿದೆ ಎಂದು ಅಭಿಪ್ರಾಯಪಟ್ಟರು.
ಇನ್ನೊಂದೆಡೆ, ‘ಬಸವಾದಿ ಶರಣರ ತತ್ವಗಳನ್ನು ನಿರ್ದಿಷ್ಟ ರಾಜಕೀಯ ಅಥವಾ ಧಾರ್ಮಿಕ ಉದ್ದೇಶಗಳಿಗೆ ಬಳಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂಬ ಶಂಕೆಯನ್ನೂ ವ್ಯಕ್ತಪಡಿಸಲಾಗಿದೆ. ಇದು ಶರಣರ ಪರಂಪರೆಯ ಗೌರವಕ್ಕೆ ಧಕ್ಕೆ ತರುವುದಲ್ಲದೆ, ಅವರ ಚಿಂತನೆಗಳನ್ನು ವಿಕೃತಗೊಳಿಸುವ ಅಪಾಯವಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಮುಖ್ಯ ಕರ್ತವ್ಯವಾಗಿರುವ ಹಿನ್ನಲೆಯಲ್ಲಿ, ಈ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಅಥವಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಅಗತ್ಯವಿದ್ದಲ್ಲಿ, ಸಂಬಂಧಿತ ಅಧಿಕಾರಿಗಳು ಕಾರ್ಯಕ್ರಮದ ಸ್ವರೂಪವನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.
‘ರಾಜ್ಯ ಸರ್ಕಾರವು ಜಗಜ್ಯೋತಿ ಬಸವಣ್ಣ ಅವರನ್ನು ನಾಡಿನ ಸಾಂಸ್ಕೃತಿಕ ನಾಯಕನಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ, ಅವರ ತತ್ವಗಳು ಮತ್ತು ಆದರ್ಶಗಳ ಗೌರವವನ್ನು ಸಂರಕ್ಷಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಸಂಘಟನೆ ತಿಳಿಸಿದೆ. ಬಸವಣ್ಣನವರ ಸಂದೇಶಗಳು ಸಮಾನತೆ ಮತ್ತು ಮಾನವೀಯತೆ ಆಧಾರಿತವಾಗಿದ್ದು, ಅವುಗಳನ್ನು ಯಾವುದೇ ರೀತಿಯ ಸಂಕುಚಿತ ಚೌಕಟ್ಟಿನಲ್ಲಿ ಬಂಧಿಸಬಾರದು’ ಎಂದು ಮನವಿ ಎಚ್ಚರಿಸಿದರು.
ಈ ಹಿನ್ನೆಲೆಯಲ್ಲಿ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆ ಕಾಪಾಡುವ ದೃಷ್ಟಿಯಿಂದ ಸರ್ಕಾರ ತಕ್ಷಣವೇ ಈ ವಿಷಯದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸೌಹಾರ್ದ ಕರ್ನಾಟಕವು ಆಗ್ರಹಿಸಿದೆ.
ಇದನ್ನು ಓದಿದ್ದೀರಾ? ಕಲಬುರಗಿ ನೂತನ ಜಿಲ್ಲಾಧಿಕಾರಿಯಾಗಿ ಮೊಹಮ್ಮದ್ ಇಕ್ರಮುಲ್ಲಾ ಶರೀಫ್ ನೇಮಕ
ಈ ಸಂದರ್ಭದಲ್ಲಿ ಸೌಹಾರ್ದ ಕರ್ನಾಟಕ ಮುಖಂಡರಾದ ಕೆ ನೀಲಾ, ಡಾ. ಮೀನಾಕ್ಷಿ ಬಾಳಿ, ಪ್ರೊ ಆರ್ ಕೆ ಹುಡಗಿ, ಚನ್ನಪ್ಪ ಆನೇಗುಂದಿ, ಮರೆಪ್ಪ ಚಟ್ಟೇಕರ್, ಆರ್ ಜೆ ಶಟ್ಟಗಾರ್, ಇಮಾಮ್ಮಸಾಬ್ ನದಾಫ್, ಬಸವರಾಜ, ಮಲ್ಲು ಬಳಿಚಕ್ರ, ಬಸಲಿಂಗಮ್ಮ ನಟೇಕರ್, ಮಲ್ಲಪ್ಪ ಹೊಸಕೇರಿ, ಶಿವಣ್ಣ ಇಜೇರಿ, ಅನಿತ ಹಿರೆಮಠ, ಪ್ರಕಾರ ದೊರೆ, ಎಸ್ ಎಮ್ ಸಾಗರ್, ತಮ್ಮಣ್ಣ ಜಹಾಗಿರದಾರ್, ಭೀಮಣ್ಣ, ಗಿರೆಪ್ಪಗೌಡ ಪಾಟೀಲ ಸೇರಿದಂತೆ ಇನ್ನಿತರರು ಇದ್ದರು.




