ಉತ್ತರ ಪ್ರದೇಶದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR)ಯ ಆರಂಭಿಕ ಹಂತಗಳಲ್ಲಿ 16.18 ಲಕ್ಷ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಹೇಳಿರುವ ಭಾರತೀಯ ಚುನಾವಣಾ ಆಯೋಗ (ECI), ಅವರ ಗುರುತನ್ನು ಮರೆಮಾಚಿದೆ ಎಂದು The Reporters’ Collective ವರದಿ ಮಾಡಿದೆ.
ಕಾನೂನಿನ ಪ್ರಕಾರ ಸೇರ್ಪಡೆಗೊಳಿಸಲಾದ ಮತದಾರರ ಗುರುತನ್ನು ಬಹಿರಂಗಪಡಸುವುದು ಕಡ್ಡಾಯವಾಗಿದ್ದು , ಸ್ವತಃ ಚುನಾವಣಾ ಆಯೋಗವು ಕಾನೂನು ಉಲ್ಲಂಘಿಸಿರುವುದು ಬಹಿರಂಗವಾಗಿದೆ ಎಂದು ವರದಿ ತಿಳಿಸಿದೆ.
ಕಾನೂನಿನ ಪ್ರಕಾರ, ಚುನಾವಣಾ ಆಯೋಗವು ಮುಖ್ಯ ಚುನಾವಣಾಧಿಕಾರಿಯ (CEO) ವೆಬ್‌ಸೈಟ್‌ನಲ್ಲಿ “ಛಾಯಾಚಿತ್ರವಿಲ್ಲದೆ ವೈಯಕ್ತಿಕ ಅರ್ಜಿ ನಮೂನೆಯೊಂದಿಗೆ ಮತಗಟ್ಟೆವಾರು ಹಕ್ಕುಗಳು ಮತ್ತು ಆಕ್ಷೇಪಣೆಗಳ ಪಟ್ಟಿಯನ್ನು ಪ್ರಕಟಿಸಬೇಕು.
ಆದರೆ ಈ 16.18 ಲಕ್ಷ ಮತದಾರರ ಸೇರ್ಪಡೆ ಅರ್ಜಿಗಳ ಪಟ್ಟಿ ಮತ್ತು ವಿವರಗಳು ಉತ್ತರ ಪ್ರದೇಶ CEO ಅವರ ವೆಬ್‌ಸೈಟ್‌ನಲ್ಲಿ ಕಾಣಿಸುತ್ತಿಲ್ಲ ಎಂದು ವರದಿ ಬೊಟ್ಟುಮಾಡಿದೆ.
CEO ರಾಜ್ಯದ ಎಲ್ಲಾ ಚುನಾವಣಾ ಕಾರ್ಯಗಳ ಜವಾಬ್ದಾರಿ ಹೊಂದಿರುವ ಚುನಾವಣಾ ಆಯೋಗದ ಉನ್ನತ ಅಧಿಕಾರಿ ಮತ್ತು ನವದೆಹಲಿಯಲ್ಲಿರುವ ಆಯೋಗಕ್ಕೆ ನೇರವಾಗಿ ವರದಿ ಮಾಡುತ್ತಾರೆ.
ಮುಂಬರುವ ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತಿರುವ ಭಾರತದ ಅತಿ ಹೆಚ್ಚು ಜನಸಂಖ್ಯೆಯ ರಾಜ್ಯದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ವಿಶ್ಲೇಷಿಸುವಾಗ ದಿ ರಿಪೋರ್ಟರ್ಸ್’ ಕಲೆಕ್ಟಿವ್ ಈ ಕಾನೂನು ಉಲ್ಲಂಘನೆಯನ್ನು ಪತ್ತೆಹಚ್ಚಿದೆ.
ಸ್ವತಂತ್ರ ತಂತ್ರಜ್ಞಾನ ತಜ್ಞರ ಸಹಾಯದಿಂದ, ಉತ್ತರ ಪ್ರದೇಶ CEO ಸಾರ್ವಜನಿಕಗೊಳಿಸಿದ್ದ ಎಲ್ಲಾ ಫಾರ್ಮ್ 6 ಅರ್ಜಿಗಳನ್ನು ವಿಭಜಿತ ರೂಪದಲ್ಲಿ ಡೌನ್‌ಲೋಡ್ ಮಾಡಿ, ಒಟ್ಟುಗೂಡಿಸಿ ವಿಶ್ಲೇಷಿಸಿದಾಗ ಹೊಸ ವಿಚಾರವೊಂದು ಬೆಳಕಿಗೆ ಬಂದಿದೆ.
