ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಕೇರಳದ ನ್ಯಾಯಾಲಯವು, ರಾಜ್ಯದ ಮಾಜಿ ಪೊಲೀಸ್ ಮಹಾನಿರ್ದೇಶಕಿ ಆರ್ ಶ್ರೀಲೇಖಾ ಅವರಿಗೆ ನೋಟಿಸ್ ಜಾರಿಗೊಳಿಸಿದೆ.
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಪಿ. ಶ್ರೀಕುಮಾರ್ ಅವರು ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ದೂರಿನ ವಿಚಾರಣೆ ನಡೆಸಿದ ಮಾವೇಲಿಕ್ಕರದ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಸೂರ್ಯ ಎಸ್. ಸುಕುಮಾರನ್ ಅವರು ನವೆಂಬರ್ 10 ರಂದು ನೋಟೀಸ್ ಜಾರಿಗೊಳಿಸಿದ್ದಾರೆ.
ಅಕ್ಟೋಬರ್ 14 ರಂದು ಪುನಲೂರಿನಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಸಭೆಯಲ್ಲಿ ಆರ್. ಶ್ರೀಲೇಖಾ ಅವರು ಮಾಡಿದ್ದ ಭಾಷಣವೇ ಈ ಪ್ರಕರಣಕ್ಕೆ ಕಾರಣವಾಗಿದೆ.
ರಾಹುಲ್ ಗಾಂಧಿ ಮಾದಕವಸ್ತು ಸೇವಿಸಿದ್ದಾರೆ ಎಂಬ ಆರೋಪ
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಬೆಂಬಲ ವ್ಯಕ್ತಪಡಿಸಲು ಬಿಜೆಪಿಯ ಕೊಲ್ಲಂ ಪೂರ್ವ ಜಿಲ್ಲಾ ಸಮಿತಿ ಸಭೆಯನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಲೇಖಾ ಅವರು ದೆಹಲಿಯಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ರಾಹುಲ್ ಗಾಂಧಿಯವರ ವರ್ತನೆಯನ್ನು ಮಾದಕವಸ್ತು ಸೇವನೆಯೊಂದಿಗೆ ತಳುಕು ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
“ದೆಹಲಿಯಲ್ಲಿ ನಡೆದ SIR ವಿರುದ್ಧದ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿಯವರ ವರ್ತನೆಯು ಮಾದಕವಸ್ತುಗಳ ತೀವ್ರ ಪ್ರಭಾವಕ್ಕೆ ಒಳಗಾದ ವ್ಯಕ್ತಿಯ ವರ್ತನೆಯಂತಿತ್ತು ಎಂದು ಶ್ರೀಲೇಖಾ ಅವರು ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪ ಮಾಡಿದ್ದಾರೆ” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಾಂಗ್ರೆಸ್ ಪಕ್ಷದ ಪ್ರತಿಷ್ಠೆಗೂ ಧಕ್ಕೆ : ದೂರುದಾರರ ಆರೋಪ
ಶ್ರೀಲೇಖ ಅವರ ಹೇಳಿಕೆಗಳು ವಿವಿಧ ದೂರದರ್ಶನ ವಾಹಿನಿಗಳು, ಡಿಜಿಟಲ್ ವೇದಿಕೆಗಳು ಹಾಗೂ ಪತ್ರಿಕೆಗಳಲ್ಲಿ ವ್ಯಾಪಕವಾಗಿ ಪ್ರಸಾರಗೊಂಡಿವೆ. ಇದರಿಂದ ಕಾಂಗ್ರೆಸ್ ಪಕ್ಷದ ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿದ್ದಾರೆ.
ಈ ಹೇಳಿಕೆಗಳು ರಾಹುಲ್ ಗಾಂಧಿಯವರ ಗೌರವ ಮತ್ತು ಪ್ರತಿಷ್ಠೆಗೆ ಹಾನಿ ಮಾಡುವ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಒಟ್ಟಾರೆ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶ ಹೊಂದಿದ್ದವು. ಅಲ್ಲದೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ಗೌರವಕ್ಕೂ ಹಾನಿ ಉಂಟುಮಾಡುವ ಉದ್ದೇಶದಿಂದ ಈ ಹೇಳಿಕೆಗಳನ್ನು ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಬೇಷರತ್ ಕ್ಷಮೆಯಾಚನೆಗೆ ಆಗ್ರಹಿಸಿ ಕಾನೂನು ನೋಟಿಸ್
ಅವಹೇಳನಕಾರಿ ಹೇಳಿಕೆ ಹಿನ್ನೆಲೆ ಅಕ್ಟೋಬರ್ 15ರಂದೇ ಶ್ರೀಲೇಖಾ ಅವರಿಗೆ ಸಾರ್ವಜನಿಕವಾಗಿ ಬೇಷರತ್ ಕ್ಷಮೆಯಾಚಿಸಬೇಕು, ತಮ್ಮ ಹೇಳಿಕೆಗಳನ್ನು ಹಿಂಪಡೆಯಬೇಕು ಹಾಗೂ ತಮಗೆ ಉಂಟಾಗಿರುವ ಮಾನಸಿಕ ವೇದನೆಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕಾನೂನು ನೋಟಿಸ್ ಕಳುಹಿಸಲಾಗಿತ್ತು ಎಂದು ಶ್ರೀಕುಮಾರ್ ತಿಳಿಸಿದ್ದಾರೆ.
ಈ ವಿಚಾರವಾಗಿ ಅಕ್ಟೋಬರ್ 20ರಂದು ಕ್ರಿಮಿನಲ್ ಮಾನನಷ್ಟ ದೂರು ದಾಖಲಿಸಲಾಗಿದೆ. ದೂರುದಾರ ಶ್ರೀಕುಮಾರ್ ಪರವಾಗಿ ವಕೀಲ ಶರಣ್ ಶಿವನ್ ನ್ಯಾಯಾಲಯದಲ್ಲಿ ಹಾಜರಿದ್ದರು. ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 2ಕ್ಕೆ ನಿಗದಿಪಡಿಸಲಾಗಿದೆ.




