ಭಾರತದಲ್ಲಿ ಕಸ್ಟಡಿ ಸಾವುಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಪೊಲೀಸ್ ಕಸ್ಟಡಿಯಲ್ಲಿದ್ದವರು ಸಾವನ್ನಪ್ಪುತ್ತಿರುವ ಕುರಿತಾದ ಆತಂಕಕಾರಿ ಅಂಕಿಅಂಶವನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಬಹಿರಂಗ ಪಡಿಸಿದೆ. 2026ರ ಜನವರಿ 1 ರಿಂದ ಮಾರ್ಚ್ 15ರವರೆಗಿನ ಕೇವಲ 74 ದಿನಗಳಲ್ಲಿ ದೇಶಾದ್ಯಂತ ಒಟ್ಟು 170 ಕಸ್ಟಡಿ ಸಾವುಗಳು ಸಂಭವಿಸಿವೆ ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಸಂಗ್ರಹಿಸಿದ ರಾಜ್ಯವಾರು ಅಂಕಿಅಂಶಗಳ ಆಧಾರದ ಮೇಲೆ ಈ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಕಸ್ಟಡಿ ಸಾವುಗಳ ಸಂಖ್ಯೆ ಇಳಿಕೆಯಾಗಿದ್ದರೂ, ಈ ವರ್ಷ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂಬುದನ್ನು ದತ್ತಾಂಶ ವಿವರಿಸಿದೆ.
ಗೃಹ ಸಚಿವಾಲಯದ ಮಾಹಿತಿ ಪ್ರಕಾರ, 2021-22ರಲ್ಲಿ 176 ಪ್ರಕರಣಗಳು, 2022-23ರಲ್ಲಿ 163 ಪ್ರಕರಣಗಳು, 2023-24ರಲ್ಲಿ 157 ಪ್ರಕರಣಗಳು ಹಾಗೂ 2024-25ರಲ್ಲಿ 140 ಪ್ರಕರಣಗಳು ವರದಿಯಾಗಿವೆ. ಈ ವರ್ಷ ಕೇವಲ 5 ದಿನಗಳಲ್ಲಿಯೇ 170 ಕಸ್ಟಡಿ ಸಾವುಗಳು ವರದಿಯಾಗಿವೆ. ಇದು, 2021-22ರ ಇಡೀ ವರ್ಷದಲ್ಲಿ ದಾಖಲಾಗಿದ್ದ ಅಧಿಕ ಸಂಖ್ಯೆಯನ್ನು ದಾಟಿರುವುದು ಕಳವಳ ಮೂಡಿಸಿದೆ.
ವರದಿಯ ಪ್ರಕಾರ, ಉತ್ತರ ಭಾರತದ ರಾಜ್ಯಗಳಲ್ಲಿ ಅತಿ ಹೆಚ್ಚು ಕಸ್ಟಡಿ ಸಾವುಗಳು ಸಂಭವಿಸಿವೆ. ಬಿಹಾರ (19), ರಾಜಸ್ಥಾನ (18), ಉತ್ತರ ಪ್ರದೇಶ (15), ಗುಜರಾತ್, ಮಹಾರಾಷ್ಟ್ರ ಮತ್ತು ಪಂಜಾಬ್‌ಗಳಲ್ಲಿ ತಲಾ 14 ಪ್ರಕರಣಗಳು ದಾಖಲಾಗಿವೆ. ತಮಿಳುನಾಡು (7), ತೆಲಂಗಾಣ (5) ಹಾಗೂ ಕರ್ನಾಟಕ ಮತ್ತು ಕೇರಳದಲ್ಲಿ ತಲಾ 3 ಪ್ರಕರಣಗಳು ವರದಿಯಾಗಿವೆ.
ಮಾನವ ಹಕ್ಕುಗಳ ವರದಿಗಳ ಪ್ರಕಾರ, ಕಸ್ಟಡಿ ಹಿಂಸೆ ಮತ್ತು ಸಾವುಗಳಿಗೆ ಬಲಿಯಾಗುವವರಲ್ಲಿ ದಲಿತರು, ಆದಿವಾಸಿಗಳು, ಮುಸ್ಲಿಮರು ಹಾಗೂ ಆರ್ಥಿಕವಾಗಿ ಹಿಂದುಳಿದವರ ಸಂಖ್ಯೆಯೇ ಹೆಚ್ಚಿದೆ. ಲಂಚ ನೀಡಲು ಅಥವಾ ಜಾಮೀನು ಪಡೆಯಲು ಹಣದ ಕೊರತೆ, ಕೆಲವು ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸಿಕೊಂಡು ನಡೆಸುವ ಪೊಲೀಸ್ ವ್ಯವಸ್ಥೆ ಹಾಗೂ ಸರಿಯಾದ ಕಾನೂನು ಸಲಹೆ ಅಥವಾ ಮಾಧ್ಯಮಗಳ ಗಮನ ಸಿಗದಿರುವುದು ಕಾರಣವೆಂದು ಮಾನವ ಹಕ್ಕು ಆಯೋಗ ಹೇಳಿದೆ.
ಈ ಲೇಖನ ಓದಿದ್ದೀರಾ?: ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!
‘ಇಂಡಿಯಾ ಫ್ಯಾಕ್ಟ್‌ಶೀಟ್’ ವರದಿಯ ಪ್ರಕಾರ, ಪೊಲೀಸರು ಹಲವರನ್ನು ಬಂಧಿಸಿ, ತಪ್ಪೊಪ್ಪಿಕೊಳ್ಳುವಂತೆ ಬಲವಂತ ಮಾಡಿ, ಹೊಡೆಯುವುದು ಮತ್ತು ಬೆದರಿಕೆ ಹಾಕುವಂತಹ ಕಾನೂನುಬಾಹಿರ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಈ ಕೃತ್ಯಗಳಿಗೆ ಸರ್ಕಾರಿ ಕಚೇರಿಗಳು ಅಥವಾ ಹೋಟೆಲ್ ಕೊಠಡಿಗಳಂತಹ ಅನಧಿಕೃತ ಸ್ಥಳಗಳನ್ನು ಬಳಸುತ್ತಿದ್ದಾರೆ.
ಫೆಬ್ರವರಿಯಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರು ಕಸ್ಟಡಿ ಸಾವುಗಳ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಭಾರತ ಸರ್ಕಾರವು ಈ ‘ಆತಂಕಕಾರಿ ಆರೋಪಗಳ’ ಬಗ್ಗೆ ತಕ್ಷಣವೇ ಸ್ವತಂತ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು. ಪೊಲೀಸ್ ವ್ಯವಸ್ಥೆಯನ್ನು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಮಾನದಂಡಗಳಿಗೆ ಅನುಗುಣವಾಗಿ ಸುಧಾರಿಸುವಂತೆಯೂ ಶಿಫಾರಸು ಮಾಡಿದ್ದರು. ಆದಾಗ್ಯೂ, ಕೇಂದ್ರ ಸರ್ಕಾರವು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂಬುದು ಕಳವಳಕಾರಿ ಸಂಗತಿ.