ECI ಒಟ್ಟು 71.38 ಲಕ್ಷ ಜನರು ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಸಲ್ಲಿಸಿದ್ದ ಅರ್ಜಿಗಳ ವಿವರಗಳನ್ನು ಪ್ರಕಟಿಸಿರುವುದು ಕಂಡಉಬಂದಿದೆ. ಇವರಲ್ಲಿ ಹೆಚ್ಚಿನವರು ECI ಕರಡು ಪಟ್ಟಿಯಿಂದ ಅಳಿಸಲ್ಪಟ್ಟವರು.
ಇದಕ್ಕೆ ವಿರುದ್ಧವಾಗಿ, ECI ಅಂತಿಮ ಪಟ್ಟಿಗೆ 84.3 ಲಕ್ಷ ಮತದಾರರನ್ನು ಸೇರಿಸಿದೆ. ಅಂದರೆ, ECI ವಿವರಗಳನ್ನು ಪ್ರಕಟಿಸಿರುವ ಅರ್ಜಿದಾರರಿಗಿಂತ 12.92 ಲಕ್ಷ ಹೆಚ್ಚು ಮತದಾರರನ್ನು ಸೇರಿಸಲಾಗಿದೆ.
ಇದು ಕಾನೂನುಬದ್ಧವಾಗಿ ಅಸಾಧ್ಯ. ECI ಫಾರ್ಮ್ 6 ಮೂಲಕ ಅರ್ಜಿ ಸಲ್ಲಿಸಿದಾಗ ಮಾತ್ರ ಮತದಾರರನ್ನು ಪಟ್ಟಿಗೆ ಸೇರಿಸಬಹುದು. ಸೇರ್ಪಡೆಗಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆಯನ್ನು ಮೀರಿ ಮತದಾರರ ಪಟ್ಟಿಗೆ ಜನರನ್ನು ಸೇರಿಸಲು ಸಾಧ್ಯವಿಲ್ಲ ಎಂದು ತನಿಖಾ ವರದಿಯು ತಿಳಿಸಿದೆ.
ಕರಡು ಪಟ್ಟಿಯಿಂದ ಮತದಾರರನ್ನು ಅಳಿಸಲು ECIಗೆ ಕೆಲವು ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದವು ಎಂಬುದನ್ನು ಪರಿಗಣಿಸಿದರೆ, ಈ ಹೆಚ್ಚುವರಿ ಮತದಾರರ ಸೇರ್ಪಡೆ ಅನುಮಾನಕ್ಕೆ ಇಂಬು ನೀಡುತ್ತದೆ ಎಂದು ವರದಿಯು ವಿಶ್ಲೇಷಿಸಿದೆ.
ಮಾರ್ಚ್ 7ರಂದು ಹೊರಡಿಸಿದ ಪತ್ರಿಕಾ ಪ್ರಕಟಣೆಯೊಂದರಲ್ಲಿ, ಕರಡು ಪಟ್ಟಿಯನ್ನು ಸಿದ್ಧಪಡಿಸುವುದಕ್ಕೂ ಮುನ್ನವೇ 16.18 ಲಕ್ಷ ಮತದಾರರು ಪಟ್ಟಿಗೆ ಸೇರಿಸಲು ಅರ್ಜಿ ಸಲ್ಲಿಸಿದ್ದರು ಎಂದು ECI ಒಮ್ಮೆ ಸಂಕ್ಷಿಪ್ತವಾಗಿ ಉಲ್ಲೇಖಿಸಿರುವುದು ಕಂಡುಬಂದಿದೆ.
SIR ಅಡಿಯಲ್ಲಿ ಕರಡು ಪಟ್ಟಿಯನ್ನು ಸಿದ್ಧಪಡಿಸಿದ ನಂತರವೇ, ತಮ್ಮ ಹೆಸರುಗಳನ್ನು ತೆಗೆದುಹಾಕಲಾಗಿದೆಯೇ, ಕಾಣೆಯಾಗಿದೆಯೆಂದು, ಮೃತಪಟ್ಟಿದ್ದಾರೆಂದು, ಸ್ಥಳಾಂತರಗೊಂಡಿದ್ದಾರೆಂದು ಅಥವಾ ನಕಲಿ ಎಂದು ಘೋಷಿಸಲಾಗಿದೆಯೇ ಎಂಬುದು ಜನರಿಗೆ ತಿಳಿಯುತ್ತದೆ. ಆದರೆ, ಈ ಕರಡು ಪಟ್ಟಿ ಸಾರ್ವಜನಿಕಗೊಳ್ಳುವ ಮೊದಲೇ 16.18 ಲಕ್ಷ ಮತದಾರರು ಫಾರ್ಮ್ 6 ಮೂಲಕ ಅರ್ಜಿ ಸಲ್ಲಿಸಿದ್ದರು ಎಂದು ECI ಹೇಳಿದೆ.
ಈ ಹಂತದಲ್ಲಿ ಅರ್ಜಿ ಸಲ್ಲಿಸುವವರು ಮತದಾನದ ವಯಸ್ಸಿಗೆ ತಲುಪಿದ ನಾಗರಿಕರೇ ಆಗಿರಬಹುದು.
ಕಾನೂನಿನ ಪ್ರಕಾರ, ಸೇರ್ಪಡೆ ಅಥವಾ ಅಳಿಸುವಿಕೆಗಾಗಿ ಅರ್ಜಿ ಸಲ್ಲಿಸುವವರ ಹೆಸರುಗಳು ಮತ್ತು ವಿವರಗಳನ್ನು ಸಾರ್ವಜನಿಕಗೊಳಿಸಬೇಕು. ಇದರಿಂದ ಇತರರು ಆ ಅರ್ಜಿ ನ್ಯಾಯಸಮ್ಮತವೇ ಮತ್ತು ಅದನ್ನು ಹೇಗೆ ಪರಿಗಣಿಸಲಾಗಿದೆ ಎಂಬುದನ್ನು ಪರಿಶೀಲಿಸಬಹುದು.
ಉತ್ತರ ಪ್ರದೇಶದ ಚುನಾವಣಾ ಅಧಿಕಾರಿಗಳು ಈ ಮಾಹಿತಿಯನ್ನು ಒದಗಿಸಲು ವಿಫಲವಾದ ಕಾರಣ, ಈ ಮತದಾರರು ಯಾರು, ಅವರನ್ನು ಯಾವ ವಿಧಾನಸಭಾ ಕ್ಷೇತ್ರಗಳು ಅಥವಾ ಮತಗಟ್ಟೆಗಳಿಗೆ ಸೇರಿಸಲಾಗಿದೆ, ಅಥವಾ ರಾಜ್ಯವು ಅವರ ಅರ್ಹತೆಯನ್ನು ನಿಜವಾಗಿಯೂ ಪರಿಶೀಲಿಸಿತೇ ಎಂಬುದನ್ನು ಈ ಹಂತದಲ್ಲಿ ನಿರ್ಧರಿಸಲು ಸಾಧ್ಯವಿಲ್ಲ ಎಂದು ವರದಿ ತಿಳಿಸಿದೆ.
ಈ ಬಗ್ಗೆ ಉತ್ತರ ಪ್ರದೇಶ CEO ನವದೀಪ್ ರಿನ್ವಾ ರನ್ನು ಸಂಪರ್ಕಿಸಿ ಪ್ರತಿಕ್ರಿಯೆ ಕೇಳಿದಾಗ , “ನಿಮ್ಮ ಅನುಮಾನಗಳು ಅಥವಾ ಪ್ರಶ್ನೆಗಳನ್ನು ಪರಿಹರಿಸಲು ನಾವು ಸಲಹಾ ಸೇವೆಗಳನ್ನು ನೀಡುವುದಿಲ್ಲ” ಎಂದು ಅವರು ಹೇಳಿರುವುದಾಗಿ The Reporters’ Collective ತಿಳಿಸಿದೆ.




